ADVERTISEMENT

ಶೃಂಗೇರಿ ಸ್ವಾಮೀಜಿ ಸ್ವಾಗತಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 9:30 IST
Last Updated 3 ಏಪ್ರಿಲ್ 2013, 9:30 IST

ಶೃಂಗೇರಿ: ಶಾರದಾ ಪೀಠದ ಭಾರತಿ ತೀರ್ಥ ಸ್ವಾಮೀಜಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ 13 ತಿಂಗಳ ಧರ್ಮಪ್ರಚಾರ ಯಾತ್ರೆಯ ನಂತರ ಇದೇ 5ರ ಸಂಜೆ 5.30ಕ್ಕೆ ಪುರಪ್ರವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರಿಗೆ ಭವ್ಯ ಸ್ವಾಗತ ನೀಡಲು ಭಕ್ತವೃಂದ ಸಜ್ಜುಗೊಂಡಿದೆ.

ಸ್ವಾಗತ ಸಮಿತಿ ವತಿಯಿಂದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದ್ದು, ಪಟ್ಟಣದ ಪ್ರವೇಶದ್ವಾರದ ಬಳಿ ಇರುವ ಶಂಕರ ವೃತ್ತದಲ್ಲಿ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಇಲ್ಲಿಂದ ಭಾರತೀ ಬೀದಿಯ ಮೂಲಕ ಶ್ರಿಮಠಕ್ಕೆ ವಿಶೇಷವಾಗಿ ಸಿದ್ಧಪಡಿಸಿರುವ ಆಂಧ್ರಪ್ರದೇಶದ ಗುಂಟೂರಿನ ರಥದಲ್ಲಿ ಆಗಮಿಸಲು ವ್ಯವಸ್ಥೆ ಮಾಡಲಾಗಿದೆ.

ರಥ ಸಾಗುವ ದಾರಿಯುದ್ದಕ್ಕೂ ತಳಿರು, ತೋರಣ, ಸ್ವಾಗತ ಬ್ಯಾನರ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ರಥಯಾತ್ರೆಯಲ್ಲಿ ವಿವಿಧ ಭಜನಾ ಮಂಡಳಿ ವತಿಯಿಂದ ಭಜನೆ, ಕಲಾತಂಡಗಳ ಸ್ತಬ್ಧಚಿತ್ರಗಳು, ಆನೆ, ಆಶ್ವ, ಛತ್ರಿ, ಛಾಮರಗಳು ಸಾಗಲಿವೆ.

ಶಾರದಾ ಪೀಠಕ್ಕೆ ಆಗಮಿಸಿದ ನಂತರ ಸ್ವಾಮೀಜಿ ಶಾರದಾಂಬಾ ದೇವಾಲ ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಭಕ್ತಾಧಿಗಳ ವತಿಯಿಂದ ಭಿನ್ನವತ್ತಳೆ ಮತ್ತು ಫಲಪುಷ್ಪ ಸಮರ್ಪಣೆ ನಡೆಯಲಿದೆ. ಆಶೀರ್ವಚನ ನಂತರ ತುಂಗಾ ನದಿಯ ದಡದಲ್ಲಿ ಐಪಿಲ್‌ನ ರಾಯಲ್‌ಚಾಲೆಂಜರ್ಸ್‌ ತಂಡದ ವತಿಯಿಂದ ಆಕರ್ಷಕ ಸುಡಿಮದ್ದು ಪ್ರದರ್ಶನ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಬಿ.ಎಲ್. ರವಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.