ADVERTISEMENT

ಕಡೂರು: ಕೇಂದ್ರ ಸರ್ಕಾರ ವಿರುದ್ಧ ಎಬಿವಿಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 19:30 IST
Last Updated 26 ಮಾರ್ಚ್ 2011, 19:30 IST
ಕಡೂರು: ಕೇಂದ್ರ ಸರ್ಕಾರ ವಿರುದ್ಧ ಎಬಿವಿಪಿ ಪ್ರತಿಭಟನೆ
ಕಡೂರು: ಕೇಂದ್ರ ಸರ್ಕಾರ ವಿರುದ್ಧ ಎಬಿವಿಪಿ ಪ್ರತಿಭಟನೆ   

ಕಡೂರು: ಭ್ರಷ್ಟಾಚಾರದಲ್ಲಿ ತೊಡಗಿರುವ ಕೇಂದ್ರ ಸರ್ಕಾರವನ್ನು ಖಂಡಿಸಿದ ಎಬಿವಿಪಿ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ನಂತರ ತಹಸೀಲ್ದಾರ್ ಅವರಿಗೆ ಖಂಡನಾಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ತಾಲ್ಲೂಕು ಪ್ರಮುಖ್ ವಸಂತನಾಯ್ಕಾ ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಕೆಎಲ್‌ವಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ದೇಶದ ಅಧಿಕಾರ ಹಿಡಿದಿರುವ ಯುಪಿಎ ಸರ್ಕಾರ ಹಗರಣಗಳ ಸರಮಾಲೆಯಲ್ಲೇ ಮುಳುಗಿದೆ. ಕೋಟಿಗಟ್ಟಲೆ ಹಣವನ್ನು ಸಚಿವರು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು, ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪುಹಣವನ್ನು ರಾಷ್ಟ್ರೀಯ ಹಣ ಎಂದು ಪ್ರಧಾನಿ ಘೋಷಿಸಬೇಕು ಎಂದು ಆಗ್ರಹಿಸಿದರು. ಎಸ್ ಬ್ಯಾಂಡ್, 2ಜಿ ಸ್ಪೆಕ್ಟ್ರಂ, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕೋಟ್ಯಂತರ ಅವ್ಯವಹಾರವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗೆ ನೀಡಬೇಕಾದ ಮನೆಗಳನ್ನು ರಾಜಕಾರಣಿಗಳು ತಮ್ಮ ಅಧಿಕಾರಿಗಳಿಗೆ ಮನಬಂದಂತೆ ಹಂಚಿಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಆದರ್ಶ ಅಪಾರ್ಟ್‌ಮೆಂಟ್ ಮತ್ತು ಬಡವರಿಗೆ ಅಕ್ಕಿ ವಿತರಣೆಯಲ್ಲಾದ ಹಗರಣ ಕುರಿತು ಪ್ರಧಾನಿ ಸಿಂಗ್ ಮೌನ ವಹಿಸಿದ್ದಾರೆ. ಈ ಎಲ್ಲದಕ್ಕೂ ಕಾರಣರಾಗಿರುವ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದರೆ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಹಗರಣಗಳ ಕೇಂದ್ರ ಬಿಂದುವಾಗಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಮ್ಮ ಪಾಲು ಎಷ್ಟು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ ಎಂದು ಆಗ್ರಹಿಸಿದರು. ಕಾರ್ಯಕರ್ತರಾದ ಧನಂಜಯ, ಭರತ್,ಅನಿಲ್ ಮತ್ತು ಪ್ರಶಾಂತ್ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.