ADVERTISEMENT

ಮುದ ನೀಡಿದ ಸಾಂಸ್ಕೃತಿಕ ರಂಜನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2011, 19:45 IST
Last Updated 26 ಜನವರಿ 2011, 19:45 IST
ಮುದ ನೀಡಿದ ಸಾಂಸ್ಕೃತಿಕ ರಂಜನೆ
ಮುದ ನೀಡಿದ ಸಾಂಸ್ಕೃತಿಕ ರಂಜನೆ   

ಮಡಿಕೇರಿ: ಕೊಡಗು ಜಿಲ್ಲಾಡಳಿತದ ವತಿಯಿಂದ ನಗರದ ಕೋಟೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಬಾರಿ ಒಂದಕ್ಕಿಂತ ಒಂದು ಶಾಲೆ ವಿಭಿನ್ನ, ಉತ್ತಮ ಕಾರ್ಯಕ್ರಮ ನೀಡಿದ್ದು ವಿಶೇಷವಾಗಿತ್ತು. ಶಾಲಾ ಮಕ್ಕಳು ದೇಶದ ಏಕತೆ, ಸೌಹಾರ್ದ ಹಾಗೂ ಸಾರ್ವಭೌಮತ್ವ ಎತ್ತಿ ಹಿಡಿಯುವ ಕಾರ್ಯಕ್ರಮನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು.

‘ಲಿಟ್ಲ್ ಫ್ಲವರ್’ ಕಾನ್ವೆಂಟ್‌ನ ಪುಟಾಣಿಗಳ ನೃತ್ಯದೊಂದಿಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮ, ಗೋಣಿಕೊಪ್ಪಲಿನ ‘ಕಾಲ್ಸ್’ ಶಾಲಾ ಮಕ್ಕಳ ಅಂಗ ಕಸರತ್ತಿನ ನೃತ್ಯದೊಂದಿಗೆ ಕೊನೆಗೊಂಡಿತು. ಮಹದೇವಪೇಟೆಯ ‘ಕ್ರೆಸೆಂಟ್’ ಶಾಲೆ ಮಕ್ಕಳು ಭಯೋತ್ಪಾದನೆ ಹಾಗೂ ವರದಕ್ಷಿಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕೂಡ ಇದೇ ಪ್ರಥಮ ಬಾರಿಗೆ ಉತ್ತಮ ಕಾರ್ಯಕ್ರಮ ನೀಡಿತು. ಅಲ್ಲದೆ, ರಾಜರಾಜೇಶ್ವರಿ ವಿದ್ಯಾಲಯ, ಸಂತ ಮೈಕಲರ ಶಾಲೆ, ಸಂತ ಜೋಸೆಫರ ಶಾಲಾ ಮಕ್ಕಳು  ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಅಂತಿಮವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ ನೃತ್ಯ ಪ್ರದರ್ಶನ ರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.

ಪ್ರತಿಯೊಂದು ಶಾಲೆಯ ಮಕ್ಕಳು ಕಾರ್ಯಕ್ರಮ ನೀಡಿದಾಗಲೂ ಸಾರ್ವಜನಿಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಎಂದಿನಂತೆ, ಕೂರಲು ಜಾಗವಿಲ್ಲದೆ ಮಕ್ಕಳು, ಪೋಷಕರು ಆವರಣದ ಸುತ್ತಲೂ ನಿಂತುಕೊಂಡೇ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಇದಕ್ಕೂ ಮುನ್ನ ಪೊಲೀಸ್, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.