ADVERTISEMENT

ಕುಂಟುತ್ತಿದೆ ಮೊರಾರ್ಜಿ ದೇಸಾಯಿ ಶಾಲೆ ಕಾಮಗಾರಿ

ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2013, 9:08 IST
Last Updated 24 ಜುಲೈ 2013, 9:08 IST
ನರಸಿಂಹರಾಜಪುರ ತಾಲ್ಲೂಕು ಸೌತಿಕೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಮೊರಾರ್ಜಿ ಶಾಲೆ ಕಟ್ಟಡ.
ನರಸಿಂಹರಾಜಪುರ ತಾಲ್ಲೂಕು ಸೌತಿಕೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಮೊರಾರ್ಜಿ ಶಾಲೆ ಕಟ್ಟಡ.   

ನರಸಿಂಹರಾಜಪುರ: ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾರಂಭವಾದ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿದೆ.

ತಾಲ್ಲೂಕು ಕೇಂದ್ರಕ್ಕೆ 2007ರಲ್ಲಿ ಮೊರಾರ್ಜಿ ವಸತಿಯುತ ಶಾಲೆ ಮಂಜೂರಾಯಿತು. ಇದನ್ನು ಬಸ್ತಿಮಠದಲ್ಲಿರುವ ಕಟ್ಟಡವನ್ನು ರೂ.14,500 ಬಾಡಿಗೆ ಪಡೆದು ಆರಂಭಿಸಲಾಯಿತು. ನಂತರ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿನ ಭದ್ರಾಹಿನ್ನೀರಿಗೆ ಸೇರಿದ ಪ್ರದೇಶದ ಬಳಿ 10 ಎಕರೆ ಜಾಗ ಗುರುತಿಸಲಾಯಿತು.

ಈ ಪ್ರದೇಶ ಕಿರು ಅರಣ್ಯ ಎಂದು ಘೋಷಣೆಯಾಗಿದ್ದರಿಂದ ಇದನ್ನು ಕೈಬಿಟ್ಟು ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೌತಿಕೆರೆಯ ಅಳಲಗೆರೆ ಗ್ರಾಮದಲ್ಲಿ ಹೊಸದಾಗಿ ಜಾಗ ಗುರುತಿಸಿದ ಸರ್ಕಾರ ಸ್ವಂತಕಟ್ಟಡಕ್ಕೆ ರೂ.5.50 ಕೋಟಿ ಹಣ ಮಂಜೂರು ಮಾಡಿ ಮೇ 1, 2011 ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಬೇಕೆಂಬ ಶರತ್ತು ವಿಧಿಸಲಾಗಿತ್ತು. ಇದರ ಗುತ್ತಿಗೆಯನ್ನು ಬೆಂಗಳೂರಿನ ಇನ್‌ಫೋಟೆಕ್ ಲಿ ಕಂಪೆನಿ ಪಡೆದಿತ್ತು. ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳು ಪೂರೈಸಿದ್ದರೂ ಇದು ಮಂದಗತಿಯಲ್ಲಿ ಮುಂದುವರೆದಿದೆ.

ಈ ನಡುವೆ ಪ್ರಮುಖ ಗುತ್ತಿಗೆಯನ್ನು ಪಡೆದ ಬೆಂಗಳೂರಿನ ಕಂಪೆನಿ ಇದರ ಉಪಗುತ್ತಿಗೆಯನ್ನು ಇನ್ನೊಬ್ಬರಿಗೆ ನೀಡಿರುವುದು, ಸರ್ಕಾರದಿಂದ ರೂ. 26ಲಕ್ಷದ ಬಿಲ್ ಪಾವತಿಯಾಗದಿರುವುದು ಕಾಮಗಾರಿಗೆ ವಿಳಂಬವೆನ್ನಲಾಗುತ್ತಿದೆ. ಅಲ್ಲದೆ ಇಲ್ಲಿನ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿರುವ ಇಟ್ಟಿಗೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿಬರುತ್ತಿದೆ.

ADVERTISEMENT

ಕಾಮಗಾರಿ ಕಳಪೆಯಾಗಿರುವ ಬಗ್ಗೆ ಲೋಕಾಯುಕ್ತಕ್ಕೂ ದೂರು ದಾಖಲಾಗಿದ್ದು ಇತ್ತೀಚೆಗೆ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೊರಾರ್ಜಿ ಶಾಲೆಯಲ್ಲಿ ಪ್ರಸ್ತುತ 6ರಿಂದ 10ನೇ ತರಗತಿಯವರೆಗೆ 240ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅವರಿಗೆ ಬಾಡಿಗೆ ಕಟ್ಟಡದಲ್ಲಿರುವ ಸೌಲಭ್ಯಗಳು ಸಾಲದಾಗಿದೆ ಎನ್ನಲಾಗುತ್ತಿದೆ.

ಮೊರಾರ್ಜಿ ವಸತಿಯುವ ಶಾಲೆಯ ಕಟ್ಟಡ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಹಾಗೂ ಕಳಪೆಯಾಗಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು ಕಾಮಗಾರಿ ಶೀಘ್ರ ಮುಗಿಸಲು ಸಚಿವರು ಆದೇಶ ನೀಡಿದ್ದಾರೆಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.

ಮೊರಾರ್ಜಿ ಶಾಲೆ ಕಟ್ಟಡ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಪ್ರಜಾವಾಣಿಗೆ ತಿಳಿಸಿದರು. ಸರ್ಕಾರಿ ಕಟ್ಟಡವೊಂದು ಅದನ್ನು ಪೂರ್ಣಗೊಳಿಸಲು ನೀಡಿರುವ ಅವಧಿಯೊಂದು ಮುಗಿದಿದ್ದರೂ ಜಿಲ್ಲಾಡಳಿತ ತನಗೂ ಇದ್ದಕ್ಕೂ ಸಂಬಂಧವಿಲ್ಲದಂತೆ ಮೌನವಹಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
-ಕೆ.ವಿ.ನಾಗರಾಜ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.