ADVERTISEMENT

ಕಾಂಗ್ರೆಸ್‌ ಕೊಡುಗೆ ತಿಳಿಸಿ, ಮತಯಾಚಿಸಿ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ– ಸಿ.ಟಿ ರವಿ ಸವಾಲು

​ಪ್ರಜಾವಾಣಿ ವಾರ್ತೆ
Published 8 ಮೇ 2018, 10:21 IST
Last Updated 8 ಮೇ 2018, 10:21 IST

ಚಿಕ್ಕಮಗಳೂರು: ‘ಕ್ಷೇತ್ರ ದಲ್ಲಿ ಐದು ವರ್ಷಗಳ ಕಾಮಗಾರಿಗಳಿಗೆ  ಸಂಬಂಧಿಸಿದಂತೆ ‘ಉದಯ ರವಿ’ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದೇನೆ, ಕಳೆದ ಬಾರಿ ‘ರವಿ ಕಿರಣ’ ಪ್ರಕಟಿಸಿದ್ದೆ. ಕಾಂಗ್ರೆಸ್ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ಕೊಡುಗೆ ಏನು ಎಂಬ ‘ಸಾಧನ ಪತ್ರ’ ತೋರಿಸಿ ಕಾಂಗ್ರೆಸ್‌ ಮುಖಂಡರು ಮತಯಾಚಿಸಬೇಕು’ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

‘ಐದು ವರ್ಷ ಏನು ಮಾಡಿದ್ದೇನೆ ಎಂಬುದನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿದ್ದೇನೆ. ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಯಾವ ಯೋಜನೆ ತಂದಿದ್ದೇವೆ, ಏನು ಕೆಲಸ ಮಾಡಿದ್ದೇವೆ ಎಂಬುದನ್ನು ಕಾಂಗ್ರೆಸ್‌ ಮುಖಂಡರು ಜನರಿಗೆ ತಿಳಿಸಬೇಕು. ಜಿಲ್ಲಾಸ್ಪತ್ರೆ ಯಾಕೆ ಮೇಲ್ದರ್ಜೆಗೇರಿಸಲಿಲ್ಲ, ವೈದ್ಯಕೀಯ ಕಾಲೇಜು ಆರಂಭಕ್ಕೆ ಯಾಕೆ ಪ್ರಯತ್ನ ಮಾಡಿಲ್ಲ. ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ನನೆಗುದಿಗೆ ಬಿದ್ದಾಗ ಯಾಕೆ ಸಹಕಾರಕ್ಕೆ ಬರಲಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕ್ಷೇತ್ರದಲ್ಲಿನ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧ ಮಾಡಿಸಿದ್ದೆ.  ಇದಕ್ಕೆ ಸಂಬಂಧಿಸಿದಂತೆ ಪ್ರತಿಕಾಗೋಷ್ಠಿಯಲ್ಲಿ ಎರಡು ಬಾರಿ ದಾಖಲೆ ಮಾಡಿದ್ದೇನೆ. ನಮ್ಮ ಪ್ರಯತ್ನಕ್ಕೆ ಕಾಂಗ್ರೆಸ್‌ನವರು ಮೊಹರು ಒತ್ತುವ ಷಡ್ಯಂತ್ರದಲ್ಲಿ ಮಾಡುತ್ತಿದ್ದಾರೆ. ಐದು ವರ್ಷಗಳಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್‌ ಸರ್ಕಾರದ ಕೊಡುಗೆ ಶೂನ್ಯ’ ಎಂದು ಕುಟುಕಿದರು.

ADVERTISEMENT

‘ಕಾಂಗ್ರೆಸ್‌ನವರು ನನ್ನನ್ನು ಟೀಕಿಸುವುದನ್ನೇ ಈ ಚುನಾವಣೆಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಐದು ವರ್ಷ ಕಾಂಗ್ರೆಸ್‌ ಆಡಳಿತದಲ್ಲಿ ಇತ್ತು ಎಂಬುದನ್ನು ಮರೆತಂತೆ ವರ್ತಿಸುತ್ತಿದ್ದಾರೆ. ಜನರನ್ನು ಮೂರ್ಖರ
ನ್ನಾಗಿಸಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.

‘ಐದು ವರ್ಷ ಜನರು ಸಂಕಷ್ಟದಲ್ಲಿದ್ದಾಗ ಕಷ್ಟ ಆಲಿಸದವರಿಗೆ ವಿಶ್ವಾಸ ಪ್ರಾಪ್ತಿಯಾಗಲು ಹೇಗೆ ಸಾಧ್ಯ? ಬರ ಪರಿಸ್ಥಿತಿಯಲ್ಲಿ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಗುದ್ದೋಡು (ಹಿಟ್‌ ಅಂಡ್‌ ರನ್‌) ತಂತ್ರ ಅನುಸರಿಸುತ್ತಿದ್ದಾರೆ. ಕೋಟೆ ವಿಚಾರದಲ್ಲಿ ಮುಖ್ಯಮಂತ್ರಿಯವರೇ ನನ್ನ ವಿರುದ್ಧ ಆಪಾದನೆ ಮಾಡಿದ್ದರು. ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಈವರೆಗೆ ಯಾಕೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಿಲ್ಲ. ಗುತ್ತಿಗೆದಾರ, ಎಂಜಿನಿಯರ್‌ ಮತ್ತು ಕಾಂಗ್ರೆಸ್‌ಗೆ ಇರುವ ಒಳ ಸಂಬಂಧ ಏನು’ ಎಂದು ಪ್ರಶ್ನಿಸಿದರು.

