ADVERTISEMENT

ಜನರ ತಲುಪದ ಸರ್ಕಾರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 9:20 IST
Last Updated 6 ಏಪ್ರಿಲ್ 2012, 9:20 IST

ತರೀಕೆರೆ: ಸರ್ಕಾರದ ಅನೇಕ ಜನಪರ ಯೋಜನೆಗಳು ಯಾರಿಗಾಗಿ ರೂಪಿತವಾಗಿದ್ದವೋ ಅಂತವರಿಗೆ ತಲುಪಿಸುವಲ್ಲಿ  ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಗುರುವಾರ ರೂ.1 ಕೋಟಿ ಮೊತ್ತದ ಶೌಚಾಲಯ ಪರಿಕರ ವಿತರಣೆ ಹಾಗೂ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ಪ್ರಭುಗಳ ಅವರ ಸೇವೆಯನ್ನು ಮಾಡುವಲ್ಲಿ ಸರ್ಕಾರಿ ಅಧಿಕಾರಿಗಳಲ್ಲಿ ನಿರ್ಲಕ್ಷ್ಯ ಸಲ್ಲದು ಎಂದರು.

ಪ್ರತಿ ಹತ್ತು ವರ್ಷಕ್ಕೆ  ದೇಶದಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ. ಮಹಿಳೆ ಇಂದಿನ ಕಾಲದಲ್ಲಿ ಕೇವಲ ಗೃಹಕೃತ್ಯಕ್ಕೆ ಮೀಸಲಾಗದೆ ಪುರುಷರಿಗೆ ಸರಿಸಮಾನವಾಗಿ  ಕುಟುಂಬದ ಹೊಣೆಯನ್ನು ಹೊರುತ್ತಿದ್ದಾಳೆ ಎಂದರು.

ಭವಿಷ್ಯದ ಬಗ್ಗೆ ಪರಿಕಲ್ಪನೆಯಿಲ್ಲದ ಜನರ ಕಲ್ಯಾಣಕ್ಕಾಗಿ  ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ 18 ಲಕ್ಷಕ್ಕೂ ಹೆಚ್ಚು ಜನರ ಜೀವನದಲ್ಲಿ ಪರಿಪೂರ್ಣವಾಗಿ ಅವಲಂಬಿವಾಗಿದ್ದು, ಅವರ ಪ್ರಗತಿಯಲ್ಲಿ ಪಾಲುದಾರರಾಗಿ  ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದರು.

ತರೀಕೆರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಮನಗಂಡು ಶುದ್ಧಗಂಗಾ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಬಯಲು ಶೌಚಾಲಯದಿಂದ ಮುಜುಗರಕ್ಕೊಳಗಾಗಿರುವ ಮಹಿಳೆಯರ ಪರಿತಾಪವನ್ನು ತಪ್ಪಿಸಲು ಜಿಲ್ಲೆಗೆ ರೂ 1 ಕೋಟಿ ಮೊತ್ತದ ಪರಿಕರವನ್ನು ವಿತರಿಸಲಾಗುವುದು. ಜಾತಿ, ಮತ ಮತ್ತು ಪಂಥದ ಬೇಧಭಾವವಿಲ್ಲದೆ ಉತ್ತಮ ಭಾರತದ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.
 
ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿ, ರಾಷ್ಟ್ರೀಯ ಆರ್ಥಿಕ ನೀತಿಗೆ ಅನುಗುಣವಾಗಿ ಯೋಜನೆ ಕೆಲಸವನ್ನು ನಿರ್ವಹಿಸುತ್ತಿದ್ದು, ಮಹಿಳಾ ಸಬಲೀಕರಣ ಕಾರ್ಯದ ಮೂಲಕ ಸ್ವಾವಲಂಬಿ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟಿದೆ ಎಂದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಹೈನು ಗಾರಿಕೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜನತೆಗೆ ಸಹಕಾರ ನೀಡುತ್ತಿರುವ ಯೋಜನೆಯ ಆಸಕ್ತಿಯನ್ನು ಕಂಡು ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಗೆ ಪ್ರಸ್ತುತ ವರ್ಷ ಮಂಡಿಸಿದ ಬಜೆಟ್‌ನಲ್ಲಿ ಹಾಲಿನ ಡೇರಿ ತೆರೆಯಲು ಅವಕಾಶ ಕಲ್ಪಿಸಿದೆ ಎಂದ ಅವರು, ತರೀಕೆರೆಯಲ್ಲಿ ಕೃಷಿ ಮೇಳವನ್ನು ನಡೆಸುವಂತೆ ಹೆಗ್ಗಡೆ ಅವರಿಗೆ ಮನವಿ ಮಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಟಿ.ವಿ.ಶಿವಶಂಕರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕಿನ ಯೋಜನೆಯ ವರದಿಯನ್ನು ಕೃಷಿ ಮೇಲ್ವಿಚಾರಕ ಸುರೇಂದ್ರ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಂಬೈನೂರು ಆನಂದಪ್ಪ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಎ.ಆರ್.ರಾಜಶೇಖರ್, ಪುರಸಭಾ ಅಧ್ಯಕ್ಷೆ ಪಾರ್ವತಮ್ಮ ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಂಕರಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.