ADVERTISEMENT

ತರೀಕೆರೆ ಉಪವಿಭಾಗಾಧಿಕಾರಿ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:30 IST
Last Updated 8 ಫೆಬ್ರುವರಿ 2011, 9:30 IST

 ಕಡೂರು: ಸಭೆಗೆ ಸರಿಯಾದ ಮಾಹಿತಿಯೊಂದಿಗೆ ಬಾರದೆ ಹಳೆಯ ಮಾಹಿತಿಯನ್ನೇ ತಿದ್ದಿ ಉಪವಿಭಾಗಾಧಿಕಾರಿಗಳಿಗೆ ನೀಡಿದ ಜಿ.ಪಂ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಶಂಕರನಾಯ್ಕ ಅವರಿಗೆ ತರೀಕೆರೆ ಉಪವಿಭಾಗಾಧಿಕಾರಿ ಶಶಿಧರ್ ಕುರೇರಾ ತರಾಟೆ ತೆಗೆದುಕೊಂಡು ಮುಂದಿನ ಸಭೆಗೆ ಸರಿಯಾದ ಮಾಹಿತಿ ನೀಡಲು ಆದೇಶಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ಪ್ರಗತಿ ಪರಿಶೀಲಿಸಿದರು.

ಶಂಕರ್‌ನಾಯ್ಕ 2008-09 ನೇ ಸಾಲಿನ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿದೆ ಎಂಬ ಹಾರಿಕೆ ಉತ್ತರವನ್ನು ನೀಡಿದ್ದರಿಂದ ಕೋಪಗೊಂಡ ವಿಭಾಗಾಧಿಕಾರಿ ತರಾಟೆ ತೆಗೆದುಕೊಂಡು ಮುಂದಿನ ಸಭೆಯೊಳಗೆ ಮಾಹಿತಿಯನ್ನು ನೀಡಲು ಆದೇಶಿಸಿದರು. ತಾಲ್ಲೂಕಿನ ಬಿಸಿಎಂ, ಸಮಾಜ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿನಿಲಯಗಳಿಗೆ ನೀಡುತ್ತಿರುವ ಅಕ್ಕಿ ಮತ್ತು ಗೋಧಿಯ ಪ್ರಮಾಣದಲ್ಲಿ ಗೋಧಿಯನ್ನು ಕಡಿಮೆ ನೀಡಿ ಅದರ ಬದಲಿಗೆ ಅಕ್ಕಿ ಅಥವಾ ಇಲ್ಲಿನ ಮಕ್ಕಳ ಆಹಾರ ಪದ್ಧತಿಗೆ ತಕ್ಕಂತೆ ರಾಗಿ ನೀಡಿದರೆ ಉತ್ತಮ ಎಂಬ ಸಲಹೆಯನ್ನು ಸಭೆಯಲ್ಲಿ ನೀಡಿದರು. ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ರಾತ್ರಿ ಊಟ ಮುಗಿಯುವ ತನಕ ವಾರ್ಡನ್‌ಗಳು ಕಟ್ಟು ನಿಟ್ಟಾಗಿ ಇರಬೇಕೆಂದು ಆದೇಶಿಸಿದರು.

ಪಶುಸಂಗೋಪನ ಇಲಾಖೆಯ ಅಧಿಕಾರಿ ಗಿರಿಜನ ಯೋಜನೆಯಡಿಯಲ್ಲಿ 6 ಫಲಾನುಭವಿಗಳಿಗೆ ಹಸುಗಳನ್ನು ವಿತರಿಸಿರುವುದಾಗಿ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವರದಿ ಪರಿಶೀಲನೆ ಮಾಡಿದರು. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ರವಿಕುಮಾರ್ 24 ಕಾಮಗಾರಿಗಳಲ್ಲಿ ಹೀಗಾಗಲೇ 23 ಕಾಮಗಾರಿಗಳು ಮುಕ್ತಾಯವಾಗಿದ್ದು ಕೇವಲ ಒಂದು ಕಾಮಗಾರಿ ಬಾಕಿ ಇದ್ದು ಇನ್ನು ಎರಡು ವಾರದಲ್ಲಿ ಮುಕ್ತಾಯವಾಗಲಿದೆ ಎಂದರು.

ಸುವರ್ಣ ರಸ್ತೆ ಯೋಜನೆಯಡಿಯಲ್ಲಿ 78 ಲಕ್ಷ ರೂಗಳಲ್ಲಿ 4.2ಕಿ.ಮೀ.ರಸ್ತೆ ಕಾಮಗಾರಿ ನಡೆದಿದೆ. ನಂಜುಂಡಪ್ಪ ಯೋಜನೆಯಡಿಯಲ್ಲಿ 2.11ಕೋಟಿ ರೂಗಳಲ್ಲಿ ನಾಲ್ಕು ಕಾಮಗಾರಿಗಳು ಪ್ರಗತಿಯಲ್ಲಿವೆ,50-54 ಯೋಜನೆಯಲ್ಲಿ 1.50 ಕೋಟಿ ಹಣದಲ್ಲಿ ನಾಲ್ಕು ಕಾಮಗಾರಿಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ನೀಡಿದರು.ಇವರ ಮಾಹಿತಿಯನ್ನು ಪಡೆದು ಎಂಜಿನಿಯರ್‌ಗಳು ಕಾಮಗಾರಿಗಳನ್ನು ಹಂತಹಂತವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಜಾಗೃತ ಸಮಿತಿಯನ್ನು ರಚಿಸಲು, ಸೂಚನ ಫಲಕಗಳಲ್ಲಿ ಬೆಲೆಯನ್ನು ನಮೂದಿಸಬೇಕೆಂದು ತಾಲ್ಲೂಕು ಮುಖ್ಯಾಧಿಕಾರಿ ಸಿ.ದೇವರಾಜು ಸಭೆಯ ಗಮನ ಸೆಳೆದರು. ಬಾಗಿರುವ ಹಳೆಯ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿದ್ದು ಅಂತಹ ಕಂಬಗಳನ್ನು ಗುರುತಿಸಿ ಬದಲಾಯಿಸಬೇಕೆಂದು ಸಲಹೆ ನೀಡಿದರು.
ತಹಸೀಲ್ದಾರ್ ಬಿ.ಆರ್.ರೂಪ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ದೇವರಾಜ್, ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.     
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.