ADVERTISEMENT

‘ವೀರಶೈವ ಲಿಂಗಾಯತ ಸಮಾಜದ ಸ್ತಂಭವಾಗಿದ್ದರು’

ಕಡೂರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:35 IST
Last Updated 23 ಡಿಸೆಂಬರ್ 2025, 6:35 IST
ಕಡೂರು ವೇದಾವತಿ ಶಾಲೆಯ ಸಭಾಂಗಣದಲ್ಲಿ ನಡೆದ ದಿವಂಗತ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಬೆಳ್ಳಿ ಪ್ರಕಾಶ್‌ ಮಾತನಾಡಿದರು 
ಕಡೂರು ವೇದಾವತಿ ಶಾಲೆಯ ಸಭಾಂಗಣದಲ್ಲಿ ನಡೆದ ದಿವಂಗತ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಬೆಳ್ಳಿ ಪ್ರಕಾಶ್‌ ಮಾತನಾಡಿದರು    

ಕಡೂರು: ವೀರಶೈವ ಲಿಂಗಾಯತ ಸಮಾಜದ ಸ್ತಂಭದಂತೆ ಇದ್ದ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಕಳೆದುಕೊಂಡ ಸಮಾಜವು ಅಕ್ಷರಶಃ ಬಡವಾಗಿದೆ ಎಂದು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ವೇದಾವತಿ ಶಾಲೆಯ ಸಭಾಂಗಣದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವೀರಶೈವ-ಲಿಂಗಾಯತ ಸಮಾಜವು ಸೋಮವಾರ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗಾಧವಾಗಿ ಬೆಳೆದರೂ ಅಹಂಕಾರ, ದರ್ಪ ತೋರಿಸದೆ ಧರ್ಮ, ರಾಜಕೀಯ, ಸಾಮಾಜಿಕ ಕ್ಷೇತ್ರವೂ ಸೇರಿದಂತೆ ಸಮಾಜದ ಎಲ್ಲ ರಂಗಗಳಲ್ಲಿ ತಮ್ಮದೇ ಆ ಛಾಪು ಮೂಡಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರವಾಗಿದೆ. ಸಮಾಜವನ್ನು ಕಟ್ಟಿ ಕೊಡುಗೈ ದಾನಿಯಾಗಿದ್ದ ಶಿವಶಂಕರಪ್ಪ ನಿಷ್ಟುರವಾದಿಗಳಾಗಿ ನುಡಿದಂತೆ ನಡೆದವರು. ಕಾಯಕ, ದಾಸೋಹ, ಧರ್ಮನಿಷ್ಠೆಯ ಮೂಲಕ ಇತರರಿಗೆ ಮಾದರಿಯಾಗಿ, ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನ ಪಡೆಯಬಹುದಾಗಿದ್ದರೂ ಅಧಿಕಾರಕ್ಕಾಗಿ ಹಪಹಪಿಸಲಿಲ್ಲ ಎಂದು ಹೇಳಿದರು.

ADVERTISEMENT

ನೆರವು ಬಯಸಿದ ಸಾವಿರಾರು ಕುಟುಂಬಗಳಿಗೆ, ಅನೇಕ ಮಠಗಳಿಗೆ ಸಹಾಯಹಸ್ತ ನೀಡಿದ್ದಾರೆ. ವೀರಶೈವ ಲಿಂಗಾಯತ ಸಂಘಟನೆ ಮತ್ತು ಶಾಮನೂರು ಕುಟುಂಬ ವರ್ಗದವರು ಅವರ ಮಾರ್ಗದರ್ಶನ ಅನುಸರಿಸಿ ಹೋಗಬೇಕಾಗಿದೆ ಎಂದರು.

ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿ, ಶಿವಶಂಕರಪ್ಪ ಅವರ ಮನೆಗೆ ಪಕ್ಷಾತೀತವಾಗಿ ನಾಯಕರು, ಮುಖಂಡರು ಬಂದು ಹೋಗುತ್ತಿದ್ದರು. ಅವರು ಅಂತಹ ವ್ಯಕ್ತಿತ್ವವನ್ನು ಗಳಿಸಿದ್ದರು. ಕೊಟ್ಟು ಬರಿದಾದದವರಿಲ್ಲ ಎಂಬ ನುಡಿಯಂತೆ ಶಿವಶಂಕರಪ್ಪ ಅವರ ಕುಟುಂಬದವರು ಕೈ ಎತ್ತಿ ದಾನ ನೀಡುವ ಮೂಲಕ ಯಶಸ್ಸನ್ನು ಕಂಡಿದ್ದಾರೆ. ದಾವಣಗೆರೆಯ ಮನೆಮನೆಯಲ್ಲಿ ಅವರ ನೆನಪು ಚಿರಸ್ಥಾಯಿಯಾಗಲಿದೆ. ವೀರಶೈವ ಲಿಂಗಾಯತ ಸಮಾಜವನ್ನು ಸಮಸ್ಯೆಗಳಿಲ್ಲದೆ ಮುನ್ನೆಡೆಸಿದ್ದಾರೆ. ಶಿವಶಂಕರಪ್ಪ ಅವರ ಅವರ ಸಾರ್ಥಕ ಬದುಕು ಸಮಾಜಕ್ಕೆ ಮಾರ್ಗದರ್ಶಕವಾಗಲಿ ಎಂದರು.

ಚಿಕ್ಕಪಟ್ಟಣಗೆರೆಯ ಶೇಖರಪ್ಪ ಮಾತನಾಡಿ, ಶಿವಶಂಕರಪ್ಪ ಅವರು ನಮ್ಮ ಸಮಾಜಕ್ಕೆ ಮತ್ತು ಸಿರಿಗೆರೆ ಮಠಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಎಂತಹ ಜಟಿಲ ಸಮಸ್ಯೆಗಳು ಬಂದರೂ ಕುಗ್ಗದೆ ಬಗೆಹರಿಸುವಲ್ಲಿ ಯಶಸ್ಸು ಕಂಡಿದ್ದರು ಎಂದರು.

ಸಭೆಯಲ್ಲಿ ಜಿ.ಟಿ.ಬಸವರಾಜ್, ಕೆ.ಎನ್.ಬೊಮ್ಮಣ್ಣ, ಡಾ.ಚಂದ್ರಶೇಖರ್, ಭಗೀರಥ ಸಮಾಜದ ಮುಖಂಡ ಟಿ.ಆರ್.ಲಕ್ಕಪ್ಪ, ಜಂಗಮ ಸಮಾಜದ ಅಧ್ಯಕ್ಷ ಎಂ.ಎಚ್.ಪ್ರಕಾಶಮೂರ್ತಿ, ಮುಸ್ಲಿಂ ಸಮಾಜದ ಮುಖಂಡ ಇಮಾಮ್ ಸಾಬ್, ಬಿದರೆ ಜಗದೀಶ್, ಬಿಜೆಪಿ ಘಟಕದ ಅಧ್ಯಕ್ಷ ದೇವಾನಂದ್ ಮತ್ತಿತರರು ಮಾತನಾಡಿದರು.

ಹಿರಿಯರಾದ ಎಂ.ಮರುಳಸಿದ್ದಪ್ಪ, ಶೆಟ್ಟಿಹಳ್ಳಿ ರಾಮಪ್ಪ,ಕೆ.ಎನ್. ಜಯಣ್ಣ, ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಶಿವಶಂಕರಪ್ಪ ಅವರ ನಿಕಟವರ್ತಿಗಳು, ಸಮಾಜದ ಹಿರಿಯರು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.