‘ಎಂ.ಜಿ ರಸ್ತೆ ಮತ್ತು ಮಾರುಕಟ್ಟೆ ರಸ್ತೆ ಅಭಿವೃದ್ದಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆಪಾದಿಸಿದ್ದಾರೆ. ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್‌ ಸರ್ಕಾರವೇ ಇತ್ತು. ಕಾಮಗಾರಿ ಮೇಲುಸ್ತುವಾರಿಗೆ ಜಿಲ್ಲಾಧಿಕಾರಿ ಒಳಗೊಂಡ ಸಮಿತಿ ನೇಮಿಸಲಾಗಿತ್ತು. ಕಾಮಗಾರಿ ಕಳಪೆಯಾಗಿದ್ದರೆ ಅದಕ್ಕೆ ಸರ್ಕಾರವೇ ಹೊಣೆ. ಅನುದಾನ ಬಿಡುಗಡೆ ಮಾಡಿಸಿದ ಕಾರಣಕ್ಕೆ ನನ್ನ ಮೇಲೆ ಆಪಾದನೆ ಮಾಡಿ, ತಾವು ಬಚಾವಗಬಹುದು ಎಂದು ಭಾವಿಸಿದ್ದಾರೆ. ಇದು ರಾಜಕೀಯ ದುರುದ್ದೇಶಪೂರಿತ. ಅವ್ಯವಹಾರ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಹೇಳಿದರು.

‘ಕಾಮಗಾರಿ ಕಳಪೆ ಆಗಿದೆ ಎಂದು ನನಗನಿಸುತ್ತಿಲ್ಲ. ಅನುದಾನ ತರುವುದು, ಕಾಮಗಾರಿ ಮೇಲುಸ್ತುವಾರಿಯು ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಲಾಗಿತ್ತು. ಕಳಪೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ರಾಜಕೀಯ ಕಾರಣಕ್ಕೆ ಕಾಂಗ್ರೆಸ್‌ನವರು ಆಪಾದನೆ ಮಾಡುತ್ತಿದ್ದಾರೆ’ ಎಂದರು.

ನಗರಕ್ಕೆ ಪ್ರಧಾನಿ ಮೋದಿ ನಾಳೆ

ಪ್ರಧಾನಿ ನರೇಂದ್ರ ಮೋದಿ ಅವರು ಇದೇ 9ರಂದು ಆಗಮಿ ಸುವರು, ಜಿಲ್ಲೆಯ ಐದೂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿ ಸುವರು ಎಂದು ಸಿ.ಟಿ.ರವಿ ತಿಳಿಸಿದರು.

ನಗರದ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವರು. ಚಿಕ್ಕಮಗಳೂರು ಕ್ಷೇತ್ರದ ಪ್ರಚಾರ ನಿಟ್ಟಿನಲ್ಲಿ ರೋಡ್‌ ಷೋಗೆ ಬೆಳಿಗ್ಗೆ 10 ಗಂಟೆಗೆ ಬೋಳರಾಮೇಶ್ವರ ದೇಗುಲ ಆವರಣದಲ್ಲಿ ಆರಂಭವಾಗಲಿದೆ. ಐ.ಜಿ ರಸ್ತೆ, ಎಂ.ಜಿ ರಸ್ತೆ ಮೂಲಕ ಹಾದು ಜಿಲ್ಲಾ ಆಟದ ಮೈದಾನ ತಲುಪಲಿದೆ. 12.30ಕ್ಕೆ ಜಿಲ್ಲಾ ಆಟದ ಮೈದಾನದಲ್ಲಿ ಸಾರ್ವಜನಿಕ ಸಭೆ ಆರಂಭವಾಗುತ್ತದೆ ಎಂದರು.

ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು, ಯೋಜನೆಗಳು

* ಬಯಲುಸೀಮೆಯ 63 ಕೆರೆಗಳಿಗೆ ನೀರು ತುಂಬಿಸುವುದು (₹750 ಕೋಟಿ ವೆಚ್ಚದ ಡಿಪಿಆರ್‌ ಸಿದ್ಧ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ)
* ಕರಗಡ ಎರಡನೇ ಹಂತದ ಕಾಮಗಾರಿಗೆ ಚಾಲನೆ
* ಚಿಕ್ಕಮಗಳೂರಿನಲ್ಲಿ ಪ್ರಗತಿಯಲ್ಲಿರುವ ಅಮೃತ ಯೋಜನೆ ತ್ವರಿತವಾಗಿ ಪೂರ್ಣ
* ಅತ್ಯಾಧುನಿಕ ಕಾಳು ಮೆಣಸು (ಪೆಪ್ಪರ್‌) ಪಾರ್ಕ್‌ ಸ್ಥಾಪನೆ, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದನೆ
* ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು ಆರಂಭ
* ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ, ಜಿಲ್ಲಾ ಪ್ರವಾಸೋದ್ಯಮ ನೀತಿ
*ನಗರದ ನಾಲ್ಕೂ ದಿಕ್ಕುಗಳಲ್ಲಿ ವರ್ತುಲ ರಸ್ತೆ ನಿರ್ಮಾಣ
* ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಪ್ರಶ್ನಿಸಿ ಕೋರ್ಟ್‌ಗೆ ಮೇಲ್ಮನವಿ
*ಕೌಶಲಾಭಿವೃದ್ಧಿಗೆ ಒತ್ತು

**
ವರ್ಗಾವಣೆ ದಂಧೆಯನ್ನು ನಾನಂತೂ ಯಾವಾಗಲೂ ಮಾಡಿಲ್ಲ. ಅವರೇ ವರ್ಗಾವಣೆ ದಂಧೆ ಮಾಡಿ ಅದನ್ನು ನನ್ನ ಮೂತಿಗೆ ಒರೆಸಲು ಮುಂದಾಗಿರುವುದು ಷಡ್ಯಂತ್ರ ಭಾಗ
– ಸಿ.ಟಿ.ರವಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.