ADVERTISEMENT

‘ಸೌಲಭ್ಯ ಎಲ್ಲರಿಗೆ ತಲುಪಲಿ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 8:04 IST
Last Updated 12 ಸೆಪ್ಟೆಂಬರ್ 2013, 8:04 IST

ಚಿಕ್ಕಮಗಳೂರು: ಸರ್ಕಾರದ ಸೌಲಭ್ಯ­ಗಳು ಸಾರ್ವಜನಿಕರಿಗೆ ತಲುಪು­ವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅಧಿಕಾರಿ­ಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣ­ದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದ ಸಾರ್ವ­ಜ­ನಿಕರಿಗೆ ವಿದ್ಯುತ್‌ಚ್ಛಕ್ತಿ ಸರಬ­ರಾಜಿನಲ್ಲಿ ಅಭಾವವಾಗದಂತೆ ಎಚ್ಚರ ವಹಿಸಬೇಕು. ಕುಡಿಯುವ ನೀರಿನ ಯೋಜ­ನೆಯ ಕಾಮಗಾರಿಗಳಿಗೆ ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸ­ಬೇಕೆಂದರು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಗಳಿಗೆ ನಿಗದಿ­ಪಡಿಸಿರುವ ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿ ಆಯ್ಕೆಮಾಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.

ಸ್ವಸಹಾಯ ಸಂಘದ ಸದಸ್ಯರಿಗೆ ಸ್ಥಳೀಯವಾಗಿ ಸಿಗುವ ಕಚ್ಚಾ­ವಸ್ತುಗಳನ್ನು ಉಪಯೋಗಿಸಿ ಸಿದ್ಧ­ವಸ್ತು­ಗಳನ್ನು ತಯಾರಿಸಿ ಉದ್ಯೋಗ ಕೈಗೊಳ್ಳುವಂತೆ ತರಬೇತಿ­ಗಳನ್ನು ನೀಡುವುದರೊಂದಿಗೆ ಅವರನ್ನು ಆರ್ಥಿಕ­ವಾಗಿ ಸಬಲರನ್ನಾಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ನಮ್ಮ ಹೊಲ ನಮ್ಮ ದಾರಿ, ಒಕ್ಕಣಿಕೆ ಕಣ, ಕೆರೆ ಹೂಳು ಎತ್ತುವುದು ಸೇರಿ­ದಂತೆ ಹಲವು ಅಭಿವೃದ್ಧಿ ಕಾಮ­ಗಾರಿಗಳನ್ನು ಕೈಗೊಳ್ಳಲು ಉದ್ಯೋಗ ಖಾತ್ರಿ ಯೋಜನೆಗೆ ಸದಸ್ಯರ ನೋಂದಣಿ ಹೆಚ್ಚಿಸ­ಬೇಕೆಂದರು.

ವಿವಿಧ ನಿಗಮ ಮಂಡಳಿಯ ವತಿಯಿಂದ ಗಂಗಾ ಕಲ್ಯಾಣ ಯೋಜನೆ­ಯಡಿ ಕೊಳವೆ ಬಾವಿ ಕೊರೆಸುವ ಹಾಗೂ ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ತ್ವರಿತ­ಗೊಳಿಸಬೇಕು. ಯಶಸ್ವಿನಿ ಯೋಜನೆಗೆ ಹೊಸ ಸದಸ್ಯರ ನೋಂದಣಿಗೆ ಗ್ರಾಮೀಣ ಭಾಗದಲ್ಲಿ ಯೋಜನೆಯ ಉಪ­ಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಹೆಚ್ಚಿನ ನೋಂದಣಿ ಮಾಡುವುದರ ಮೂಲಕ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಅಧ್ಯಕ್ಷರು ಕೃಷಿ ಅಧಿಕಾರಿಗಳಿಂದ ಮಳೆ, ಬೆಳೆ, ಗೊಬ್ಬರ ಹಾಗೂ ಬಿತ್ತನೆ ಬೀಜದ ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದರು. ರೈತರು ಬೆಳೆದಂತಹ ಉತ್ಪನ್ನಗಳನ್ನು ಬೀಜ ಸಂಸ್ಕರಣೆ ಘಟಕಗಳಿಗೆ ಮಾರಾಟ ಕಲ್ಪಿಸು­ವು­ದರಿಂದ ರೈತರಿಗೆ ಹೆಚ್ಚಿನ ಆದಾಯ­ವಾಗುವಂತೆ ಕಾರ್ಯ­ನಿರ್ವ­ಹಿಸ­ಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಮಾಜಿಕ ಅರಣ್ಯ ಯೋಜನೆ­ಯಡಿ ಫಲಾನುಭವಿಗಳನ್ನು ಗ್ರಾಮಸಭೆ­ಯಲ್ಲಿ ಆಯ್ಕೆ ಮಾಡುವುದರೊಂದಿಗೆ ಅನುದಾನವನ್ನು ಸಮರ್ಪಕವಾಗಿ ನೀಡಿ ಅನುಷ್ಠಾನಗೊಳಿಸಬೇಕೆಂದ ಅವರು, ಯೊಜನೆಯ ಅನುಷ್ಠಾನದ ಬಗ್ಗೆ ಖುದ್ದು ಸಮೀಕ್ಷೆ  ನಡೆಸುವುದಾಗಿ ತಿಳಿಸಿದರು.

ಪ್ರಭಾರ ಮುಖ್ಯ ಕಾರ್ಯ­ನಿರ್ವ­ಹ­ಣಾಧಿಕಾರಿ ಜಿ.ಎಲ್.ವಿಠ್ಠಲ್ ಮಾತ­ನಾಡಿ, ಗ್ರಾಮೀಣ ಸ್ವಸಹಾಯ ಸಂಘ­ಗಳು ಕೈಗೊಳ್ಳುವ ಆದಾಯೋತ್ಪನ್ನ ಚಟುವಟಿಕೆಗಳಿಗೆ ಬೇಕಾದ ಕೌಶಲ್ಯ ತರಬೇತಿ ಹಾಗೂ ಬ್ಯಾಂಕ್ ಸಹಾಯ­ಧನ ನೀಡಲು ಉದ್ದೇಶಿಸಲಾಗಿದೆ.

ಜಿಲ್ಲೆಯಾದ್ಯಂತ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಮಾಹಿತಿ ಸಂಗ್ರಹಣೆ ಕಾರ್ಯವು ನಡೆಯುತ್ತಿದ್ದು, ಅಧಿಕಾರಿಗಳು ಸ್ವಸಹಾಯ ಸಂಘಗಳ ಗುಂಪಿನ ಮಾಹಿತಿ ಒದಗಿಸಬೇಕು ಎಂದರು.

ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನ್ ಮಾತನಾಡಿ, ಹಾಲು ಉತ್ಪಾದಕರ ಸಂಘಗಳಲ್ಲಿ ಹಾಲು ಖರೀದಿಸುವಾಗ ಗುಣಮಟ್ಟಕ್ಕೆ ತಕ್ಕಂತೆ ಹಣನೀಡಬೇಕು. ಜಾನುವಾರುಗಳ ಸಂಖ್ಯೆಯನ್ನಾಧರಿಸಿ ಪಶು ಆಹಾರ ವಿತರಿಸಬೇಕೆಂದು ಕೆ.ಎಂ.ಎಫ್ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಸುಜಾತ ಶಿವಲಿಂಗಪ್ಪ, ಮುಖ್ಯ ಯೋಜನಾಧಿಕಾರಿ ಸುಬ್ಬರಾವ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾ­ಧಿ­ಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.