ADVERTISEMENT

ಹಾಳುಕೊಂಪೆಯಾದ ಕುದುರೆಮುಖ: ಕಗ್ಗತ್ತಲಿನಲ್ಲಿ ಕೂಲಿ ಕಾರ್ಮಿಕರ ನಿಕೃಷ್ಟ ಜೀವನ

ಪುನರ್ವಸತಿಯೂ ಇಲ್ಲ: ವಿದ್ಯುತ್ ಸಂಪರ್ಕವೂ ಇಲ್ಲ

ವಿಜಯಕುಮಾರ್ ಎಸ್.ಕೆ.
Published 27 ನವೆಂಬರ್ 2024, 4:49 IST
Last Updated 27 ನವೆಂಬರ್ 2024, 4:49 IST
ಕುದುರೆಮುಖದ ವಿನೋಭಾನಗರದಲ್ಲಿನ ಕಾರ್ಮಿಕರ ಮನೆಗಳು
ಕುದುರೆಮುಖದ ವಿನೋಭಾನಗರದಲ್ಲಿನ ಕಾರ್ಮಿಕರ ಮನೆಗಳು   

ಚಿಕ್ಕಮಗಳೂರು: ಒಂದು ಕಾಲದಲ್ಲಿ ಪಟ್ಟಣವಾಗಿದ್ದ ಕುದುರೆಮುಖ ಈಗ ಹಾಳು ಕೊಂಪೆಯಾಗಿದೆ. ಉದ್ಯೋಗ ಕಳೆದುಕೊಂಡವರು ಈಗ ಕೂಲಿ ಅರಸಿ ಅಲೆಯುತ್ತಿದ್ದಾರೆ. ಪುನರ್ವಸತಿ ಮರೀಚಿಕೆಯಾಗಿದ್ದರೆ, ವಿದ್ಯುತ್ ಸಂಪರ್ಕ ಸೇರಿ, ಮೂಲಸೌಕರ್ಯವೇ ಇಲ್ಲದ ಕಾರ್ಮಿಕ ಕಾಲೊನಿಯಲ್ಲಿ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ.

ಕುದುರೆಮುಖ ಕಬ್ಬಿಣ ಅದಿರು ಕಂಪನಿಯು (ಕೆಐಒಸಿಎಲ್‌) 1984ರಲ್ಲಿ ಆರಂಭವಾಗಿತ್ತು. ರಾಷ್ಟ್ರೀಯ ಉದ್ಯಾನ, ಪರಿಸರ ಸೂಕ್ಷ್ಮ ಪ್ರದೇಶ ಎಂಬ ಕಾರಣಕ್ಕೆ ಅದಿರು ಗಣಿಗಾರಿಕೆಯನ್ನು 2005ರಲ್ಲಿ ಬಂದ್ ಮಾಡಲಾಯಿತು. ಕಂಪನಿ ಬಾಗಿಲು ಮುಚ್ಚಿದ ನಂತರ ಟೌನ್‌ಶಿಪ್‌ ಕ್ರಮೇಣ ಖಾಲಿಯಾಗಿದ್ದು, ಅಲ್ಲಿ ಕಾಡು ಬೆಳೆಯಲಾರಂಭಿಸಿದೆ. ಕೇಂದ್ರಿಯ ವಿದ್ಯಾಲಯ, ದೊಡ್ಡ ಆಸ್ಪತ್ರೆ, ಕಾರ್ಮಿಕರ ವಸತಿ ಸಮುಚ್ಚಯ, ಬಸ್‌ ನಿಲ್ದಾಣ, ದೇವಸ್ಥಾನ, ಮಸೀದಿ, ಚರ್ಚ್ ಕಟ್ಟಡಗಳು ಸೇರಿದಂತೆ ಎಲ್ಲವೂ ಈಗ ಪಳೆಯುಳಿಕೆಗಳಂತೆ ಕಾಣಿಸುತ್ತಿವೆ.

