ADVERTISEMENT

`ತಿಂಗಳೊಳಗೆ ಎಲ್ಲ ಬಡವರಿಗೆ ಬಿಪಿಎಲ್ ಕಾರ್ಡ್'

ಜಿಲ್ಲೆಯಲ್ಲಿ `ಅನ್ನಭಾಗ್ಯ' ಯೋಜನೆಗೆ ಸಚಿವ ಜೈನ್ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 10:53 IST
Last Updated 11 ಜುಲೈ 2013, 10:53 IST

ಚಿಕ್ಕಮಗಳೂರು: ಬಡವರಿಗೆ ಎರಡು ತಿಂಗಳೊಳಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಿಸಿ ಸರ್ಕಾರದ ಅನ್ನ ಯೋಜನೆಯ ಸವಲತ್ತು ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್ ತಿಳಿಸಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ ಬುಧವಾರ ಹಮ್ಮಿಕೊಂಡಿದ್ದ ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕೆಜಿ ಅಕ್ಕಿ 1ರೂಪಾಯಿ ದರಲ್ಲಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಡು ವಿತರಣೆಯಲ್ಲಿ ಕೆಲವು ಲೋಪದೋಷಗಳಾಗಿವೆ. ಅರ್ಹ ಬಡವರಿಗೆ ಬಿಪಿಎಲ್ ಕಾರ್ಡ್ ದೊರೆತ್ತಿಲ್ಲ. ಬಡವರಿಗೆ ಕಾರ್ಡ್ ಸಿಗುವ ವ್ಯವಸ್ಥೆ ಆಗಬೇಕಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಅಧಿಕಾರಕ್ಕೆ ಬಂದ ತಕ್ಷಣ ಬಡತನ ರೇಖೆಗಿಂತ ಕಳೆಗಿರುವ ಜನರಿಗೆ 1 ರೂಪಾಯಿ ದರದಲ್ಲಿ ಅಕ್ಕಿ ನೀಡುವ ಮೂಲಕ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ಕಡುಬಡವರಿಗೆ ಅನ್ನ ಯೋಜನೆಯಡಿ ಪಡಿತರ ನೀಡುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಉದ್ದಿಮೆಗಳಿಗೆ ಸಹಾಯ ಧನ ನೀಡಿದಂತೆ ಬಡವರಿಗೆ ಅಕ್ಕಿ ನೀಡುವ ಮೂಲಕ ಸಹಾಯ ಮಾಡಿದರೆ ತಪ್ಪೇನಿಲ್ಲ ಎಂದರು.

ಪಂಚಾಯಿತಿಗಳಿಗೆ ಡಾಟಾ ನಮೂದಿಸಲು, ಪಡಿತರ ಚೀಟಿ ವ್ಯವಸ್ಥೆ ಸರಿಪಡಿಸಲು ಅಗತ್ಯವಿರುವ ಕಂಪ್ಯೂಟರ್‌ಗಳನ್ನು ಉಡುಪಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಗಳಿಗೆ ಸಂಸದರ ಅನುದಾನದಿಂದ ಒದಗಿಸುವ ಭರವಸೆ ನೀಡಿದರು. ಕಡೂರು ತಾಲ್ಲೂಕಿಗೂ ಈ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳ ಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಟಿ.ರವಿ ಮಾತನಾಡಿ, ಯಾವುದೇ ವಸ್ತುವನ್ನು ಕೊಳ್ಳುವ ಸಾಮರ್ಥ್ಯ ಬಡವರಿಗೆ ಬಂದಾಗಲೇ ದೇಶ ಸ್ವಾವಲಂಬಿಯಾಗುತ್ತದೆ. ಯಾವುದೇ ನೀತಿಗಳು ಜನರನ್ನು ಸ್ವಾವಲಂಬಿಗಳನ್ನಾಗಿಸಬೇಕು ಎಂದರು.

ಜಿಲ್ಲೆಯ ಹಲವೆಡೆ ಕೃಷಿ ಭೂಮಿಗಳಲ್ಲಿ ಆಹಾರ ಬೆಳೆಗಳಿಗಿಂತ ವಾಣಿಜ್ಯ ಬೆಳೆಗಳ ಕೃಷಿ ಅಧಿಕವಾಗಿರುವುದು ಕಳವಳಕಾರಿ ಎಂದು ಹೇಳಿದರು.

ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಹಸಿವು ಮುಕ್ತ ಸಮಾಜ ನಿರ್ಮಾಣ ಆಗಬೇಕು. ದುಡಿಯುವ ಸಂಸ್ಕೃತಿ ಮರೆಯಾಗದಂತೆಯೂ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ ಮಾತನಾಡಿ, ದುಡಿಯುವ ಕೈ ಗಳಿಗೆ ಕೆಲಸ ನೀಡುವ ಮೂಲಕ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕಿದೆ ಎಂದು ತಿಳಿಸಿದರು.

ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ್ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಜಾತಾ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಪುಟ್ಟೇಗೌಡ, ಜಿಲ್ಲಾಧಿಕಾರಿ ವಿ.ಯಶವಂತ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಚಂದ್ರ ವೇದಿಕೆಯಲ್ಲಿದ್ದರು.
ಜಿಲ್ಲಾ ಸಚಿವರು ನಗರದ ಭಾಗ್ಯಮ್ಮ ಎಂಬುವವರಿಗೆ ಸಾಂಕೇತಿಕವಾಗಿ ಅನ್ನ ಭಾಗ್ಯ ಯೋಜನೆ ಪಡಿತರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.