ADVERTISEMENT

`ರಾಜ್ಯದಲ್ಲಿ ಶೌಚಾಲಯ ನಿರ್ಮಾಣಕ್ಕೆ ಚಿಂತನೆ'

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 10:19 IST
Last Updated 19 ಡಿಸೆಂಬರ್ 2012, 10:19 IST

ತರೀಕೆರೆ: ಆರ್ಟ್ ಆಫ್ ಲೀವಿಂಗ್ ಪೌಂಡೇಷನ್ ಬಯಲು ಶೌಚಾಲಯ ಮುಕ್ತ ಸಮಾಜವನ್ನು ನಿರ್ಮಿಸಲು ಮುಂದಾಗಿದ್ದು, ರಾಜ್ಯದ ಕೆಲವು ಆಯ್ದ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ಸಂಸ್ಥೆಯ ಜಿಲ್ಲಾ ಯೋಜನಾ ಮುಖ್ಯಸ್ಥ ನಾಗರಾಜ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯ ಅನುಷ್ಠಾನ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಇರುವ ಶೌಚಾಲಯಗಳ ಗುಂಡಿಯಲ್ಲಿ ಸಂಗ್ರಹವಾದ ಮಲವನ್ನು ಮತ್ತು ಘನತ್ಯಾಜ್ಯ ವಸ್ತುಳನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ತರಕಾರಿ ಮತ್ತು ಹಣ್ಣುಗಳಲ್ಲಿ ಲಭ್ಯವಿರುವ ಬ್ಯಾಕ್ಟೀರಿಯಾಗಳನ್ನು ಬಳಸಿ ತಯಾರಿಸಿದ `ಎಫೆಕ್ಟಿವ್ ಮೈಕ್ರೋಫ್' ಎಂಬ ದ್ರಾವಣವನ್ನು ಸಂಸ್ಥೆ ಸಿದ್ಧಪಡಿಸಿದೆ. ಇವುಗಳ ಮರುಬಳಕೆಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸಿ.ದೇವರಾಜಪ್ಪ ಮಾತನಾಡಿ, ತಾಲ್ಲೂಕಿನ ಗೌರಾಪುರ, ಕಾಮನದುರ್ಗ, ಅಜ್ಜಂಪುರ, ತಿಗಡ, ಗೋಪಾಲ ಮತ್ತು ಹಲಸೂರು ಗ್ರಾಮಗಳು ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದಿದ್ದು, ಪ್ರಸ್ತುತ ಸಾಲಿನಲ್ಲಿ ಕಂಚಿಕೊಪ್ಪ ಮತ್ತು ನೇರಲಕೆರೆ ಗ್ರಾಮಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ. ಇನ್ನು ಮುಂದೆ ಮಾನವ ಸಂಪನ್ಮೂಲ ಬಳಸಿ ಮಲ ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ತಾಲ್ಲೂಕಿನ ಹತ್ತು ಗ್ರಾಮ ಪಂಚಾಯಿತಿಗಳು ಘನತ್ಯಾಜ್ಯ ನಿರ್ವಹಣೆ  ಪರಿಣಾಮಕಾರಿಯಾಗಿ ಮಾಡುತ್ತಿವೆ ಎಂದರು.

ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಕೆ.ವಿ.ಪದ್ಮನಾಭ ಮಾತನಾಡಿ, ಗ್ರಾಮೀಣರಲ್ಲಿ ಶೌಚಾಲಯದ ಬಗ್ಗೆ ಅರಿವು ಮೂಡಿಸಲು ಬೀದಿನಾಟಕ ಮತ್ತು ಕಿರುಚಿತ್ರಗಳನ್ನು ಪ್ರದರ್ಶಿಸಲು ಪಂಚಾಯಿತಿಯ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದರು.

ಉದ್ಯೋಗಖಾತ್ರಿ ಯೋಜನೆಯ ತಾಲ್ಲೂಕು ನಿರ್ದೇಶಕ ಗಂಗಾಧರ ಮೂರ್ತಿ, ಯೋಜನಾಧಿಕಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಗೀಶ್, ಪಿಡಿಒಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.