ADVERTISEMENT

ಹೆಣ್ಣು ಮಕ್ಕಳ ಜನನ ಸಂಖ್ಯೆ ಇಳಿಮುಖ: ಜಿಲ್ಲಾಧಿಕಾರಿ ಬಗಾದಿ ಗೌತಮ್

ಪಿಡಿಎನ್‌ಟಿ ಸಲಹಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 15:31 IST
Last Updated 14 ಮೇ 2019, 15:31 IST
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಮಾತನಾಡಿದರು.   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದು, ಲಿಂಗಾನುಪಾತ ಸಮಾನತೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪಿಡಿಎನ್‌ಟಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
2018–19ನೇ ಸಾಲಿನಲ್ಲಿ 12,389 ಮಕ್ಕಳು ಜನಿಸಿದ್ದಾರೆ. ಈ ಪೈಕಿ 6,337 ಗಂಡು, 6,045 ಹೆಣ್ಣು ಮಕ್ಕಳಾಗಿದ್ದಾರೆ. ಚಿಕ್ಕಮಗಳೂರು, ಕೊಪ್ಪ, ತರೀಕೆರೆ ತಾಲ್ಲೂಕುಗಳಲ್ಲಿ ಹೆಣ್ಣು ಮಕ್ಕಳ ಜನನ ಸಂಖ್ಯೆ ಕಡಿಮೆಯಾಗಿದೆ ಎಂದರು.

ಜಿಲ್ಲೆಯಲ್ಲಿ 53 ಸ್ಕ್ಯಾನಿಂಗ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಮೇಲೆ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ನಿಗಾ ವಹಿಸಬೇಕು. ಆ ಕೇಂದ್ರಗಳಿಗೆ ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ನೀಡಬೇಕು. ಭ್ರೂಣಾವಸ್ಥೆಯಲ್ಲಿ ಲಿಂಗ ಪತ್ತೆ ಹಚ್ಚುವ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ಜಿಲ್ಲೆಯಲ್ಲಿ 9ಕ್ಕೂ ಹೆಚ್ಚು ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗುಮಾನಿ ಇದೆ. ಅಧಿಕಾರಿಗಳು ಅವರ ಪ್ರಮಾಣ ಪತ್ರ ಪರಿಶೀಲಿಸಬೇಕು. ನಕಲಿ ವೈದ್ಯರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಬೇಕು ಎಂದರು. ‌

ವಂಶಪಾರಂಪರಿಕ ಆಯುರ್ವೇದಿಕ್ ಪಂಡಿತರು ಎಂದು ಹೇಳಿ ಅಲೋಪತಿ ಔಷಧ ನೀಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮವಹಿಸಬೇಕು ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅಶ್ವತ್‌ ಬಾಬು, ಪಿಡಿಎನ್‌ಟಿ ಸಲಹಾ ಸಮಿತಿಯ ಡಾ.ರಾಮಕೃಷ್ಣ, ಡಾ.ರವಿಶಂಕರ್, ಶಶಿಪ್ರಸಾದ್, ರೀನಾ ಸುಜೇಂದ್ರ ಇದ್ದರು.

ನೋಂದಣಿಗೆ ಅರ್ಜಿ ಸಲ್ಲಿಸಿ

ಕೆಪಿಎಂಇ ಅಡಿಯಲ್ಲಿ ನೋಂದಣಿಯಾದವರು ಮಾತ್ರ ಕ್ಲಿನಿಕ್ ತೆರೆದು, ವೈದ್ಯಕೀಯ ವೃತ್ತಿ ಮಾಡಲು ಅವಕಾಶ ನೀಡಬೇಕು. ನೋಂದಣಿಗೆ ಅರ್ಜಿ ಸಲ್ಲಿಸಿ, ಅಗತ್ಯ ದಾಖಲಾತಿ ನೀಡದೆ, ತೆರೆದಿರುವ ಕ್ಲಿನಿಕ್‌ಗಳನ್ನು ಮುಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.