ADVERTISEMENT

ಮೂಲಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 9:25 IST
Last Updated 13 ಜುಲೈ 2013, 9:25 IST

ಚಿಕ್ಕಮಗಳೂರು: ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶುಕ್ರವಾರ ಸಿಪಿಐ (ಎಂ.ಎಲ್.) ಪಂಚಾಯಿತಿ ಸಮಿತಿ ಕಾರ್ಯಕರ್ತರು ಶುಕ್ರವಾರ ಹಿರೇಕೊಳಲೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ದರಗುಣಿ ಗ್ರಾಮದಲ್ಲಿ ಕೆಲವು ರಸ್ತೆಗಳು ದುರಸ್ತಿಯಾಗಿಲ್ಲ. ಚರಂಡಿಗಳು ಮುಚ್ಚಿ ಹೋಗಿವೆ. ನಿವೇಶನ ರಹಿತರಿಗೆ ಚಿಕ್ಕೊಳಲೆ ಗ್ರಾಮದಲ್ಲಿ ಗ್ರಾಮಠಾಣಾ 4.20 ಎಕರೆ ಜಮೀನಿದ್ದು, ಅದನ್ನು ಖುಲ್ಲಾಪಡಿಸಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.

ಹೊಸಪುರ ಗ್ರಾಮಕ್ಕೆ ರಸ್ತೆಗಳೇ ಇಲ್ಲ. ಇರುವ ಒಂದು ರಸ್ತೆಗೆ ಜಲ್ಲಿ ಹಾಕಿಲ್ಲ. ಸುವರ್ಣ ಗ್ರಾಮ ಯೋಜನೆಯಡಿ ರಸ್ತೆಗೆ ಡಾಂಬರ್ ಹಾಕುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಚರಂಡಿ ಸಮರ್ಪಕವಾಗಿ ಇಲ್ಲದಿರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ತಿರುಗಾಡಲು ಜನರಿಗೆ ತೊಂದರೆಯಾಗಿದೆ ಎಂದರು.

ವಡೇರಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇರುವ ಕೊಳವೆ ಬಾವಿಗಳಲ್ಲಿ ನೀರು ಸಾಕಾಗುತ್ತಿಲ್ಲ. ಶಾಶ್ವತ ಮತ್ತು ಶುದ್ಧ ಕುಡಿಯುವ ನೀರು ನೀಡಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ನರಗನಹಳ್ಳಿಯ ಗುಂಪು ಯೋಜನೆ ಮನೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.  ದರಗುಣಿಯಿಂದ ಹಿರೆಕೊಳಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇವಲ ಜಲ್ಲಿ ಹಾಕಲಾಗಿದೆ. ಡಾಂಬರೀಕರಣ ನಡೆದಿಲ್ಲ. ವಸತಿ ಮತ್ತು ನಿವೇಶನ ನೀಡಬೇಕು. ಬೀದಿ ದೀಪ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪಂಚಾಯಿತಿ ಸಮಿತಿ ಕಾರ್ಯದರ್ಶಿ ಮುಳ್ಳೇಶ, ಸಹ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಸಮಿತಿ ಸದಸ್ಯರಾದ ಕೆ.ಆರ್.ಮಂಜುನಾಥ, ತಾಲ್ಲೂಕು ಕಾರ್ಯದರ್ಶಿ ಕೆ.ಎಚ್.ಮಹೇಶ್, ಗ್ರಾಮ ಸಮಿತಿ ಕಾರ್ಯದರ್ಶಿ ದೇವರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.