ಚಿಕ್ಕಮಗಳೂರು: ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾಗಿ ರಾಜ್ಯ ಸರ್ಕಾರ ಸ್ಪಂದಿಸುತ್ತಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಜಿಲ್ಲೆಯ ಎಲ್ಲ ಪಟ್ಟಣ ಪ್ರದೇಶಗಳಲ್ಲಿ ಮೂಲಸೌಕರ್ಯ ಬಲಪಡಿಸಿ, ಉತ್ತಮ ನಾಗರಿಕ ಸೌಲಭ್ಯಗಳನ್ನು ನೀಡಲಾಗು ವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಭರವಸೆ ನೀಡಿದರು.
ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಚಿಕ್ಕಮಗಳೂರು- ಕಡೂರು ರೈಲ್ವೆ ಕಾಮಗಾರಿ ಬಹುತೇಕ ಪೂರ್ಣವಾಗುವ ಹಂತಕ್ಕೆ ತಲುಪಿದೆ. ಮುಂದಿನ ವರ್ಷದಲ್ಲಿಯೇ ರೈಲು ಸಂಚಾರ ಆರಂಭವಾಗಲಿದೆ. ನಗರದ ಒಳ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಭದ್ರಾ ನದಿಯಿಂದ ಕಡೂರು, ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ಶೇ.75 ರಷ್ಟು ಆಗಿದೆ. ಈ ವರ್ಷಾಂತ್ಯದಲ್ಲಿ ಸಿವಿಲ್ ಕಾಮಗಾರಿಗೂ ಪೂರ್ಣವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಮಾದರಿ ಗಿರಿಧಾಮವನ್ನಾಗಿ ಕೆಮ್ಮಣ್ಣುಗುಂಡಿಯನ್ನು ಅಭಿವೃದ್ಧಿಪಡಿಸಲಾಗಿದೆ. ಸೆಪ್ಟೆಂಬರ್‌ನಿಂದ ಪ್ರವಾಸಿಗರಿಗೆ ಈ ಪ್ರವಾಸಿ ತಾಣವನ್ನು ಮುಕ್ತಗೊಳಿಸಲಾಗುವುದು. ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಮತ್ತು ಮಾಣಿಕ್ಯ ಧಾರ ಪ್ರವಾಸಿ ತಾಣಗಳ ಅಭಿವೃದ್ಧಿಗೆ 49.5 ಕೋಟಿ ರೂಪಾಯಿ ಯೋಜನೆ ಕೈಗೆತ್ತಿಕೊಳ್ಳ ಲಾಗಿದೆ. ಶೃಂಗೇರಿ ಮತ್ತು ಬಾಳೆಹೊನ್ನೂರು ಪ್ರವಾಸೋದ್ಯಮ ಅಭಿವೃದ್ಧಿಗೆ 9 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಸಡಕ್ ಯೋಜನೆಯಡಿ ಜಿಲ್ಲೆಯಲ್ಲಿ 120.16 ಕೋಟಿ ರೂಪಾಯಿ ಅನುದಾನ ವೆಚ್ಚ ಮಾಡಿ, 432 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಗೆ 1,32,377 ಕುಟುಂಬಗಳು ನೋಂದಾಯಿಸಿ, 50,981 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. 5,662 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಅರಣ್ಯ, ಕಂದಾಯ ಭೂ ಒತ್ತುವರಿ ಸಮಸ್ಯೆಯನ್ನು ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಬಗೆಹರಿಸಲಾಗುವುದು. ಹಾಗೆಯೇ ಹಳದಿ ಎಲೆ ರೋಗ ಸೇರಿದಂತೆ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಹುಲಿ ಸಂರಕ್ಷಣೆಯ ಭದ್ರಾ ಮುಂದುವರಿದ ಯೋಜನೆ ಮತ್ತು ಕುದುರೆಮುಖ ಯೋಜನೆಗಳನ್ನು ಕೈ ಬಿಡಲು ಸರ್ಕಾರ ಈಗಾಗಲಳೇ ಕಾರ್ಯಪ್ರವೃತ್ತವಾಗಿದೆ.
ಕಡೂರು ತಾಲ್ಲೂಕು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿ, ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲಾಗಿದೆ. ಜಿಲ್ಲೆಯ ಒಂದು ಭಾಗ ಅನಾವೃಷ್ಟಿಯಿಂದ ಬರ ಬಂದಿದ್ದರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಮೂಡಿಗೆರೆ ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆಯಿಂದ ಅತಿವೃಷ್ಟಿಯಾಗಿ ನಷ್ಟ ಸಂಭವಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.