ADVERTISEMENT

‘ಬೇಡಿಕೆಗಳಿಗೆ ಸ್ಪಂದಿಸುವವರಿಗೆ ದಸಂಸ ಬೆಂಬಲ’

ವಿಧಾನಸಭಾ ಚುನಾವಣೆ: ಬಿಎಸ್‌ಪಿಗೆ ದಲಿತ ಸಂಘರ್ಷ ಸಮಿತಿ ಬೆಂಬಲ ಇಲ್ಲ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 10:35 IST
Last Updated 3 ಏಪ್ರಿಲ್ 2018, 10:35 IST

ಬಾಳೆಹೊನ್ನೂರು: ದಲಿತರ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸುವ ಅಭ್ಯರ್ಥಿಗೆ ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲ ಕೆ.ಪಿ.ರಾಜರತ್ನಂ ಸ್ಪಷ್ಟಪಡಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಲಿತರು ಭೂಮಿ, ಮನೆ, ಸ್ಮಶಾನದಂತಹ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದು, ದಲಿತರ ಸಮಸ್ಯೆಗಳನ್ನು ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು   ಸೋಮವಾರ ಶೃಂಗೇರಿ ಕ್ಷೇತ್ರದ ಮೂರು ತಾಲ್ಲೂಕಿನ ಸಂಘಟನೆಯ ಸದಸ್ಯರ ಸಭೆಯಲ್ಲಿ ಯಾವ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಯಾವುದೇ ತೀರ್ಮಾನವನ್ನು ಸಂಘಟನೆ ತೆಗೆದುಕೊಂಡಿಲ್ಲ. ಆದರೆ ಸಂಘಟನೆಯ ಪ್ರಮುಖ ಆರು ಬೇಡಿಕೆಗಳನ್ನು ಈಡೇರಿಸುವ ಪಕ್ಷದ ಅಭ್ಯರ್ಥಿಗೆ ಈ ಬಾರಿ ಬೆಂಬಲ ನೀಡುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

ಶೃಂಗೇರಿ ಕ್ಷೇತ್ರ ಸಂಚಾಲಕ ವಸಂತ್ ಕುಮಾರ್ ಮಾತನಾಡಿ, ‘ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮತದಾರರು ಇದ್ದು, ಸಾಗರ್ ಬಣ ಕ್ಷೇತ್ರದಾದ್ಯಂತ ಸುಮಾರು 71 ಶಾಖೆಗಳನ್ನು ಹೊಂದಿದೆ. 7,210 ಸದಸ್ಯರು ಇದ್ದು, ಸಂಘಟನೆ ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ’ ಎಂದರು. ಬಿಎಸ್‌ಪಿ ಪಕ್ಷ ದಲಿತರಿಗೆ ಮೋಸ ಮಾಡಿದ್ದು, ಅವರಿಗೂ ನಮ್ಮ ಬೆಂಬಲವಿಲ್ಲ. 10 ದಿನಗಳ ನಂತರ ಕ್ಷೇತ್ರದ ಮೂರು ತಾಲ್ಲೂಕು, ಖಾಂಡ್ಯ ಹೋಬಳಿ ಸಮಿತಿಯ ಮುಖಂಡರೊಂದಿಗೆ ಚರ್ಚಿಸಿ ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಜಿಲ್ಲಾ ವಿಭಾಗೀಯ ಸಂಚಾಲಕ ಕಡ್ಲೇಮಕ್ಕಿ ಡಿ.ಕುಮಾರ್, ಉಮೇಶ್, ಎಂ.ಕೆ.ಸಂಜೀವ, ಎಸ್.ಶೇಖರ್, ದಿನೇಶ್, ಪ್ರಧೀಪ್ , ವಿನಯ್ ಕುಮಾರ್, ಎಚ್.ಎಸ್.ಗೋಪಾಲ್ ಇದ್ದರು.

ADVERTISEMENT

ಬೇಡಿಕೆಗಳು

ದಲಿತರ ಒಂದು ಕುಟುಂಬಕ್ಕೆ ಒಂದು ಎಕರೆ ಭೂಮಿ ಮತ್ತು ಒತ್ತುವರಿ ಮಾಡಿಕೊಂಡಿರುವವರಿಗೆ 5 ಎಕರೆ ಭೂಮಿಯನ್ನು ಬಾಡಿಗೆ ಆದಾರದಲ್ಲಿ ನೀಡಬೇಕು. ಪಂಚಾಯಿತಿ ಸೇರಿದಂತೆ ನಡೆಯುವ ಎಲ್ಲ ಚುನಾವಣೆಗಳಲ್ಲಿ ದಲಿತ ಸಂಘಟನೆಯನ್ನು ಗುರುತಿಸಿ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು.ನಿಗಮ ಮಂಡಳಿ ಮತ್ತು ಸರ್ಕಾರದ ಕಾಮಗಾರಿ ಗುತ್ತಿಗೆ ನೀಡುವಲ್ಲಿ ದಲಿತರಿಗೆ ಹೆಚ್ಚಿನ ಅವಕಾಶ ನೀಡಬೇಕು. ಫಾರಂ ನಂ53 ಹಾಗೂ 94ಸಿ ಯಲ್ಲಿ ಹಕ್ಕುಪತ್ರ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.