ಕಡೂರು: ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕಲ್ಲು ಕೋರೆ ಕಾರ್ಮಿಕರಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ನೂರಾರು ಕಾರ್ಮಿಕರು ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕಲ್ಲು ಒಡೆದು ಜೀವನ ಸಾಗಿಸು ತ್ತಿರುವ ಬಡ ಕೂಲಿ ಕಾರ್ಮಿಕರ ಅನ್ನಕ್ಕೆ ಕೈ ಹಾಕಿರುವುದರಿಂದ ಸಾವಿರಾರು ಜನರಿಗೆ ಉದ್ಯೋಗವಿಲ್ಲದೆ ಬೀದಿ ಪಾಲಾಗಿದ್ದು, ಜಿಲ್ಲಾಡಳಿತ ಕೂಡಲೇ ಕೋರೆಗಳಿಗೆ ತೆರಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ತಾಲ್ಲೂಕಿನ ಅನೇಕ ಗ್ರಾಮಗಳ ಹಾಗೂ ಪಟ್ಟಣದ ಎಲ್‌ಐಸಿ ಹಿಂಭಾಗದಲ್ಲಿ ವಾಸಿಸುವ ಕಾರ್ಮಿಕರು ಬುಧವಾರ ಮುತ್ತಿಮಾರಿ ಅಮ್ಮನ ದೇವಾಲಯಕ್ಕೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಅಲ್ಲದೇ ಜಿಲ್ಲಾಧಿಕಾರಿ ಮತ್ತು ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕೋರೆ ಕಾರ್ಮಿಕ ಮುಖಂಡ ಗೋಪಿ ಮಾತನಾಡಿ `ಸುಮಾರು 60 ವರ್ಷಗಳಿಂದ ಮಲ್ಲೇಶ್ವರ,ತುರುವನಹಳ್ಳಿ ಹಾಗೂ ಅಕ್ಕ ಪಕ್ಕದ ಕೋರೆಗಳಲ್ಲಿ ಕಟ್ಟಡಗಳಿಗೆ ಕಲ್ಲು ಮತ್ತು ಚಪ್ಪಡಿ ಒಡೆದುಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಇಂದು ಅರಣ್ಯ ಇಲಾಖೆಯವರು ನೀಡುತ್ತಿರುವ ಕಿರುಕುಳದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ಸಾಗಿಸುವುದೇ ದುಸ್ತರವಾಗಿದೆ~ ಎಂದರು.
ಬಿಜೆಪಿಯ ತಾಲ್ಲೂಕು ಉಪಾಧ್ಯಕ್ಷ ಎ.ಮಣಿ ಮಾತನಾಡಿ ಕಾರ್ಮಿಕರು ಅನೇಕ ವರ್ಷಗಳಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಿಗೆ ನೀಡಿದ್ದು, ಸರ್ಕಾರಕ್ಕೆ ರಾಜಧನ ಸಹ ಪಾವತಿಸಿ ಇದುವೆರೆವಿಗೂ ಇದುವರೆವಿಗೂ ನಡೆದುಕೊಂಡು ಬಂದಿದೆ. ಈಗ ಜಿಲ್ಲಾಧಿಕಾರಿ ಏಕಾಎಕಿ ಕಂದಾಯ ಗೋಮಾಳವನ್ನು ಅರಣ್ಯ ಇಲಾಖೆಗೆ ಸೇರಿಸಿದ್ದರಿಂದ ಕಾರ್ಮಿಕರು ಕೋರೆಗಳಿಗೆ ತೆರಳಿದರೆ ಅರಣ್ಯಾಧಿಕಾರಿಗಳು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಲಸವನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಮಾತನಾಡಿ ತಾಲ್ಲೂಕಿನಲ್ಲಿ ಆಡಳಿತ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ ಏಕೆಂದರೆ ಶ್ರೀಮಂತರಿಗೆ ಒಂದು ನ್ಯಾಯ ಬಡವರಿಗೆ ಒಂದು ನ್ಯಾಯವಾಗಿದೆ ಎಂದರು. ಹಣ,ರಾಜಕೀಯ ಬಲದಿಂದ ಕೆಲವರು ಕಲ್ಲು ಗಣಿಗಾರಿಕೆಯನ್ನು ನಡೆಸುತ್ತಿದ್ದು, ಅಂತಹವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಆಡಳಿತ ಬಡವರು ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ತಾಲ್ಲೂಕಿನ ಕಾಂಗ್ರೆಸ್,ಜೆಡಿಎಸ್ ಮತ್ತರು ಬಿಜೆಪಿ ಪಕ್ಷಗಳ ಮುಖಂಡರು ಕಾರ್ಯಕರ್ತರು ಕೋರೆ ಕೂಲಿ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡರಾದ ಭಂಡಾರಿಶ್ರೀನಿವಾಸ್,ವಾಸು,ಲಕ್ಕಣ್ಣ, ಬಿಜೆಪಿಯ ಕಾರ್ಯದರ್ಶಿ ಶಿವಶಂಕರ್,ತಂಗಲಿ ತಾ.ಪಂ.ಸದಸ್ಯ ಶಿವಕುಮಾರ್, ಬಿಜೆಪಿ ಉಪಾಧ್ಯಕ್ಷ ಎ.ಮಣಿ, ಕಾಂಗ್ರೆಸ್ ಮುಖಂಡರಾದ ಕೆಂಪರಾಜು, ಈರಣ್ಣ ಪುರಸಭೆ ಸದಸ್ಯರಾದ ಕೆ.ಜಿ.ಲೋಕೇಶ್, ಚಿನ್ನರಾಜು (ರಾಜಗೋಪಾಲ್)ಬೀರೂರು ಮಾಲು ಸ್ಲೀಪರ್ ಮಾಲೀಕ ಒಡೆಯರ್ ಕಡೂರು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಾಸಕ ಡಾ.ವೈ.ಸಿ.ವಿಶ್ವನಾಥ್ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಆಲಿಸಿ ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸು ವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.