ADVERTISEMENT

ಹೆದ್ದಾರಿ ಬದಿಯಲ್ಲಿ ಗಿಡಗಂಟಿಗಳು!

ಕೆ.ವಾಸುದೇವ
Published 23 ಅಕ್ಟೋಬರ್ 2017, 6:06 IST
Last Updated 23 ಅಕ್ಟೋಬರ್ 2017, 6:06 IST
ಮೂಡಿಗೆರೆ ತಾಲ್ಲೂಕಿನ ಹೆಸ್ಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳ ವಿದ್ಯಾರ್ಥಿನಿಲಯ ಸಮುಚ್ಛಾಯದ ಬಳಿ ರಸ್ತೆ ಬದಿ ಬೆಳೆದಿರುವ ಗಿಡಗಂಟಿಗಳು.
ಮೂಡಿಗೆರೆ ತಾಲ್ಲೂಕಿನ ಹೆಸ್ಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳ ವಿದ್ಯಾರ್ಥಿನಿಲಯ ಸಮುಚ್ಛಾಯದ ಬಳಿ ರಸ್ತೆ ಬದಿ ಬೆಳೆದಿರುವ ಗಿಡಗಂಟಿಗಳು.   

ಮೂಡಿಗೆರೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲದಲ್ಲಿ ಬೆಳೆದಿರುವ ಗಿಡಗಂಟಿಗಳಿಂದ ಜನರ ನೆಮ್ಮದಿಗೆ ಭಂಗವಾಗುತ್ತಿದೆ ಎಂಬುದು ಜನರ ಆರೋಪವಾಗಿದೆ.

ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 173ರ ಕಡೂರು – ಹ್ಯಾಂಡ್‌ಪೋಸ್ಟ್‌ ಹಾಗೂ 234 ರ ವಿಲ್ಲುಪುರಂ– ಮಂಗಳೂರು ರಸ್ತೆಯ ಸುಮಾರು 80 ಕಿ.ಮೀ. ಹೆದ್ದಾರಿ ಹಾದು ಹೋಗಿದ್ದು, ಹೆದ್ದಾರಿಯ ಇಕ್ಕೆಲಗಳನ್ನು ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ, ಹೆದ್ದಾರಿ ಯುದ್ದಕ್ಕೂ ಗಿಡಗಂಟಿಗಳು ಬೆಳೆದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಹೆಸ್ಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಎಂಎಫ್‌ ನ್ಯಾಯಾಲಯದ ಬಳಿಯಿರುವ ವಿದ್ಯಾರ್ಥಿನಿಲಯ ಸಮು ಚ್ಛಾಯದ ಬಳಿ ವಿದ್ಯಾರ್ಥಿ ನಿಲಯವೇ ಮುಚ್ಚಿ ಹೋಗುವಷ್ಟು ಗಿಡಗಂಟಿಗಳು ಬೆಳೆದಿವೆ. ಈ ಗಿಡಗಂಟಿಗಳ ನಡುವೆ ಸೇರಿರುವ ಹಾವುಗಳು ಹಾಸ್ಟೆಲ್‌ ಒಳಗೆ ಬರುತ್ತಿವೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಗಿಡಗಂಟಿಗಳನ್ನು ನಾವೇ ಸ್ವಚ್ಛಗೊಳಿಸಿಕೊಳ್ಳುತ್ತೇವೆ. ಆದರೆ, ಗಿಡಗಂಟಿಗಳ ಪೊದೆಯಲ್ಲಿ ಹಾವುಗಳು ಸೇರಿಕೊಂಡಿರುವುದರಿಂದ ಅದರೊಳಗೆ ಹೋಗಲು ಭಯವಾಗುತ್ತದೆ. ಗಿಡ ಗಂಟಿಗಳು ಬೆಳೆದಿರುವುದರಿಂದ ಬಟ್ಟೆಗಳನ್ನು ಒಣಗಿಸಲು, ರಾತ್ರಿ ವೇಳೆ ಆವರಣದೊಳಕ್ಕೆ ಬರಲು ಭಯವಾ ಗುತ್ತದೆ’ ಎಂದು ವಿದ್ಯಾರ್ಥಿನಿಯೊಬ್ಬರು ಸಂಕಷ್ಟ ತೋಡಿಕೊಂಡರು.

