ADVERTISEMENT

‘ಯೋಜನೆಗಳು ಎಲ್ಲ ವರ್ಗದವರಿಗೆ ತಲುಪಿವೆ’

ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 11:25 IST
Last Updated 4 ಏಪ್ರಿಲ್ 2018, 11:25 IST

ಕೊಪ್ಪ: ‘ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಎಲ್ಲ ವರ್ಗದ ಜನರಿಗೆ ತಲುಪಿವೆ’ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಓಣಿತೋಟ ರತ್ನಾಕರ್ ತಿಳಿಸಿದರು.ತಾಲ್ಲೂಕಿನ ತಲಮಕ್ಕಿಯಲ್ಲಿ ಮಂಗಳವಾರ ಕುದುರೆಗುಂಡಿ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯಲ್ಲಿ ಪಂಚಾಯಿತಿ ಉಸ್ತುವಾರಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಿದ್ಧರಾಮಯ್ಯ ಅಹಿಂದ ವರ್ಗಕ್ಕೆ ಮಾತ್ರ ಸೌಲಭ್ಯಗಳನ್ನು ಕೊಟ್ಟಿದ್ದಾರೆಂದು ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಶೂ ಭಾಗ್ಯ, ಮನಸ್ವಿನಿ, ಮಾತೃಪೂರ್ಣದಂತಹ ಯೋಜನೆಗಳ ಸೌಲಭ್ಯ ಎಲ್ಲ ವರ್ಗದವರಿಗೂ ಸಿಕ್ಕಿದ್ದು, ದಲಿತ, ಹಿಂದುಳಿದವರ, ಅಲ್ಪಸಂಖ್ಯಾತರ ಸಾಲಮನ್ನಾದ ಜೊತೆಗೆ ಎಲ್ಲ ವರ್ಗದ ರೈತರ, ಆಶ್ರಯ, ಭಾಗ್ಯಜ್ಯೋತಿ ಫಲಾನುಭವಿಗಳ ಸಾಲ ಮನ್ನಾ ಮಾಡಿದ್ದಾರೆ’ ಎಂದರು.‘14 ವರ್ಷ ಶೃಂಗೇರಿ ಕ್ಷೇತ್ರದ ಶಾಸಕರಾಗಿ, ಮಂತ್ರಿಯೂ ಆಗಿರುವ ಜೀವರಾಜ್ ಕ್ಷೇತ್ರದ 860 ಕಿ.ಮೀ. ರಸ್ತೆಗಳ ಪೈಕಿ ಅಭಿವೃದ್ಧಿಪಡಿಸಿದ್ದು ಕೇವಲ 160 ಕಿ.ಮೀ. ಮಾತ್ರ. ಈ ಕ್ಷೇತ್ರದ ಎಲ್ಲ ಕಾಂಗ್ರೆಸ್ ಶಾಸಕರು ಬಡವರಿಗೆ ಸಾವಿರಾರು ನಿವೇಶನ ಹಂಚಿದ್ದಾರೆ. ಆದರೆ ಜೀವರಾಜ್ ಒಂದು ಗುಂಟೆ ಭೂಮಿಯನ್ನೂ ಹಂಚಿಲ್ಲ. ಇದು ಅವರ ಸಾಧನೆಯೇ ಎಂಬುದನ್ನು ಜನರೇ ತೀರ್ಮಾನಿಸಬೇಕು’ ಎಂದರು.

ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನುಗ್ಗಿ ಮಂಜುನಾಥ್ ಮಾತನಾಡಿ, ’ರಾಜ್ಯದಲ್ಲಿ ಕಾಂಗ್ರೆಸ್‍ನ ಎಲ್ಲ ಮುಖ್ಯಮಂತ್ರಿಗಳು ಬಡವರಿಗೆ, ರೈತರಿಗೆ ಭೂಮಿ ಹಂಚಿದ್ದು, ಬಿಜೆಪಿ ಸರ್ಕಾರ ಭೂಕಬಳಿಕೆ ನಿಷೇಧ ಕಾಯ್ದೆ ತಂದು, ರೈತರು ಜೀವನೋಪಾಯಕ್ಕಾಗಿ ಮಾಡಿರುವ ಒತ್ತುವರಿಯನ್ನೂ ಖುಲ್ಲಾಗೊಳಿಸಿ, ಭೂಗಳ್ಳರೆಂದು ಕೇಸು ಹಾಕಿ ಬಂಧಿಸಹೊರಟಿತ್ತು. ಆದರೆ ಸಿದ್ಧರಾಮಯ್ಯ ಸರ್ಕಾರ ಬಂದ ಮೇಲೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ರೈತರ ಅಕ್ರಮ ಒತ್ತುವರಿ ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಿದ್ದಲ್ಲದೆ, 94ಸಿ ಮತ್ತು 94ಸಿಸಿ ಫಲಾನುಭವಿಗಳಿಗೂ ಹಕ್ಕುಪತ್ರ ನೀಡಿದ್ದಾರೆ’ಎಂದರು. ಕಸಬಾ ಹೋಬಳಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಎಲ್. ದೀಪಕ್ ಕುದುರೆಗುಂಡಿ ಮಾತನಾಡಿದರು.

ADVERTISEMENT

ಮುಖಂಡರಾದ ಎನ್.ಎಲ್.ನಾಗೇಶ್, ಮುತ್ತುಗದಾನಿ ಶ್ರೀನಿವಾಸ್, ಶಾಂತಕುಮಾರ್, ಹರೀಶ್, ಶಂಕರಪ್ಪ, ಗೋಪಿ, ಶಿವರಾಜ್, ರಾಘವೇಂದ್ರ, ಉದಯ, ಗೀತ ರಾಮಚಂದ್ರ, ಲಕ್ಷ್ಮೀ, ಭಾರತಿ, ಗೀತ, ಪ್ರೇಮ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.