ADVERTISEMENT

ಹಕ್ಕುಗಳ ಜತೆ ಜವಾಬ್ದಾರಿ ನಿರ್ವಹಿಸಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ಶೃಂಗೇರಿ: ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸುಭಾಷ್ ಬಿ. ಆದಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಭಾನುವಾರ ನ್ಯಾಯಾಧೀಶರ ನೂತನ ವಸತಿಗೃಹದ ಶಿಲಾನ್ಯಾಸ ನೆರವೇರಿಸಿ ನಂತರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

`ಇಂದು ರಾಜಕೀಯ, ಆರ್ಥಿಕ, ಸಾಮಾಜಿಕ, ಶಿಕ್ಷಣ ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳೂ ಅನಪೇಕ್ಷಿತ ದಾರಿಯಲ್ಲಿ ಸಾಗುತ್ತಿರುವುದಕ್ಕೆ ಆಡಳಿತ ನಡೆಸುತ್ತಿರುವವರು ಮಾತ್ರ ಕಾರಣರಲ್ಲ. ಸಾಂವಿಧಾನಿಕವಾಗಿ ಪ್ರತಿಯೊಬ್ಬ ನಾಗರಿಕರೂ ಪಡೆದಿರುವ ಹಕ್ಕುಗಳನ್ನು ಚಲಾಯಿಸುವ ಜೊತೆಯಲ್ಲೇ ತಾವು ನಿರ್ವಹಿಸಬೇಕಾದ ಮೂಲ ಕರ್ತವ್ಯಗಳನ್ನೂ ನಿಭಾಯಿಸುವುದು ಮುಖ್ಯ. ಸಮಾಜದ ಇಂದಿನ ಸ್ಥಿತಿಗೆ ಒಬ್ಬರು ಇನ್ನೊಬ್ಬರನ್ನು ದೂರುವ ಬದಲು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಪೂರೈಸಬೇಕು~ ಎಂದರು.

`ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರು ಸಾಮಾಜಿಕ ಕಳಕಳಿಯೊಂದಿಗೆ ನ್ಯಾಯಾಲಯದ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ವಕೀಲರ ಕೆಲಸ ಗೌರವದ ವೃತ್ತಿಯಾಗಿದ್ದು, ವಿವಿಧ ಕಾರಣದಿಂದ ಇದರಲ್ಲಿನ ಗೌರವ ಹೊರಟು ಹೋಗಿ ವೃತ್ತಿ ಮಾತ್ರ ಉಳಿದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಮಾಜವನ್ನು ಅರಿತು ಸೇವೆ ಸಲ್ಲಿಸಬೇಕು~ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಬಸವರಾಜ ಎ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಜೆಎಂಎಫ್‌ಸಿ ನ್ಯಾಯಾಧೀಶ ಸಿ. ವೀರಭದ್ರಯ್ಯ, ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಡಿ.ಎನ್. ಜೀವರಾಜ್, ವಕೀಲರ ಸಂಘದ ಅಧ್ಯಕ್ಷ ಶಶಿಭೂಷಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.