ತರೀಕೆರೆ: ಅಲ್ಲಿ ರಾಜಕೀಯ ಪಕ್ಷದ ಮುಖಂಡರಿರಲಿಲ್ಲ, ಜನ ಪ್ರತಿನಿಧಿ ಅಥವಾ ಸರ್ಕಾರಿ ಅಧಿಕಾರಿಗಳು ಮತ್ತು ಸಂಸ್ಥೆಯ ಮುಖ್ಯಸ್ಥರು ಇರಲಿಲ್ಲ ಆದರೆ ಅದೊಂದು ಅದ್ದೂರಿ ಸಮಾರಂಭವಾಗಿ ಮಾರ್ಪಟ್ಟಿತ್ತು.
ಪಟ್ಟಣದ ತುಂಗಭದ್ರಾ ವಸತಿ ಶಾಲೆಯಲ್ಲಿ ಭಾನುವಾರ ನಡೆದ ಶಾಲೆಯ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವ ಇದಕ್ಕೆ ಸಾಕ್ಷಿಯಾಯಿತು.
ಶಾಲೆಯಲ್ಲಿನ 63 ಮಕ್ಕಳು ಮತ್ತು ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಪೋಷಕರು ಒಬ್ಬೊಬ್ಬರಾಗಿ ಬಂದು ಸರಸ್ವತಿ ದೇವಿಯ ಭಾವಚಿತ್ರಕ್ಕೆ ನಮಸ್ಕರಿಸಿ, ಒಂದೊಂದು ಮೇಣದ ಬತ್ತಿಯನ್ನು ಹಚ್ಚಿ ಕೇಕ್ ಕತ್ತರಿಸಿ ಸಾಮೂಹಿಕವಾಗಿ ಹುಟ್ಟು ಹಬ್ಬವನ್ನು ಆಚರಿಸಿದರು.
ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನಿವೃತ್ತ ಸೈನಿಕ ಗಾಳಪ್ಪ ನೆರವೇರಿಸಿ ಮಕ್ಕಳಿಗೆ ಶಿಸ್ತು ಮತ್ತು ಸಂಯಮದ ಬಗ್ಗೆ ತಿಳಿಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜಸೇವಕ ರಾಜಗೋಪಾಲ ಶ್ರಮದ ಮತ್ತು ಸಮಯದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.
ಜೀವವಿಮಾ ನೌಕರ ಲೋಕೇಶ್, ಎಸ್‌ಜೆಎಂ ಕಾಲೇಜಿನ ನೌಕರ ತಿಪ್ಪೇಶ್, ಪೋಷಕರಾದ ಅರ್ಜುನ್, ಮೂರ್ತಿ, ಗೌರಮ್ಮ, ಗೌರಿಬಾಯಿ, ಶಿಕ್ಷಕರಾದ ಜಗದೀಶ್, ರಂಗನಾಥ್, ರೇಖಾ, ಸವಿತಾ, ಚಂದ್ರಕಲಾ, ಅನಿತಾ ಮತ್ತು ವ್ಯವಸ್ಥಾಪಕ ತಿಪ್ಪೆಸ್ವಾಮಿ ತಮ್ಮ ಅನಿಸಿಕೆಗಳನ್ನು ಮಕ್ಕಳಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.