ADVERTISEMENT

ಹಿರೇನಲ್ಲೂರಿನ ಅಪೂರ್ವ ನಂದಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 12:01 IST
Last Updated 3 ಜೂನ್ 2018, 12:01 IST
ಕಡೂರು ತಾಲ್ಲೂಕಿನ ಹಿರೇನಲ್ಲೂರಿನಲ್ಲಿರುವ ಮಲ್ಲಿಕಾರ್ಜುನ ದೇಗುಲದ ನಂದಿ ವಿಗ್ರಹ
ಕಡೂರು ತಾಲ್ಲೂಕಿನ ಹಿರೇನಲ್ಲೂರಿನಲ್ಲಿರುವ ಮಲ್ಲಿಕಾರ್ಜುನ ದೇಗುಲದ ನಂದಿ ವಿಗ್ರಹ   

ಕಡೂರು ತಾಲ್ಲೂಕಿನ ಹಿರೇನಲ್ಲೂರು ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇಗುಲದಲ್ಲಿರುವ ನಂದಿ ವಿಗ್ರಹ ಹಲವು ವಿಶೇಷಗಳಿಂದ ಕೂಡಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಈ ದೇಗುಲ ತ್ರಿಕೂಟ ದೇಗುಲ. ಹೊಯ್ಸಳ ವಾಸ್ತುಶಿಲ್ಪದ ಅದ್ಬುತ. ದೇಗುಲದ ಪ್ರವೇಶ ದ್ವಾರಕ್ಕೆದುರಾಗಿರುವುದು ಸೂರ್ಯನಾರಾಯಣಸ್ವಾಮಿ. ಅದರ ಎಡಭಾಗದಲ್ಲಿರುವುದು ಚೆನ್ನಕೇಶವ. ಬಲಭಾಗದಲ್ಲಿರುವುದು ಮಲ್ಲಿಕಾರ್ಜುನ ಸ್ವಾಮಿಯ ಬೃಹತ್ ಲಿಂಗ. ಈ ಲಿಂಗಕ್ಕೆದುರಾಗಿ ಕುಳಿತಿರುವ ನಂದಿ ವಿಗ್ರಹ ನಯನ ಮನೋಹರವಾದದ್ದು.

ಸುಮಾರು 6 ಅಡಿ ಎತ್ತರದ 11ನೇ ಶತಮಾನದ ಈ ನಂದಿಯ ವಿಗ್ರಹ ಹೊಯ್ಸಳರ ಶಿಲ್ಪಕಲಾ ಚಾತುರ್ಯಕ್ಕೆ ಸಾಕ್ಷಿ. ಮಂದಸ್ಮಿತ ಮುಖದೊಡನೆ ಶಾಂತವಾಗಿ ಕುಳಿತಿರುವ ಕಪ್ಪುಶಿಲೆಯ ನಂದಿಯ ಸೂಕ್ಷ್ಮ ಕೆತ್ತನೆ ಕೆಲಸ ಗಮನ ಸೆಳೆಯುತ್ತದೆ. ನಂದಿಯ ಕುತ್ತಿಗೆಗೆ ಹಾಕಿರುವ ನುಲಿಹಗ್ಗದ ಕೆತ್ತನೆ ನೈಜ ಹಗ್ಗವೆಂಬ ಭ್ರಮೆ ಮೂಡಿಸುತ್ತದೆ. ಕೊರಳಗಂಟೆ, ಬೆನ್ನ ಮೇಲಿರುವ ಪವಿತ್ರ ಗಂಟು (ಬ್ರಾಹ್ಮಣರು ಪವಿತ್ರ ಕಾರ್ಯಗಳಲ್ಲಿ ಉಪಯೋಗಿಸುವ ದರ್ಭೆಯನ್ನು ವಿಶೇಷ ರೀತಿಯಲ್ಲಿ ಗಂಟು ಹಾಕುವುದಕ್ಕೆ ಪವಿತ್ರ ಎನ್ನುತ್ತಾರೆ) ಮುಂದಿನ ಬಲಗಾಲನ್ನು ಮಡಚಿ ಕುಳಿತಿರುವ ಭಂಗಿ, ಮೂಗಿನ ಹೊಳ್ಳೆಗಳು, ದೃಷ್ಟಿ ನೇರವಾಗಿ ಶಿವಲಿಂಗದ ಮೇಲಿರುವುದು ಎಲ್ಲವೂ ಪುಳಕವುಂಟು ಮಾಡುತ್ತದೆ.

