ADVERTISEMENT

ಬೀರೂರು: ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:00 IST
Last Updated 13 ಫೆಬ್ರುವರಿ 2012, 8:00 IST

ಬೀರೂರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪಟ್ಟಣದ ಸಾಮಾಜಿಕ ಸೇವಾ ಕಾರ್ಯಕರ್ತರ ಸಂಘದ ಸದಸ್ಯರು ಇತ್ತೀಚೆಗೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ಆಸ್ಪತ್ರೆಗೆ ತರೀಕೆರೆ, ಹೊಸದುರ್ಗ ಮುಂತಾದ ಕಡೆಗಳಿಂದ ರೋಗಿಗಳು ಬರುತ್ತಿದ್ದು, ಇಲ್ಲಿ ಹಲವು ದಿನಗಳಿಂದ ಮಕ್ಕಳ ತಜ್ಞರು ಇಲ್ಲ. ಹೆರಿಗೆಗೆ ದಾಖಲಾದರೆ ಯಾವುದೂ ಸಾಮಾನ್ಯ ಹೆರಿಗೆ ಆಗುವುದಿಲ್ಲ. ಸಿಸೇರಿಯನ್ ಮುಖಾಂತರ ಬಡವರಿಂದ ಹಣವನ್ನು ಬಲವಂತವಾಗಿ ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು. 

 ಆಸ್ಪತ್ರೆಗೆ ನೀಡಿರುವ ಇಸಿಜಿ ಯಂತ್ರ ಉಪಯೋಗಕ್ಕೆ ಬರುವಂತಿಲ್ಲ. ದಾದಿಯರು ರೋಗಿಗಳನ್ನು ಕೀಳಾಗಿ ಕಾಣುವುದು, ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಸಕಾಲದಲ್ಲಿ ಬಾರದಿರುವುದು, ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕೊರತೆ, ಪಾರದರ್ಶಕ ಆಡಳಿತ ವ್ಯವಸ್ಥೆ ಇಲ್ಲ. ಲಭ್ಯವಿರುವ ಔಷಧೋಪಚಾರದ ಬಗ್ಗೆ ಸೂಕ್ತ ಮಾಹಿತಿ ನೀಡುವುದಿಲ್ಲ ಎಂದು ಆರೋಪಿಸಿರುವ ಸಾಮಾಜಿಕ ಸೇವಾ ಕಾರ್ಯಕರ್ತರ ಸಂಘದ ಸದಸ್ಯರು, ಸರ್ಕಾರ ಸಂಬಳ ನೀಡಿದರೂ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳ ಬಳಿ ಹಣ ವಸೂಲು ಮಾಡುವುದು ಏಕೆ ? ಚಿಕಿತ್ಸೆ ಉಚಿತವಾಗಿ ನೀಡಲು ತಾನೇ ಆಸ್ಪತ್ರೆ ಇರು ವುದು, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಪ್ರತಿಭಟನೆ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿ ಕೆಂಚೇಗೌಡ ಮತ್ತು ಶಾಸಕರ ಸಹಾಯಕರು ಮನವಿ ಸ್ವೀಕರಿಸಿ ನ್ಯೂನತೆ ಸರಿಪಡಿಸುವ ಭರವಸೆ ನೀಡಿದರು.

 ಭರವಸೆಯಂತೆ ನಡೆಯದಿದ್ದರೆ ಇನ್ನು ಹದಿನೈದು ದಿನಗಳ ಬಳಿಕ  ಜಿಲ್ಲಾಧಿಕಾರಿಗಳ ಕಚೇರಿಗೆ ಬೀರೂರಿನಿಂದ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ನಡೆಸಲಾಗು ವುದು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಸರಸ್ವತಿಪುರ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ನಾಗರಾಜ್, ವೀರಭದ್ರಪ್ಪ, ಪ್ರಕಾಶ್, ಮಂಜುನಾಥ್, ಮಲ್ಲಿಕಾರ್ಜುನ, ಷಣ್ಮುಖಪ್ಪ, ರಂಗನಾಥ್,ಹೇಮಂತ್, ಫಯಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.