ADVERTISEMENT

ಭಾರಿ ಮಳೆ: ಮರಬಿದ್ದು ಮಹಿಳೆಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 12:27 IST
Last Updated 2 ಆಗಸ್ಟ್ 2013, 12:27 IST

ಹೇರೂರು (ಬಾಳೆಹೊನ್ನೂರು):  ಬಾಳೆಹೊನ್ನೂರು ಪಟ್ಟಣದ ಸುತ್ತಮುತ್ತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಗಾಳಿಯಿಂದಾಗಿ ಮರ ಮನೆ ಮೇಲೆ ಬಿದ್ದು ಮಹಿಳೆ ಗಾಯಗೊಂಡ ಘಟನೆ ನಡೆದಿದೆ.

ದಿನವಿಡೀ ಸುರಿಯುತ್ತಿರುವ ಮಳೆ ಗಾಳಿಯಿಂದಾಗಿ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾ.ಪಂ.  ಕಚೇರಿ ಹಿಂಭಾಗದ ಕಾಲೋನಿಯ ಬಿಳಿಯ ಎಂಬುವವರ ಮನೆ ಮೇಲೆ ಬುಧವಾರ ಭಾರಿ ಮರ ಬಿದ್ದ ಪರಿಣಾಮ ಶೇಷಮ್ಮ (65) ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡು ಜಯಪುರ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಮನೆ ಸಂಪೂರ್ಣ ನೆಲಸಮಗೊಂಡಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಶೇಷಮೂರ್ತಿ, ಗ್ರಾಮ ಸಹಾಯಕ ನವೀನ್, ಹೇರೂರು ಗ್ರಾ.ಪಂ. ಅಧ್ಯಕ್ಷ ಡಿ.ಎನ್. ಜಗದೀಶ್, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಭೇಟಿ ನೀಡಿದರು.

ಕೊಪ್ಪ ತಾಲ್ಲೂಕಿನ ಬಿಳಾಲುಕೊಪ್ಪ ಸಮೀಪದ ಬೆತ್ತದಕೊಳಲು ಆನೆಮನೇಯ ರಾಘವೇಂದ್ರ ಎಂಬುವವರ ಮನೆ ಮೇಲೆ ಮರ ಬಿದ್ದ ಪರಿಣಾಮ ನಷ್ಟ ಸಂಭವಿಸಿದೆ.

ಹಲವಡೆ ರಸ್ತೆ ಬಂದ್: ಪಟ್ಟಣದ ಸಮೀಪ ಹರಿಯುತ್ತಿರುವ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕಳಸ ಬಾಳೆ ಹೊನ್ನೂರು ಸಂಪರ್ಕ ಕಲ್ಪಿಸುವ ಬೈರೆಗುಡ್ಡ ಸಮೀಪ  ಸಂಜೆ ವೇಳೆ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಆಡಳಿತ ಭದ್ರಾ ನದಿ ದಂಡೆಯ ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಕಳಿಸುವತ್ತ ಕಾರ್ಯ ಕೈಗೊಂಡಿದೆ. ಭಾರಿ ಮಳೆಯಿಂದಾಗಿ ಜಯಪುರ ಮತ್ತು ಬಾಳೆಹೊನ್ನೂರಿನ ಹಲವಡೆ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ನಡೆದಿದೆ. ಹೇರೂರು ಮೂಲಕ ಬಸರಿಕಟ್ಟೆ ಸಂಪರ್ಕ ಕಲ್ಪಿಸುವ ಮಾರ್ಗದ ಹಾಡುಗಾರು ಎಂಬಲ್ಲಿ ಬೃಹತ್ ಮರ ಬಿದ್ದ ಕಾರಣ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮೇಗೂರು -ಕೊಗ್ರೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಧರೆ ಕುಸಿದ ಕಾರಣ ಹೊರನಾಡಿಗೆ ಸಂಪರ್ಕ ಕಡಿತಗೊಂಡಿದೆ.

ಅಪಘಾತ: ಸೀಗೋಡು ಎಸ್ಟೇಟ್ ಸಮೀಪ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಆಮ್ನಿ ವ್ಯಾನ್ ಮರಕ್ಕೆ ಡಿಕ್ಕಿ ಹೊಡಿದ ಪರಿಣಾಮ ಚಾಲಕ ಹೇರೂರು ರವಿ ನಗರ ನಿವಾಸಿ ಸಂತೋಷ್ ಎಂಬವರು ತೀವ್ರ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.