ADVERTISEMENT

ಬರ ಸಮಸ್ಯೆ ನೀಗಿಸಲು ಸರ್ಕಾರ ವಿಫಲ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 10:15 IST
Last Updated 23 ಏಪ್ರಿಲ್ 2012, 10:15 IST

ಚಿಕ್ಕಮಗಳೂರು: ಬರದ ಸಮಸ್ಯೆ ನೀಗಿಸಲು ವಿಫಲವಾಗಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ವಜಾ ಮಾಡಲು ಕೇಂದ್ರ ಸರ್ಕಾರಕ್ಕೆ ರಾಜ್ಯಪಾಲರು ಶಿಫಾರಸು ಮಾಡಬೇಕು ಎಂದು ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಒತ್ತಾಯಿಸಿದ್ದಾರೆ.

ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಈ ಹಿಂದೆ ಅತಿವೃಷ್ಟಿಯಿಂದ ಹಾನಿಯಾದ ರೈತ ಮತ್ತು ಬಡ ಕುಟುಂಬದವರಿಗೆ ವಸತಿ ನೀಡಲು ಸರ್ಕಾರ ವಿಫಲವಾಗಿದೆ. ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡುತ್ತಿರುವ ಬಿಜೆಪಿ ಸರ್ಕಾರ, ಜನವಸತಿ ಸಮಸ್ಯೆ ಪರಿಹರಿಸಲು ಕಿಂಚಿತ್ತೂ ಒತ್ತುಕೊಟ್ಟಿಲ್ಲ. ಬರದಿಂದ ಜನರು ಆಹಾರದ ಕೊರತೆ, ಜಾನುವಾರು ಮೇವು, ನೀರಿಲ್ಲದೇ ಪರದಾಡುವಂತಾಗಿದೆ. ಕುಡಿಯುವ ನೀರು ಪೂರೈಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.

ತರೀಕೆರೆ ಪುರಸಭೆ ಅಧ್ಯಕ್ಷೆ ಪಾರ್ವತಮ್ಮ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ, ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರೂ.25 ಲಕ್ಷ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ದುಗ್ಲಾಪುರದ ಬಲದಂಡೆ ನಾಲೆಯಿಂದ ನೀರು ಪೂರೈಸಲಾಗುತ್ತಿದ್ದು, ಕೆಲವು ಸಂದರ್ಭದಲ್ಲಿ ಇದರ ಸಮೀಪದ ಮಾಸಿಕೆರೆಯಿಂದ ನೀರು ಶುದ್ಧೀಕರಿಸಿ ಪೂರೈಸಲಾಗುತ್ತಿದೆ. ಮಾಸಿಕೆರೆ ಸುತ್ತ ಯಾವುದೇ ಬೇಲಿ ಭದ್ರತೆ ಇಲ್ಲ.
 
ಸುತ್ತಮುತ್ತಲ ಗ್ರಾಮೀಣ ಭಾಗದ ಜನರು ನೀರು ಮಲಿನ ಮಾಡುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ತರೀಕೆರೆ ಪಟ್ಟಣದ ಕಮನಹಟ್ಟಿಯಲ್ಲಿರುವ ಟ್ಯಾಂಕ್ ಶಿಥಿಲವಾಗಿದೆ. ತುರ್ತು ದುರಸ್ತಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷೆ ಹೇಮಲತಾ, ಟಿ.ಕೆ.ರಮೇಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.