ADVERTISEMENT

ಬೆಳ್ಳೂರಿನಲ್ಲಿ ಫೆ. 21, 22ರಂದು ಸಮ್ಮೇಳನ: ತೀರ್ಮಾನ

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಬಗ್ಗೆ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:30 IST
Last Updated 12 ಜನವರಿ 2026, 6:30 IST
ನರಸಿಂಹರಾಜಪುರದ ತಾಲ್ಲೂಕು ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಬಗ್ಗೆ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕೆ.ಟಿ. ವೆಂಕಟೇಶ್, ಎಸ್.ಎಸ್. ಸಂತೋಷ್ ಕುಮಾರ್, ಪಿ.ಜೆ. ಅಂಟೋಣಿ, ಭಾಗ್ಯನಂಜುಂಡಸ್ವಾಮಿ ಭಾಗವಹಿಸಿದ್ದರು
ನರಸಿಂಹರಾಜಪುರದ ತಾಲ್ಲೂಕು ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಬಗ್ಗೆ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕೆ.ಟಿ. ವೆಂಕಟೇಶ್, ಎಸ್.ಎಸ್. ಸಂತೋಷ್ ಕುಮಾರ್, ಪಿ.ಜೆ. ಅಂಟೋಣಿ, ಭಾಗ್ಯನಂಜುಂಡಸ್ವಾಮಿ ಭಾಗವಹಿಸಿದ್ದರು   

ನರಸಿಂಹರಾಜಪುರ: ಸೀತೂರು ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರಿನಲ್ಲಿ ಫೆಬ್ರುವರಿ 21 ಮತ್ತು 22ರಂದು 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಬಗ್ಗೆ, ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಇಲ್ಲಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ಅವರ ಅಧ್ಯಕ್ಷತೆಯಲ್ಲಿ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಮೂಡಬಾಗಿಲು ಗ್ರಾಮದ ಅರಳಿಕೊಪ್ಪ, ಕಡಹಿನಬೈಲು ಗ್ರಾಮದ ಶೆಟ್ಟಿಕೊಪ್ಪ ಹಾಗೂ ಸೀತೂರು ಗ್ರಾ.ಪಂಯ ಹಳ್ಳಿಬೈಲು ಗ್ರಾಮದಲ್ಲೂ ಸಮ್ಮೇಳನ ಆಯೋಜಿಸುವ ಬಗ್ಗೆ ಚರ್ಚೆ ನಡೆಯಿತು. ಬೆಳ್ಳೂರಿನಲ್ಲಿ ವಿಶಾಲವಾದ ಸಭಾಂಗಣ, ಮೈದಾನವಿರುವುದರಿಂದ ಹಾಗೂ ಜನರಿಂದ ಹೆಚ್ಚಿನ ಸಹಕಾರವೂ ಲಭಿಸುವುದರಿಂದ ಬೇರೆ ಭಾಗದಿಂದ ಬರುವ ಸಾಹಿತ್ಯಾಸಕ್ತರಿಗೆ ಅನುಕೂಲವಾಗಲಿದೆ. ಆದ್ದರಿಂದ ಸದರಿ ಗ್ರಾಮದಲ್ಲಿ ಸಮ್ಮೇಳನ ಆಯೋಜಿಸಲು ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು.

ADVERTISEMENT

ಮಾರ್ಚ್ ತಿಂಗಳಲ್ಲಿ ಎಲ್ಲ ತರಗತಿಗಳ ಪರೀಕ್ಷೆಗಳಿರುವುದರಿಂದ, ಏಪ್ರಿಲ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿರುವುದರಿಂದ ಫೆಬ್ರುವರಿ ಅಂತ್ಯದೊಳಗೆ ಸಮ್ಮೇಳನ ಆಯೋಜಿಸುವ ಬಗ್ಗೆ ತೀರ್ಮಾನಿಸಲಾಯಿತು.

ಶಾಸಕರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲು ಹಾಗೂ ಕೋಶಾಧ್ಯಕ್ಷರ ಆಯ್ಕೆ, ತಾಲ್ಲೂಕಿನ ಎರಡು ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಸಂಚಾಲಕರು ಸೇರಿದಂತೆ ವಿವಿಧ ಉಪ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು.

ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ಇಲಾಖೆಯ ಮುಖ್ಯಸ್ಥರನ್ನು, ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳನ್ನು, ಸಂಘ–ಸಂಸ್ಥೆಗಳ ಪ್ರಮುಖರನ್ನೊಂಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಶೀಘ್ರದಲ್ಲಿ ಸಾಹಿತ್ಯ ಪರಿಷತ್‌ನ ಪೂರ್ವಾಧ್ಯಕ್ಷರು, ಸಾಹಿತ್ಯಾಸಕ್ತರನ್ನೊಳಗೊಂಡ ಸಭೆ ನಡೆಸಿ ಸಮ್ಮೇಳದ ಅಧ್ಯಕ್ಷರು, ಗೋಷ್ಠಿಗಳನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸಲಾಯಿತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಸಾಹಿತ್ಯ ಸಮ್ಮೇಳನ ಆಯೋಜನೆಗೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಎಸ್.ಎಸ್. ಸಂತೋಷ್ ಕುಮಾರ್, ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ, ಹೋಬಳಿ ಘಟಕದ ಅಧ್ಯಕ್ಷ ಉದಯ್ ಗಿಲ್ಲಿ, ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ತಾಲ್ಲೂಕು ಲಯನ್ಸ್ ಸಂಸ್ಥೆ ಅಧ್ಯಕ್ಷ ಪಿ.ಜೆ. ಅಂಟೋಣಿ, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಕಸಾಪದ ಸದಸ್ಯರಾದ ಪಿ.ಸಿ. ಮ್ಯಾಥ್ಯೂ, ದಯಾನಂದ, ಸುರೇಶ್ ಕುಮಾರ್, ಎನ್.ಎಂ. ಕಾಂತರಾಜ್, ಬಿ.ನಂಜುಂಡಸ್ವಾಮಿ, ಕಾರ್ತಿಕ್ ಕಾರ್‌ಗದ್ದೆ ಮಂಜಪ್ಪ, ರಾಜಕುಮಾರ್, ವಿದ್ಯಾನಂದಕುಮಾರ್, ಅಸೀರಾ, ಜೆಸಿಐ ಜ್ವಾಲಾಮಾಲಿನಿ ಅಧ್ಯಕ್ಷ ಆದರ್ಶ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಜುಬೇದಾ, ಪ್ರಶಾಂತ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.