ADVERTISEMENT

ಕೊಪ್ಪ: ಬಿಸಿಯೂಟ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 5:10 IST
Last Updated 20 ಅಕ್ಟೋಬರ್ 2012, 5:10 IST

ಕೊಪ್ಪ: ಬಿಸಿಯೂಟದ ಅಡುಗೆ ಕೆಲಸ ನಿರ್ವಹಿಸುವವರಿಗೆ ಕನಿಷ್ಠ ಕೂಲಿ ನೀಡದೆ ಜೀತದಾಳುಗಳಂತೆ ಸರ್ಕಾರ ದುಡಿಸಿಕೊಳ್ಳುತ್ತಿದೆ ಎಂದು ಕಮ್ಯೂನಿಸ್ಟ್ ಮುಖಂಡ ಕೆಲವಳ್ಳಿ ಕಳಸಪ್ಪ ದೂರಿದರು.

ಇಲ್ಲಿನ ಪುರಭವನದಲ್ಲಿ ಶುಕ್ರವಾರ ನಡೆದ ಬಿಸಿಯೂಟದ ಕಾರ್ಯಕರ್ತೆಯರ ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಬಿಸಿಯೂಟ ಸಿದ್ಧಪಡಿಸುವವರಿಗೆ ತಮಿಳುನಾಡು ಸರ್ಕಾರ ಮಾಸಿಕ ರೂ.5ಸಾವಿರ ವೇತನ ನೀಡುತ್ತಿದೆ. ರಾಜ್ಯ ಸರ್ಕಾರ ದಿನಕ್ಕೆ ರೂ.30ರಂತೆ ವೇತನ ನೀಡಿ ಮಹಿಳೆಯರನ್ನು ಶೋಷಿಸುತ್ತಿದೆ ಎಂದರಲ್ಲದೆ, ಸಚಿವ ಜೀವರಾಜ್ ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಸದನದಲ್ಲಿ ಪ್ರಸ್ತಾಪಿಸುವ  ಭರವಸೆ ನೀಡಿ ಮರೆತಿದ್ದಾರೆ ಎಂದು ಆರೊಪಿಸಿದರು.

ಬಿಸಿಯೂಟದ ಅಡುಗೆಯವರಿಂದ ಶಾಲಾ ಶಿಕ್ಷಕರು ಶೌಚಾಲಯ ಶುಚಿಗೊಳಿಸುವ ಕಾರ್ಯ ಮಾಡಿಸುತಿದ್ದಾರೆಂಬ ದೂರು ಸಂಘಕ್ಕೆ ಬಂದಿದ್ದು, ಇಂತಹ ನಡವಳಿಕೆ ಕಂಡು ಬಂದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದ ಅವರು ಮಾಸಿಕ ರೂ.10ಸಾವಿರ ವೇತನ ನೀಡಿಕೆಗೆ ನಿರಂತರ ಹೋರಾಟ ನಡೆಸುವುದು  ಅನಿ ವಾರ್ಯ ಎಂದರು. 

ಕೊಪ್ಪ ಬಸ್ ನಿಲ್ದಾಣದಿಂದ ಪುರಭವನದವರೆಗೆ ಕನಿಷ್ಠ ವೇತನ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಎಐಟಿಯುಸಿ ಮುಖಂಡ ರಾದ ವಿಜಯಕುಮಾರ್, ರಘು, ಬಿಸಿಯೂಟ ಕಾರ್ಯಕರ್ತೆ ಸಂಘದ ಪದಾಧಿಕಾರಿಗಳಾದ ಗೀತಾ, ಸುಧಾ, ಕೌಸರ್, ಲೀಲಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.