ADVERTISEMENT

ಕಡೂರು: ಜನಗಣತಿಗೆ 29 ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:35 IST
Last Updated 12 ಫೆಬ್ರುವರಿ 2011, 8:35 IST

ಚಿಕ್ಕಮಗಳೂರು: ಜನಗಣತಿ ಕಾರ್ಯಕ್ಕೆ ಜಿಲ್ಲೆಯ ವಿವಿಧ ಭಾಗದಲ್ಲಿ ಬುಧವಾರದಿಂದ ಚಾಲನೆ ದೊರೆತಿದೆ. ಗಣತಿ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ನಿವಾಸಿಗಳ ಮಾಹಿತಿ ಪಡೆಯುವಲ್ಲಿ ತೊಡಗಿದ್ದಾರೆ.

ಕಡೂರು ವರದಿ
ಕಡೂರು:
2011 ನೇ ಸಾಲಿನ ಜನಗಣತಿ ಕಾರ್ಯವನ್ನು ಫೆ.9 ರಿಂದ ತಾಲ್ಲೂಕಿನಾದ್ಯಂತ ಪ್ರಾರಂಭಿಸಿದ್ದು, ಸಾರ್ವಜನಿಕರು ಗಣತಿದಾರರು ತಮ್ಮ ಬಳಿ ಬಂದಾಗ ತಪ್ಪದೇ ಅವರು ಕೇಳುವ 29 ಪ್ರಶ್ನೆಗಳಿಗೆ ಮಾಹಿತಿ ನೀಡಬೇಕೆಂದು ತಹಸೀಲ್ದಾರ್ ಬಿ.ಆರ್.ರೂಪ ಮನವಿ ಮಾಡಿದರು. ತಾಲ್ಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ಬುಧವಾರ ಜನಗಣತಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ದೇಶದ ಜನಸಂಖ್ಯೆ ಅರಿಯಲು,ಪಂಚ ವಾರ್ಷಿಕ ಹಾಗೂ ವಾರ್ಷಿಕ ಯೋಜನೆಗಳು, ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜನಗಣತಿ ಆರಂಭಿಸಲಾಗಿದೆ ಎಂದರು. 
ಜಿಲ್ಲಾ ಜನಗಣತಿ ನೊಡಲ್ ಅಧಿಕಾರಿ ಟಿ.ಸಿದ್ದಗಂಗಯ್ಯ, ತಾ.ನೊಡಲ್ ಅಧಿಕಾರಿ ಶೈಲಜಾ, ಉಪ ತಹಸೀಲ್ದಾರ್ ತಿಮ್ಮಾಬೋವಿ, ಮೇಲ್ವಿಚಾರಕರು,ಕಂದಾಯ ಇಲಾಖೆಯ ಅಧಿಕಾರಿ, ಶಿಕ್ಷಕರು ಇದ್ದರು.    

ಶಾಸಕರ ಮನೆಯಿಂದ ಚಾಲನೆ
ನರಸಿಂಹರಾಜಪುರ:
ತಾಲ್ಲೂಕಿನ ವ್ಯಾಪ್ತಿಯಲ್ಲಿ ದ್ವಾರಮಕ್ಕಿ ಗ್ರಾಮದಲ್ಲಿರುವ ಶಾಸಕ ಡಿ.ಎನ್.ಜೀವರಾಜ್ ಅವರ ಮನೆಯಿಂದ ಬುಧವಾರ ಬೆಳಿಗ್ಗೆ 7ನೇ ಜನಗಣತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಶಾಸಕ ಡಿ.ಎನ್.ಜೀವರಾಜ್ ತಮ್ಮ ಕುಟುಂಬ ಸದಸ್ಯರ ಮಾಹಿತಿಯನ್ನು ನೀಡುವುದರ ಮೂಲಕ ಜನಗಣತಿ ಕಾರ್ಯಕ್ಕೆ ಚಾಲನೆ ನೀಡಿದರು.ಈ ಸಂದರ್ಭಲ್ಲಿ ತಹಸೀಲ್ದಾರ್ ಎಚ್.ಜಯ,ಆಹಾರ ನಿರೀಕ್ಷಕ ಕೆ.ಎ.ರಾಮಚಂದ್ರಶೆಟ್ಟಿ,ಜನಗಣತಿ ಮೇಲ್ವಿಚಾರಕ ಶಿಕ್ಷಕ ಬಿ.ಆರ್.ಭದ್ರೇಗೌಡ,ಗಣತಿ ವಿಷಯ ನಿರ್ವಾಹಕ ಎಚ್.ಎಸ್.ಸುರೇಶ್,ಗಣತಿದಾರ ಶಿಕ್ಷಕರಾದ ನಂಜುಂಡಪ್ಪ,ಮರುಳಸಿದ್ಧಪ್ಪ ಇದ್ದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದೇ 9ರಿಂದ 28ರವರೆಗೆ ಜನಗಣತಿ ನಡೆಯಲಿದೆ. ಮಾರ್ಚ್1ರಿಂದ 5ರವರೆಗೆ ಪುನರ್ ಸಂದರ್ಶನ ಅವಧಿಯಾಗಿದ್ದು ಈ ಸಂದರ್ಭದಲ್ಲಿ ಜನನ ಮರಣಗಳಾಗಿದ್ದರೆ ಅದನ್ನು ಗಣನೆಗೆ ತೆಗೆದು ಕೊಳ್ಳಲಾಗುತ್ತದೆ.ಜನಗಣತಿಗಾಗಿ ತಾಲ್ಲೂಕಿನ ವ್ಯಾಪ್ತಿಗೆ ಒಟ್ಟು 23 ಮೇಲ್ವಿಚಾರಕರು ಹಾಗೂ 126 ಗಣತಿದಾರರನ್ನು ನೇಮಕ ಮಾಡಲಾಗಿದೆ.

ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಜನವರಿ 27ರಿಂದ 29ರವರೆಗೆ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ ಗಣತಿದಾರರು ಮನೆ ಭಾಗಿಲಿಗೆ ಬಂದಾಗ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕಾಗಿ ತಹಸೀಲ್ದಾರ್ ಎಚ್.ಜಯ ವಿನಂತಿಸಿದ್ದಾರೆ.

ಶೃಂಗೇರಿ : ಜನಗಣತಿಗೆ ಚಾಲನೆ
ಶೃಂಗೇರಿ:
ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 2011ರ ಜನಗಣತಿ ಬುಧವಾರ ಬೆಳಿಗ್ಗೆ ವಿದ್ಯಾರಣ್ಯಪುರ ನಿವಾಸಿ ಶೃಂಗೇರಿ ಮಠದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್ ಅವರ ನಿವಾಸದಲ್ಲಿ ಆರಂಭವಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ. ಆರ್. ಜಗದೀಶ್ ಮಾತನಾಡಿ, ಜನಗಣತಿ ಕಾರ್ಯ  9ರಿಂದ 28ರವರೆಗೆ ಪ್ರಕ್ರಿಯೆ ನಡೆಯಲಿದೆ ಎಂದರು.
 ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್, ರಾಜಸ್ವ ನೀರೀಕ್ಷಕರಾದ ಎಂ. ಪಿ. ಕೃಷ್ಣಪ್ಪ, ಕೆ. ಎಸ್. ಶಿವರಾಂ, ಗ್ರಾಮ ಲೆಕ್ಕಿಗರಾದ ಮಧುಸೂಧನ್, ವಿಷಯ ನಿರ್ವಾಹಕರಾದ ರಘುಕುಮಾರ್  ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.