ಹೆದ್ದಾರಿಯ ಇಕ್ಕೆಲದಲ್ಲಿ ಬೆಳೆದಿ ರುವ ಗಿಡಗಂಟಿಗಳಿಂದ ತಾಲ್ಲೂಕಿನಲ್ಲಿ ಅಪಘಾತಗಳ ಪ್ರಮಾಣವೂ ಹೆಚ್ಚಾಗು ತ್ತಿದೆ. ಇತ್ತೀಚೆಗೆ ತಾಲ್ಲೂಕಿನ ಕಿರುಗುಂದ ಗ್ರಾಮದ ಬಳಿ ಹೆದ್ದಾರಿಯ ಬದಿಯಲ್ಲಿ ಬೆಳೆದಿದ್ದ ಗಿಡಗಂಟಿಯಿಂದಾಗಿ ರಸ್ತೆ ಕಾಣದೇ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ, ಬೈಕ್‌ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದು, ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಜನಪ್ರತಿನಿಧಿಗಳು ಹೆದ್ದಾರಿ ಪ್ರಾಧಿಕಾರಕ್ಕೆ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ, ಇದುವರೆಗೂ ತೆರವಿನ ಕಾರ್ಯಾಚರಣೆ ನಡೆಯದೇ ಇನ್ನಷ್ಟು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

ತಾಲ್ಲೂಕಿನಲ್ಲಿ ಹೆದ್ದಾರಿ ಸಾಗಿ ರುವ ಮಾರ್ಗದುದ್ದಕ್ಕೂ ರಸ್ತೆಯು ತಿರುವುಗಳಿಂದ ಕೂಡಿದ್ದು, ತಿರುವು ಗಳಲ್ಲಿ ಗಿಡಗಂಟಿ ಬೆಳೆದಿರುವುದರಿಂದ, ಈ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿ ವಾಹನಗಳು ಪದೇ ಪದೇ ಅಪಘಾತ ಗೀಡಾಗುತ್ತಿವೆ. ಇದೇ ಹೆದ್ದಾರಿಯ ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿ ಬೆಳೆದಿರುವ ಗಿಡಗಂಟಿಗಳಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತ ವಾಗುವ ಸಂದಿಗ್ಧತೆಯೂ ಎದುರಾಗಿದೆ.

‘ಚಾರ್ಮಾಡಿ ಘಾಟ್‌ ಪ್ರದೇಶವು ಇಡೀ ದಿನ ಮಂಜಿನಿಂದ ಕೂಡಿರುತ್ತದೆ. ಎದುರಿನಿಂದ ಬರುವ ವಾಹನಗಳು ಹತ್ತಿರಕ್ಕೆ ಬರುವವರೆಗೂ ಕಾಣುವುದೇ ಇಲ್ಲ. ಇಂತಹ ಪರಿಸ್ಥಿತಿಯ ನಡುವೆ ಗಿಡಗಂಟಿಗಳು ಬೆಳೆದಿರುವುದು ವಾಹನ ಸವಾರರಿಗೆ ಇನ್ನಷ್ಟು ಸಮಸ್ಯೆಯಾಗಿ ಕಾಡುತ್ತದೆ. ವಾಹನಗಳಲ್ಲಿ ದೀಪ ಬೆಳಗುತ್ತಿದ್ದರೂ, ಗಿಡಗಂಟಿಗಳ ಮರೆಯಿಂದ ದೀಪದ ಬೆಳಕು ಕಾಣದೇ ಅಪಘಾತವಾಗುತ್ತದೆ’ ಎಂದು ಇತ್ತೀಚೆಗೆ ಚಾರ್ಮಾಡಿ ಘಾಟ್‌ನಲ್ಲಿ ಬಸ್‌ಗೆ ಡಿಕ್ಕಿ ಹೊಡೆದ ಕಾರಿನ ಚಾಲಕ ಮಹೇಶ್‌ ಸಂಕಷ್ಟವನ್ನು ವಿವರಿಸಿದರು.

ಹೆದ್ದಾರಿಯನ್ನು ನಿರ್ವಹಿಸುವ ಹೆದ್ದಾರಿ ಪ್ರಾಧಿಕಾರದ ಉಪ ವಿಭಾಗವು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿದ್ದು, ಸ್ಥಳೀಯ ಜನಪ್ರತಿನಿಧಿಗಳ ಮಾತಿಗೆ ಮಣೆಹಾಕದೇ ನಿರ್ಲಕ್ಷ್ಯ ವಹಿಸಿರುವುದೇ ಹೆದ್ದಾರಿ ಬದಿಯಲ್ಲಿ ಗಿಡಗಂಟಿ ಬೆಳೆಯಲು ಕಾರಣವಾಗಿದೆ ಎಂಬುದು ಸ್ಥಳೀಯರ ದೂರು. ಅವಘಡಗಳು ಸಂಭವಿಸುವದಕ್ಕಿಂತಲೂ ಪೂರ್ವದಲ್ಲಿ ಹೆದ್ದಾರಿ ಬದಿಗಳನ್ನು ಸ್ವಚ್ಛಗೊಳಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.