ADVERTISEMENT

ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಗೆ ಬಿಇಒ ಮಾಹಿತಿ.....

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 9:00 IST
Last Updated 31 ಮಾರ್ಚ್ 2011, 9:00 IST
ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಗೆ ಬಿಇಒ ಮಾಹಿತಿ.....
ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಗೆ ಬಿಇಒ ಮಾಹಿತಿ.....   

ನರಸಿಂಹರಾಜಪುರ: ಬರುವ ಜೂನ್‌ನಿಂದ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮತ್ತು ಬಾಲಕಿಯರ ಶಾಲೆ ಸಂಯೋಜನೆಗೊಳಿಸಿ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಮಂಜುನಾಥ್ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಗೆ ಅವರು ಮಾಹಿತಿ ನೀಡಿದರು.ಈ ಎರಡು ಶಾಲೆಗಳನ್ನು ಸಂಯೋಜನೆಗೊಳಿಸುವುದರಿಂದ ಸರ್ಕಾರಕ್ಕೂ ಆರ್ಥಿಕ ಮಿತವ್ಯಯವಾಗಲಿದೆ ಎಂದರು.
 

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಪೂರೈಸಲಾಗುವುದು. ಆದರೆ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬೇಡಿಕೆ ಹುಂಡಿ(ಡಿಡಿ) ಪಡೆದು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು ಯಾವುದೇ ಕಾರಣಕ್ಕೂ ಪುಸ್ತಕ ಅಂಗಡಿಗಳಲ್ಲಿ ಪುಸ್ತಕ ಮಾರಾಟ ಮಾಡಲು ಅವಕಾಶವಿಲ್ಲ. ವಿದ್ಯಾರ್ಥಿಗಳಿಗೆ ವಿತರಿಸಲು 842 ಸೈಕಲ್ ಬೇಕಾಗಿದ್ದು, ಅದು ಇದುವರೆಗೂ ಬಂದಿಲ್ಲ ಎಂದು ತಿಳಿಸಿದರು
 

ಅಂಗನವಾಡಿಯ 20 ಕಾರ್ಯಕರ್ತೆಯರು ಇದೇ ಮಾರ್ಚ್ 31ಕ್ಕೆ ನಿವೃತ್ತಿಯಾಗಲಿದ್ದು ಅವರಿಗೆ ತಲಾ ರೂ.30 ಸಾವಿರ ನೀಡಲಾಗುವುದು. ಏಪ್ರಿಲ್ ನಿಂದ ಕಾರ್ಯಕರ್ತೆಯರಿಗೆ ರೂ.4,500 ಹಾಗೂ ಸಹಾಯಕರಿಗೆ 2,500 ವೇತನ ನೀಡಲಾಗುವುದು. 25 ಅಂಗನವಾಡಿಗಳಿಗೆ ಕಟ್ಟಡದ ಅವಶ್ಯಕತೆಯಿದ್ದು, ತಾ.ಪಂ ಇದಕ್ಕೆ ಬೇಕಾದ ಅನುಮೋದನೆ ನೀಡಬೇಕೆಂದರು. ಅಂಗನವಾಡಿಯಲ್ಲಿ ನೀಡುತ್ತಿರುವ ಕುರ್‌ಕುರೆಯಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಸದಸ್ಯ ಜೆ.ಜಿ.ನಾಗರಾಜ್ ಪ್ರಸ್ತಾಪಿಸಿದಾಗ ಇದರ ಹಂಚಿಕೆ ನಿಲ್ಲಿಸುವಂತೆ ಸಭೆ ತೀರ್ಮಾನಿಸಿತು.
 

ADVERTISEMENT

ಭೂಚೇತನ ಕಾರ್ಯಕ್ರಮದಡಿ ಶೇ.50ರ ರಿಯಾಯಿತಿ ದರದಲ್ಲಿ ಔಷಧಿಯನ್ನು ಅದರಲ್ಲೂ ಪ್ರಮುಖವಾಗಿ ಜಿಂಕ್‌ಸಲ್ಫೇಟ್ ನೀಡಲಾಗುತ್ತದೆ. 240 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಎರಡನೇ ಬೆಳೆ ಬೆಳೆಯಲಾಗುತ್ತದೆ  ಎಂದು ಕೃಷಿ ಇಲಾಖೆಯ ಅಧಿಕಾರಿ ಸತ್ಯನಾರಾಯಣ ಸಭೆಗೆ ಮಾಹಿತಿ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದ ಬಳಿಯಿ ರುವ ಸಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳು ಬಳಸುವ ಹೊದಿಕೆ ಗಳು ದುರ್ನಾತ ಬಿರುತ್ತಿದ್ದು ಅದನ್ನು ಬದಲಾಯಿ ಸುವಂತೆ ಸದಸ್ಯ ನಾಗರಾಜ್ ಒತ್ತಾಯಿಸಿದರು.
 

ಎಲ್ಲಾ ಗ್ರಾಮ ಪಂಚಾಯಿತಿಗಳು ಪಶುವೈದ್ಯಕೀಯ ಇಲಾಖೆಗೆ ನೀಡುವ ಅನುದಾನವನ್ನು ಶೀಘ್ರವೇ ನೀಡಬೇಕೆಂದು ಸಭೆ ತೀರ್ಮಾನಿಸಿತು. ಸುತ್ತಾ ಗ್ರಾಮದ ವ್ಯಾಪ್ತಿಯಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದೆ.ಅಲ್ಲದೆ ಹೊಸಕರೆ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಅದನ್ನು ಶೀಘ್ರವೇ ಬಗೆಹರಿಸುವಂತೆ ಮೆಸ್ಕಾಂ ಎಂಜಿನಿಯರ್‌ಗೆ ಅಧ್ಯಕ್ಷೆ ಪ್ರೇಮ ಸೂಚಿಸಿದರು.
 

ಯಾವುದೇ ಗ್ರಾಮ ಪಂಚಾಯಿತಿ ಅನುಮೋದನೆಗಳನ್ನು ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದು ಅನುಮೋದನೆ ನೀಡಬೇಕೆಂದು ಸಭೆ ನಿರ್ಧರಿಸಿತು. ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇದ್ದುದನ್ನು ಕಂಡ ಸದಸ್ಯ ಜೆ.ಜಿ.ನಾಗರಾಜ್ ಮುಂದಿನ ಸಭೆಗೆ ಸಮಯಕ್ಕೆ ಸರಿಯಾಗಿ ಬಾರದೆ ಇರುವ ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಎಂದು ಒತ್ತಾಯಿಸಿದರು.ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮ ವಹಿಸಿದ್ದರು. ಉಪಾಧ್ಯಕ್ಷೆ ಬಿ.ಬಿ.ಉಮಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ, ಕಾರ್ಯನಿರ್ವಹಣಾಧಿಕಾರಿ ಬಿ.ಪುಟ್ಟೇಗೌಡ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.