ADVERTISEMENT

ನಿವೇಶನಕ್ಕೆ ಭೂಮಿ, ಗೋಮಾಳ ಜಾಗಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 10:35 IST
Last Updated 24 ಜನವರಿ 2012, 10:35 IST

ಚಿಕ್ಕಮಗಳೂರು: ಕೂದುವಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್168/74ರ ಜಮೀನು ಗೋಮಾಳವನ್ನಾಗಿ ಕಾಯ್ದಿರಿಸಿ ಗ್ರಾಮದ ಭೂರಹಿತರು ಮತ್ತು ನಿವೇಶನಕ್ಕೆ ಭೂಮಿ ನೀಡಬೇಕೆಂದು ಜಿಲ್ಲಾಧಿಕಾರಿಯನ್ನು ಒತ್ತಾ ಯಿಸಿ ಕೂದುವಳ್ಳಿ ಭೂ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

`ಪ್ರಾಣ ಬಿಟ್ಟೇವು ಭೂಮಿ ಬಿಡುವುದಿಲ್ಲ~ `ಭೂಮಿ ನಮಗೆ ಬೇಕೆ ಬೇಕು~ `ಗ್ರಾಮದ ಭೂ ರಹಿತರಿಗೆ ಭೂಮಿ ನೀಡಿ, ನಿವೇಶನ ಇಲ್ಲದವರಿಗೆ ನಿವೇಶನ ಕೊಡಿ~ ಎಂಬ ಫಲಕಗಳನ್ನು ಪ್ರದರ್ಶಿಸಿದ ಮಕ್ಕಳು, ಮಹಿಳೆಯರು ಸೇರಿದಂತೆ ಗ್ರಾಮದ ಜನತೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಹಳೇ ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟು ಎಂ.ಜಿ. ರಸ್ತೆಯಲ್ಲಿ ಸಾಗಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣ ತಲುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಹೊನಕೇರಿ ಅವರಿಗೆ ಮನವಿ ಸಲ್ಲಿಸಿದರು.

ಕೂದುವಳ್ಳಿ ಪಂಚಾಯಿತಿಯಲ್ಲಿ ಈ ಭೂಮಿಗೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಣಯವನ್ನು ಕಾರ್ಯರೂಪಕ್ಕೆ ತರಬೇಕು. ಭದ್ರಾ ಅಭಯಾರಣ್ಯ ನಿರಾಶ್ರಿತರಿಗೆ ಬೇರೆ ಭೂಮಿ ಕೊಡಬೇಕು. ಹುಲಿಯೋಜನೆ ಯನ್ನು ಕೈಬಿಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು.

 ಗ್ರಾಮ ಪಂಚಾಯಿತಿಯವರು ನಿವೇಶನ ರಹಿತರನ್ನು ಗುರುತಿಸಿ ಪಟ್ಟಿ ತಯಾರಿಸಿ ಸಂಬಂಧಿಸಿದ ಇಲಾಖೆಯವರಿಗೆ ನೀಡಿದ್ದರೂ ಇದುವರೆಗೆ ಅವರುಗಳಿಗೆ ನಿವೇಶನ ನೀಡಿಲ್ಲ. ಪರಿಸ್ಥಿತಿ ಹೀಗಿದ್ದರೂ ಸರ್ವೆನಂಬರ್ 168/74ರಲ್ಲಿ ಜಾನುವಾರುಗಳ ಮೇವಿಗೆ, ನಿವೇಶನಕ್ಕಾಗಿ ಕಾಯ್ದಿರಿಸಿದ್ದ  ಜಾಗದಲ್ಲಿ 38 ಎಕರೆ ಭೂಮಿಯನ್ನು ಭದ್ರಾ ಅಭಯಾರಣ್ಯ ನಿರಾಶ್ರಿತರಿಗೆ ಜಮೀನು ನೀಡಲು ಜಿಲ್ಲಾಡಳಿತ ಮುಂದಾ ಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕೂಡಲೇ ಜಿಲ್ಲಾಧಿಕಾರಿಗಳು ನಿರಾಶ್ರಿತರಿಗೆ ಭೂಮಿ ನೀಡಲು ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಕೋರಿದರು. ಗ್ರಾಮಸ್ಥರ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೋರಾಟ ರೂಪಿಸಲಾಗುವುದು ಎಂದಿದ್ದಾರೆ.

ನಿವೇಶನರಹಿತರಿಗೆ ನಿವೇಶನ ನೀಡುವಂತೆ ಪಂಚಾಯಿತಿ ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಪ್ರತಿಭಟ ನಾನಿರತರನ್ನುದ್ದೇಶಿಸಿ  ಪಂಚಾಯಿತಿ ಅಧ್ಯಕ್ಷ ಕೆ.ಎಚ್.ಕೃಷ್ಣಪ್ರಸಾದ್ ತಿಳಿಸಿದರು.

ಗ್ರಾಮಸ್ಥರ ಬೇಡಿಕೆಗೆ ಆ ಭಾಗದ ಶಾಸಕರು ಸ್ಪಂದಿಸದಿದ್ದರೆ ಶಾಸಕ ಕುಮಾರಸ್ವಾಮಿ ಮನೆ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಪಿ. ರಾಜರತ್ನಂ ಎಚ್ಚರಿ ಸಿದರು. ಎಂಟು ದಿನದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಭೂಮಿಪಡೆಯಲು ಹೋರಾಟದ ಹಾದಿ ತುಳಿಯ ಬೇಕಾಗುತ್ತದೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ತಿಳಿಸಿದರು.

ಗ್ರಾಮದ ಮುಖಂಡರಾದ ಸುಬ್ಬೇಗೌಡ, ಉದಯ ಶಂಕರ್, ರಾಮಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕಣ್ಣ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಪ್ರದೀಪ್ ಮಾತನಾಡಿದರು. ಭೂ ಹೋರಾಟ ಸಮಿತಿ ಮುಖಂಡರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.