ADVERTISEMENT

ವೇತನ ಪರಿಷ್ಕರಣೆಗೆ ಒತ್ತಾಯ, ಕಾಯಂಗೊಳಿಸಲು ಆಗ್ರಹ. ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕಾರ-ಮುಷ್ಕರ.

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 8:40 IST
Last Updated 18 ಫೆಬ್ರುವರಿ 2011, 8:40 IST

ಚಿಕ್ಕಮಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಪ್ಪ, ನರಸಿಂಹರಾಜಪುರ, ಅಜ್ಜಂಪುರ ಹಾಗೂ ಶೃಂಗೇರಿಯಲ್ಲಿ ಅತಿಥಿ ಉಪನ್ಯಾಸಕರು ಗುರುವಾರ ಪ್ರತಿಭಟನೆ ನಡೆಸಿದರು.

ಶೃಂಗೇರಿ : ಶಾಸಕರ ಮಾತುಕತೆ
ಶೃಂಗೇರಿ : ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರು ಗುರುವಾರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಾಲೇಜಿನಲ್ಲಿ ತರಗತಿ ಬಹಿಷ್ಕರಿಸಿ ಧರಣಿ ನಡೆಸಿದರು. ಶಾಸಕ ಡಿ.ಎನ್. ಜೀವರಾಜ್ ಮುಷ್ಕರ ನಿರತ ಉಪನ್ಯಾಸಕ ರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಜೆ. ಬೃಜೇಶ್ ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿ ಮಾತನಾಡಿ, ವೇತನ ಹೆಚ್ಚಿಸುವಂತೆ ಹಾಗೂ ಕೆಲಸವನ್ನು ಕಾಯಂಗೊಳಿಸುವಂತೆ ಆಗ್ರಹಿಸಿದರು.

ಶಾಸಕರು ಉಪನ್ಯಾಸಕರ ಬೇಡಿಕೆಗಳನ್ನು ಶೀಘ್ರದಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಮುಷ್ಕರ ನಿಲ್ಲಿಸಿದರು. ಹಾಗೇಯೇ ಬೇಡಿಕೆಗಳು ಈಡೇರಿಸದಿದ್ದರೆ ಉಪವಾಸವನ್ನು ಇದೇ 21 ರಿಂದ ನರಸಿಂಹರಾಜಪುರದಿಂದ ಹಮ್ಮಿಕೊಳ್ಳು ವುದಾಗಿ ಸಂಘದ ಅಧ್ಯಕ್ಷರು ಈ ಸಂದರ್ಭದಲ್ಲಿ ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಪ್ರಕಾಶ್, ಸುದರ್ಶನ, ಗೌತಮ್ ಜಿ. ಭಟ್, ಸಚಿನ್, ವಿನುತಾ, ಮಮತಾ ಸೇರಿದಂತೆ 70 ಜನ ಅತಿಥಿ ಉಪನ್ಯಾಸಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ನರಸಿಂಹರಾಜಪುರ: ಪ್ರತಿಭಟನೆ

ನರಸಿಂಹರಾಜಪುರ:
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರದಿಂದ ತರಗತಿ ಬಹಿಷ್ಕರಿಸಿ ಅನಿರ್ದಿ ಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.ಯುಜಿಸಿ ನಿಗದಿಯಂತೆ ರೂ. 15 ಸಾವಿರ ಸಂಬಳ ನೀಡ ಬೇಕು, ಪ್ರತಿ ತಿಂಗಳು ವೇತನ ನೀಡಬೇಕು ಹಾಗೂ ಸೇವೆ ಕಾಯಂಗೊಳಿಸ ಬೇಕೆಂದು ಒತ್ತಾಯಿಸಿದ್ದಾರೆ.