ADVERTISEMENT

ಹೊಯ್ಸಳ ದೇಗುಲದೊಳಗಿರುವ ನಂದಿಯನ್ನು ದರ್ಶಿಸಿದವರಿಗೆ ಮೊದಲು ನಂದಿಯನ್ನು ಖಂಡರಿಸಿ ನಂತರ ದೇಗುಲ ನಿರ್ಮಿಸಿದರೋ ಅಥವಾ ದೇಗುಲ ನಿರ್ಮಿಸಿ ನಂತರ ನಂದಿಯನ್ನಿಟ್ಟರೋ ಎಂಬ ಪ್ರಶ್ನೆ ಮೂಡುತ್ತದೆ. ಎರಡೂ ಪ್ರಶ್ನೆಗಳಿಗೆ ಉತ್ತರ ಸಿಗದು. ದೇಗುಲದ ಸಣ್ಣ ದ್ವಾರದ ಮೂಲಕ ಈ ಬೃಹತ್ ನಂದಿಯನ್ನು ಒಳತರಲು ಸಾಧ್ಯವಿಲ್ಲ. ಮತ್ತೆ ಮೊದಲೇ ನಂದಿಯನ್ನು ಕೆತ್ತಿ ಆನಂತರ ದೇಗುಲ ನಿರ್ಮಾಣ ಮಾಡುವುದು ಕಷ್ಟಸಾಧ್ಯ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ.

ಈ ನಂದಿಯ ಕೆಳಗೆ ಬಾವಿಯಂತಹ ರಚನೆಯಿದ್ದು, ನಂದಿಯ ಕಿವಿಯಲ್ಲಿ ನಾಣ್ಯ ಹಾಕಿದರೆ ಅದು ನೀರಿನಲ್ಲಿ ಬಿದ್ದ ಸಪ್ಪಳವಾಗುತ್ತಿತ್ತು ಎಂದು ಅಲ್ಲಿನ ಹಿರಿಯರು ಹೇಳುತ್ತಾರೆ. ನಾಣ್ಯಗಳನ್ನು ಹಾಕುವ ಭರದಲ್ಲಿ ವಿಗ್ರಹಕ್ಕೆ ಅಪಾಯವಾಗಬಹುದೆಂಬ ಮುಂಜಾಗ್ರತೆ ಕ್ರಮವಾಗಿ ನಂದಿಯ ಕಿವಿಯನ್ನು ಪ್ಲಾಸ್ಟರ್‍ ಮಾಡಿಸಿ ಮುಚ್ಚಲಾಗಿದೆ.

ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಸುಪರ್ದಿನಲ್ಲಿರುವ ಈ ದೇಗುಲ ಪ್ರವಾಸಿ ತಾಣವಾಗಬೇಕೆಂಬ ಆಶಯ ಹಿರೇನಲ್ಲೂರು ಗ್ರಾಮಸ್ಥರದ್ದಾಗಿದೆ. ಕಡೂರಿನಿಂದ ಚಿತ್ರದುರ್ಗದ ಕಡೆ ಹೋಗುವವರು ಈ ದೇಗುಲಕ್ಕೆ ಭೇಟಿ ನೀಡಿ ಹೊಯ್ಸಳ ಶಿಲ್ಪ ವೈಭವವನ್ನು ಕಣ್ತುಂಬಿಕೊಳ್ಳಬಹುದು.

ಬಾಲುಮಚ್ಚೇರಿ, ಕಡೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.