ADVERTISEMENT

ಗೋ ರಕ್ಷಣಾ ಕಾನೂನು ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 6:32 IST
Last Updated 11 ಅಕ್ಟೋಬರ್ 2017, 6:32 IST

ಬೀರೂರು: ಭಾರತೀಯ ಸಂಸ್ಕೃತಿಯ ಜತೆಯಲ್ಲಿಯೇ ಸಾಗಿ ಬಂದಿರುವ ಗೋ ಸಂಪತ್ತು ಉಳಿದು ನಮ್ಮ ಪರಂಪರೆ ಬೆಳೆಯಬೇಕೆಂದರೆ ಗೋಹತ್ಯೆ ನಿಷೇಧಕ್ಕೆ ಬಲ ನೀಡುವ ಗೋ ಸಂರಕ್ಷಣಾ ಕಾನೂನು ಜಾರಿಗೆ ತರಲು ಸರ್ಕಾರಗಳು ಮುಂದಾಗಬೇಕಾದುದು ಅಗತ್ಯ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ರೋಟರಿ ಭವನದಲ್ಲಿ ಗೋ ಸಂರಕ್ಷಣಾ ಕಾನೂನು ಜಾರಿ ಗೊಳಿಸುವ ಸಲುವಾಗಿ ಸೋಮವಾರ ನಡೆದ ಅಭಯಾಕ್ಷರ ಸಹಿ ಸಂಗ್ರಹ ಕಾರ್ಯಕ್ರಮದ ಜಿಲ್ಲಾ ಸಮಾಲೋಚನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ಇಂದು ಪ್ರಗತಿಪರ ಸಮಾಜದ ಅಂಗವಾಗಿರುವ ಕೆಲವರು ಗೋಹತ್ಯೆ ಮೂಲಕ ಭಾರತೀಯ ಪರಂಪರೆಗೆ ಕೊಡಲಿ ಪೆಟ್ಟು ನೀಡಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಅವ ರಲ್ಲಿರುವ ಅಸುರೀಭಾವವನ್ನು ಕಾನೂನು ಮೂಲಕವೇ ದಮನಿಸಬೇಕಿದೆ’ ಎಂದರು.

ADVERTISEMENT

‘ಗೋವು ಕೇವಲ ಪೂಜನೀಯವಲ್ಲ, ಅದು ದೇಶದ ಸಂಪತ್ತಿನ ಪ್ರತೀಕವೇ ಆಗಿದ್ದು, ಗೋವಿನ ಎಲ್ಲ ಉತ್ಪನ್ನಗಳೂ ಮಾನವ ಸಮಾಜ ಮತ್ತು ಪ್ರಕೃತಿಗೆ ಪೂರಕವೇ ಆಗಿವೆ. ಗೋಹತ್ಯೆ ವಿರೋಧಿಸುವವರನ್ನು ಪಂಥಗಳ ದೃಷ್ಟಿಯಿಂದ ಹೀಗಳೆಯಲಾಗುತ್ತಿದೆ. ಇದು ತಪ್ಪಿ ನಮ್ಮ ಸಂಪತ್ತು ಮತ್ತು ಸಂಸ್ಕೃತಿಯ ರಕ್ಷಣೆಗೆ ಕಾನೂನಿನ ಬಲ ಬೇಕಿದೆ’ ಎಂದು ಪ್ರತಿಪಾದಿಸಿದರು.

ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಮತ್ತು ಗೋಸಂರಕ್ಷಣಾ ಕಾನೂನು ಜಾರಿಗೆ ತರಲು ಒತ್ತಾಯಿಸಿ ಅಭಯಾಕ್ಷರ ಸಹಿಸಂಗ್ರಹ ಅಭಿಯಾನವನ್ನು ರಾಜ್ಯಾದ್ಯಂತ ಆರಂಭಿಸಲಾಗಿದೆ. ಈ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪಂಚಾಯಿತಿಯಿಂದ ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೆ ಸಮಿತಿಗಳನ್ನು ರಚಿಸಿದ್ದು ಈಗಾಗಲೇ 15 ಜಿಲ್ಲೆಗಳಲ್ಲಿ ಸಮಾಲೋಚನಾ ಸಭೆ ನಡೆಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 15ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗೋವಿನ ಮಹತ್ವವನ್ನು ಸಮಾಜಕ್ಕೆ ಅರಿವು ಮೂಡಿಸುವ ಮೂಲಕ ರಾಘವೇಶ್ವರ ಶ್ರೀಗಳು ಪ್ರಮುಖ ನಡೆ ಆರಂಭಿಸಿದ್ದಾರೆ. ಗೋಹತ್ಯೆ ನಮ್ಮ ಸಂಸ್ಕೃತಿಯ ಮೇಲಿನ ಸದ್ದಿಲ್ಲದ ಆಕ್ರಮಣವಾಗಿದ್ದು, ಇದನ್ನು ತಡೆಯು ವುದು ಎಲ್ಲರ ಕರ್ತವ್ಯ’ ಎಂದರು.

ಸಭೆಯಲ್ಲಿ ಆಂದೋಲನಾ ವಿಭಾಗದ ಅಶೋಕ್‌, ಡಾ.ರವಿ, ರಾಜಗೋಪಾಲ ಜೋಷಿ ಮಾತನಾಡಿದರು. ಅಭಿಯಾನದ ಅಧ್ಯಕ್ಷ ಗೋಸಾಯಿ ಮಠದ ಪಾಂಡುರಂಗ ಮಹಾರಾಜ್‌, ರೇಖಾ ಹುಲಿಯಪ್ಪಗೌಡ, ಅಭಿಯಾನದ ಜಿಲ್ಲಾಧ್ಯಕ್ಷ ಬಸವೇಗೌಡ, ಮಹಾಬಲರಾವ್‌, ರಾಘವೇಂದ್ರ, ಮಾನಸ, ಮಲ್ಲಿಕಾ, ಕೃಷ್ಣರಾಜ್‌ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.