ವೇತನ ಬಿಡುಗಡೆಗೆ ಆಗ್ರಹ
ಕೊಪ್ಪ:
ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಪರಿಷ್ಕೃತ ವೇತನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪಟ್ಟಣದಲ್ಲಿನ ತಾಲ್ಲೂಕು ಕಚೇರಿ ಎದುರು ಶೃಂಗೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅತಿಥಿ ಉಪನ್ಯಾಸಕರು ಗುರುವಾರ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ಸುಳ್ಳು ಭರವಸೆ ನೀಡಿ ವಂಚಿಸುತ್ತಿದೆ. ಜಾಹೀರಾತುಗಳಲ್ಲಿ ರೂ. 10 ಸಾವಿರ ವೇತನ ನೀಡುತ್ತಿರುವುದಾಗಿ ಘೋಷಿಸುತ್ತಿದೆ. ಆದರೆ, ಕಳೆದ 10 ತಿಂಗಳಿಂದ ಈ ಹಿಂದೆ ನೀಡುತ್ತಿದ್ದ ಮಾಸಿಕ ರೂ. 5000 ವೇತನ ನೀಡದೆ ವಂಚಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯದ ಪದವಿ ಕಾಲೇಜುಗಳಲ್ಲಿ ಶೇ. 70ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಅವರಿಗೆ ಸಕಾಲದಲ್ಲಿ ಸಮರ್ಪಕ ವೇತನ ನೀಡದೆ ಶೋಷಣೆ ಮಾಡಲಾಗುತ್ತಿದೆ. ಉನ್ನತ ಶಿಕ್ಷಣ ಸಚಿವರು ಏಪ್ರಿಲ್‌ನಿಂದ ರೂ. 10 ಸಾವಿರ ವೇತನ ನೀಡು ವುದಾಗಿ, ಶಿಕ್ಷಣ ನಿರ್ದೇಶಕರು ಆಗಸ್ಟ್‌ನಿಂದ ವೇತನ ನೀಡುವುದಾಗಿ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ಸಮನ್ವಯ ಕೊರತೆಯಿಂದ ಉಪನ್ಯಾಸಕರು ತೊಂದರೆಗೊಳಗಾಗಿದ್ದರೆ ಎಂದು ಅಳಲು ತೋಡಿಕೊಂಡರು.ಶುಕ್ರವಾರದಿಂದ ಅನಿರ್ದಿಷ್ಟ ಅವಧಿವರೆಗೆ ತರಗತಿ ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಸರ್ಕಾರ ಬೇಡಿಕೆ ಒಪ್ಪುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಘೋಷಿಸಿದರು.

ಕಾಯಂ ಉಪನ್ಯಾಸಕರಷ್ಟು ಕೆಲಸ ನಿರ್ವಹಿಸುವ ಅತಿಥಿ ಉಪನ್ಯಾಸಕರು 12 ತಿಂಗಳು ಕೆಲಸ ಮಾಡಿಯೂ 10 ತಿಂಗಳ ವೇತನ ನೀಡಲಾಗುತ್ತಿದೆ. ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮದಂತೆ ಮಾಸಿಕ ರೂ. 25 ಸಾವಿರ ವೇತನ ನೀಡುವುದಲ್ಲದೆ  ಕಾಯಂ ಮಾಡಬೇಕೆಂದು ಒತ್ತಾಯಿಸಲಾ ಯಿತು.ಅತಿಥಿಉಪನ್ಯಾಸಕರ ಸಂಘದ ಕ್ಷೇತ್ರ ಸಂಚಾಲಕ ಸಿ.ಎಚ್.ಪ್ರಕಾಶ್, ಬ್ರಿಜೇಶ್, ನಾಗರಾಜ್, ಬಸವರಾಜ್, ಸಂತೋಷ್, ಸುದರ್ಶನ್, ಮಮತಾ, ವಿನೂತಾ ಪ್ರತಿಭಟನೆಯಲ್ಲಿದ್ದರು. ನಂತರ ಶಿರಸ್ತೇ ದಾರ್ ಸಣ್ಣರಂಗಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಅಜ್ಜಂಪುರ: ತರಗತಿ ಬಹಿಷ್ಕಾರ
ಅಜ್ಜಂಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಗುರುವಾರ ತರಗತಿ ಬಹಿಷ್ಕರಿಸಿ ಮುಷ್ಕರ  ನಡೆಸಿದರು.
ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡ ಸರ್ಕಾರ ಸೌಲಭ್ಯಗಳನ್ನು ನೀಡದೇ ಮಲತಾಯಿ ಧೋರಣೆ ತೋರುತ್ತಿದೆ. ಅತಿಥಿ ಉಪನ್ಯಾಸಕರ ಸಂಘ ಗುರುವಾರದಿಂದ ರಾಜ್ಯದಾದ್ಯಂತ ಮುಷ್ಕರ ನಡೆಸುತ್ತಿದ್ದು, ಬೆಂಬಲ ಸೂಚಿಸುತ್ತಿದ್ದೇವೆ ಎಂದು ಕಾಲೇಜಿನ ಅತಿಥಿ ಉಪನ್ಯಾಸಕ ಷಡಾಕ್ಷರಿ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.