ಕಂಪನಿ ಚಾಲ್ತಿಯಲ್ಲಿದ್ದಾಗ ಕುದುರೆಮುಖ ಟೌನ್‌ಶಿಪ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ಜನರಿದ್ದರು. ಮುಚ್ಚಿದ ಬಳಿಕ ಸಾವಿರಾರು ಜನ ಉದ್ಯೋಗ ಕಳೆದುಕೊಂಡರು. ಕೆಐಒಸಿಎಲ್‌ ಕಾಯಂ ಉದ್ಯೋಗಿ ಆಗಿದ್ದವರಿಗೆ ಕಂಪನಿಯಿಂದ ಒಂದಷ್ಟು ಪ್ರಯೋಜನಗಳು ದೊರೆತಿವೆ. ಆದರೆ, ಕಂಪನಿಯಿಂದ ತುಂಡು ಗುತ್ತಿಗೆ ಪಡೆದಿದ್ದವರ ಬಳಿ ಕೂಲಿ ಕಾರ್ಮಿಕರಾಗಿ ಸೇರಿದ್ದವರ ಪಾಡು ಹೇಳತೀರದಾಗಿದೆ. ಕಳಸ, ಸಂಸೆ ಸುತ್ತಮುತ್ತ ಗಾರೆ ಕೆಲಸ, ಕಾಫಿ ಮತ್ತು ಅಡಿಕೆ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇಂತಹ ಕಾರ್ಮಿಕರು ನೆಲೆಸಿದ್ದ ವಿನೋಭನಗರ, ಹೊಸಮಕ್ಕಿಯಂತಹ ಕಾರ್ಮಿಕ ಕಾಲೊನಿಗಳ ನಿವಾಸಿಗಳ ಸ್ಥಿತಿ ಶೋಚನೀಯವಾಗಿದೆ.

ADVERTISEMENT

ವಿನೋಭನಗರದಲ್ಲಿ 165ಕ್ಕೂ ಹೆಚ್ಚು ಕುಟುಂಬಗಳಿದ್ದು, ಸಣ್ಣ ಸಣ್ಣ ಜೋಪಡಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಜೋಪಡಿಗಳನ್ನು ವಿಸ್ತರಣೆ ಮಾಡಲು ಅರಣ್ಯ ಇಲಾಖೆ ಬಿಡುವುದಿಲ್ಲ, ಬೀಳುವ ಸ್ಥಿತಿಯಲ್ಲಿರುವ ಮನೆಗಳಲ್ಲೇ ವಾಸ ಮಾಡುತ್ತಿದ್ದಾರೆ. ಬೇರೆಡೆ ನಿವೇಶನ ನೀಡಿ ಪುನರ್ವಸತಿ ಕಲ್ಪಿಸಿದರೆ ಸ್ಥಳಾಂತರಕ್ಕೆ ಕಾರ್ಮಿಕರು ಸಿದ್ಧರಿದ್ದಾರೆ. ಆದರೆ, ಈ ಜಾಗಕ್ಕೆ ಹಕ್ಕುಪತ್ರವನ್ನೂ ನೀಡುತ್ತಿಲ್ಲ, ಬೇರೆಡೆ ನಿವೇಶನವನ್ನೂ ನೀಡುತ್ತಿಲ್ಲ ಎಂಬುದು ನಿವಾಸಿಗಳ ಬೇಸರ.

ಕಳಸ ಬಳಿ 10 ಎಕರೆ ಜಾಗವನ್ನು ಜಿಲ್ಲಾಡಳಿತ ಗುರುತಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ, ನಿವೇಶನ ಹಕ್ಕುಪತ್ರ ನೀಡಿಲ್ಲ. ಈಗಿರುವ ವಿನೋಭನಗರದಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಇರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಕಾಡಿನ ನಡುವೆ ಇವರ ಬದುಕು ಅಕ್ಷರಶಃ ಕತ್ತಲಾಗಿದೆ.

‘55 ವರ್ಷಗಳ ಹಿಂದೆ ದಿನಕ್ಕೆ ₹5 ಕೂಲಿ ಕೆಲಸಕ್ಕೆ ಬಂದೆ. ಆಗಿನಿಂದ ಇಲ್ಲೇ ನೆಲೆಸಿದ್ದೇನೆ. ಜಾಗ ಖಾಲಿ ಮಾಡಿ ಎನ್ನುವ ಸರ್ಕಾರ, ನಮಗೆ ಪುನರ್ವಸತಿ ಕಲ್ಪಿಸುತ್ತಿಲ್ಲ. ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಜೋಪಡಿಗಳಲ್ಲಿ ಜೀವನ ಸಾಗಿಸುತ್ತಿದ್ದೇವೆ’ ಎಂದು ಮಣಿ ಹೇಳಿದರು.

