ADVERTISEMENT

‘ಶಾಸಕ ಜೀವರಾಜ್ ಸತ್ಯ ಮುಚ್ಚಿಡುತ್ತಿದ್ದಾರೆ’

ಜಯಪುರದಲ್ಲಿ ಭೂ ಕಬಳಿಕೆ ಪ್ರಕರಣ :

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 7:11 IST
Last Updated 5 ಏಪ್ರಿಲ್ 2018, 7:11 IST

ಕೊಪ್ಪ: ‘ತಮ್ಮ ಮೇಲೆ ಬಂದಿರುವ ಭೂ ಕಬಳಿಕೆ ಆರೋಪಕ್ಕೆ ಸಂಬಂ ಧಪಟ್ಟಂತೆ ಶಾಸಕ ಜೀವರಾಜ್ ಸತ್ಯ ಮುಚ್ಚಿಡುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ದೂರಿದ್ದಾರೆ.ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಯಪುರದ ಸರ್ವೆ ನಂಬರ್ 12ರಲ್ಲಿ ಜೀವರಾಜ್ ನಿವೇಶನ ಪಡೆದಿರುವುದು ನಿಜ. ಅದರ ಖರೀದಿ, ದಾಖಲೆಗಳ ಬಗ್ಗೆ ಯಾರ ತಕರಾರೂ ಇಲ್ಲ. ಆದರೆ ಅವರು ಪೆಟ್ರೋಲ್ ಬಂಕ್ ನಿರ್ಮಿಸಿರುವುದು ಪಕ್ಕದ ಸರ್ವೆ ನಂಬರ್ 9ಲ್ಲಿರುವ ಎಸ್.ಎ.ಉದಯಕುಮಾರ್ ನಿವೇಶನದಲ್ಲಿ. ಶಾಸಕರು ಈ ಸತ್ಯವನ್ನು ಮುಚ್ಚಿಟ್ಟು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ’ ಎಂದು ದೂರಿದರು.

‘ಮೂರು ಬಾರಿ ಶಾಸಕರಾಗಿರುವ ಜೀವರಾಜ್ ಬಡಪಾಯಿಗಳ ನಿವೇ ಶನ ಕಬಳಿಸುವ ಹೀನ ಮಟ್ಟಕ್ಕೆ ಇಳಿಯ ಬಾರದಿತ್ತು. ಪ್ರಕರಣವನ್ನು ಜನತಾ ನ್ಯಾಯಾಲಯಕ್ಕೆ ಒಯ್ಯುತ್ತೇನೆಂದೂ, ಆರೋಪ ಮಾಡುವವರ ವಿರುದ್ಧ ದಾವೆ ಹೂಡುತ್ತೇನೆಂದೂ ಹೇಳಿಕೆ ನೀಡುವ ಬದಲು, ಅವರು ಪ್ರಾಮಾಣಿಕರಾಗಿದ್ದರೆ ಕೂಡಲೇ ಸಾರ್ವಜನಿಕರ ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಸರ್ವೇ ಮಾಡಿಸಲಿ. ಉದಯಕುಮಾರ್ ನಿವೇಶ ನದಲ್ಲಿ ಅವರು ಪೆಟ್ರೋಲ್ ಬಂಕ್ ನಿರ್ಮಿಸಿಲ್ಲವೆಂದು ಸಾಬೀತಾದರೆ ನಾನು ಸಾರ್ವಜನಿಕ ಜೀವನದಿಂದ ನಿವೃತ್ತನಾಗುತ್ತೇನೆ. ಅವರಿಗೆ ಅನ್ಯಾಯವಾಗಿದ್ದರೆ ನಮ್ಮ ವಿರುದ್ಧ ದಾವೆ ಹೂಡಲಿ’ ಎಂದು ಸವಾಲೆಸೆದರು.

‘ಶಾಸಕರು ಈ ಪ್ರಕರಣಕ್ಕೆ ರಾಜಕಾರಣವನ್ನು ಎಳೆತರುವುದು ಸರಿಯಲ್ಲ. ನಾನು ಮತ್ತು ಉದಯಕುಮಾರ್ ಸ್ನೇಹಿತರು. ಜೀವನಕ್ಕೆ ಆಧಾರವಾಗಿದ್ದ ನಿವೇಶನ ಕಳೆದುಕೊಂಡು ಅನ್ಯಾಯಕ್ಕೊಳಗಾದ ಆ ಬಡ ಕುಟುಂಬಕ್ಕೆ ಪಕ್ಷ ರಾಜಕೀಯ ಮರೆತು, ಒಬ್ಬ ನಾಗರಿಕ ನಾಗಿ ಬೆಂಬಲಕ್ಕೆ ನಿಂತಿದ್ದೇನೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ನ್ಯಾಯದ ಪರವಾಗಿ ಯಾರೇ ಬೆಂಬಲ ನೀಡಿದರೂ ಅದನ್ನು ಸ್ವಾಗತಿಸುತ್ತೇನೆ’ ಎಂದರು.

ADVERTISEMENT

ತಮ್ಮ ನಿವೇಶನದ ನಕಾಶೆ ಮತ್ತು ದಾಖಲೆಯನ್ನು ಮಾಧ್ಯಮದವ ರೆದುರು ಪ್ರದರ್ಶಿಸಿದ ಎಸ್.ಎ. ಉದಯ ಕುಮಾರ್ ಮಾತನಾಡಿ ‘ಸರ್ವೆ ನಂಬರ್ 9ರ ನನ್ನ ನಿವೇಶನಕ್ಕೆ ಈವರೆಗೂ ನಾನೇ ಕಂದಾಯ ಕಟ್ಟುತ್ತಿದ್ದೇನೆ. ಆದರಲ್ಲಿ ಅಕ್ರಮವಾಗಿ ಪೆಟ್ರೋಲ್ ಬಂಕ್ ನಿರ್ಮಿಸಿರುವ ಶಾಸಕರು ಬಾಡಿಗೆ ಪಡೆದು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದು ಯಾವ ನ್ಯಾಯ? ಅವರು ಶಾಸ ಕರೆಂಬ ಗೌರವದಿಂದ, ಅನ್ಯಾಯ ಸರಿಪಡಿಸುವುದಾಗಿ ನೀಡಿದ್ದ ಭರವಸೆ ನಂಬಿ ಈವರೆಗೆ ಕಾನೂನು ಹೋರಾಟಕ್ಕೆ ಮುಂದಾಗಿರಲಿಲ್ಲ. ನನ್ನ ನಿವೇಶನದ ದಾಖಲೆಯನ್ನು ಸಾರ್ವಜನಿಕರ ಮುಂದೆ ಇಟ್ಟಿದ್ದೇನೆ. ಪ್ರಕರಣದ ಬಗ್ಗೆ ತನಿಖೆ ನಡೆಯಲಿ. ನನಗೆ ನ್ಯಾಯ ಸಿಗುವುದೆಂಬ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.