‘ಕಳಸ, ಸಂಸೆ ಭಾಗದಲ್ಲಿ ಕಾಫಿ ತೋಟಗಳಲ್ಲಿ ಕೂಲಿ ಮಾಡಿಕೊಂಡು ಬರುತ್ತಿದ್ದೇವೆ. ಅಲ್ಲೇ ನಿವೇಶನ ನೀಡಿದರೆ ಸ್ಥಳಾಂತರ ಆಗುತ್ತೇವೆ. ಅಲ್ಲಿಯ ತನಕ ಸೌಕರ್ಯ ಒದಗಿಸಬೇಕು. ದೀಪ ಹೊತ್ತಿಸಲು ಸೀಮೆಎಣ್ಣೆಯೂ ಸಿಗುತ್ತಿಲ್ಲ. ಕೆಲವರು ಸೋಲಾರ್‌ ದೀಪಗಳನ್ನು ತಂದಿದ್ದಾರೆ. ಮಳೆಗಾಲದಲ್ಲಿ ಅವೂ ಕೆಲಸಕ್ಕೆ ಬರುವುದಿಲ್ಲ. ಕತ್ತಲೆಯಲ್ಲೇ ಇರುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಕುದುರೆಮುಖದ ವಿನೋಭಾನಗರದಲ್ಲಿನ ಕಾರ್ಮಿಕರ ಮನೆಗಳು

ಶೌಚಾಲಯ ಇಲ್ಲ ಸ್ಮಶಾನವಿಲ್ಲ

ಅಷ್ಟೂ ಮನೆಗಳಿಗೆ ಒಂದು ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ಅದಕ್ಕೆ ನೀರಿನ ಸಂಪರ್ಕ ಇಲ್ಲ ಬಾಗಿಲುಗಳು ಮೊದಲೇ ಇಲ್ಲ. ಶೌಚಾಲಯ ಗುಂಡಿಗಳಲ್ಲಿ ಕಾಡು ಬೆಳೆದಿದೆ. ಅಷ್ಟೂ ಕುಟುಂಬಗಳಿಗೆ ಈಗ ಕಾಡಿನ ಬಯಲು ಶೌಚವೇ ಗತಿಯಾಗಿದೆ. ಜೋರು ಮಳೆಯಲ್ಲಿ ಆರು ತಿಂಗಳು ಮನೆಯಿಂದ ಹೊರಗೆ ಬರಲು ಆಗುವುದಿಲ್ಲ. ಜಿಗಣೆ ಕಾಟದ ನಡುವೆ ಶೌಚವೇ ದೊಡ್ಡ ತೊಂದರೆ ಎಂದು ವಿನೋಭನಗರದ ಚಂದ್ರಮ್ಮ ಹೇಳಿದರು. ‘ಯಾರಾದರೂ ಸತ್ತರೆ ಹೂಳಲು ಜಾಗವಿಲ್ಲ. ಸ್ಮಶಾನವಾಗಿ ಬಳಸುತ್ತಿದ್ದ ಜಾಗವೀಗ ಖಾಸಗಿಯವರ ಕಾಫಿತೋಟವಾಗಿದೆ. ಮೃತದೇಹ ಸುಡಲು ಒಂದು ಕಟ್ಟೆ ನಿರ್ಮಿಸಿದ್ದಾರೆ. ಆದರೆ ಇಲ್ಲಿ ಎಲ್ಲಾ ಸಮುದಾಯದವರೂ ಇದ್ದು ಕೆಲವರಿಗೆ ಹೂಳುವ ಸಂಪ್ರದಾಯ ಇದೆ. ಎಲ್ಲರೂ ಮೃತದೇಹ ಸುಡಬೇಕು ಎಂದು ಹೇಳುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.