ADVERTISEMENT

ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ: ದೊಡ್ಡಣ್ಣ

ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 7:02 IST
Last Updated 18 ಜನವರಿ 2026, 7:02 IST
ಕೊಪ್ಪ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿತ್ರ ನಟ ದೊಡ್ಡಣ್ಣ ಉದ್ಘಾಟಿಸಿದರು. ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಕ.ಸಾಪ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ಇದ್ದರು
ಕೊಪ್ಪ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿತ್ರ ನಟ ದೊಡ್ಡಣ್ಣ ಉದ್ಘಾಟಿಸಿದರು. ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಕ.ಸಾಪ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ಇದ್ದರು   

ಶ್ರೀಹು.ವಾ.ಶ್ರೀವತ್ಸ ವೇದಿಕೆ (ಬಾಳೆಹೊನ್ನೂರು): ಮಕ್ಕಳಿಗೆ ಮೊಬೈಲ್ ನೀಡುವ ಬದಲು ಅವರ ಕೈಗೆ ಪುಸ್ತಕ ನೀಡುವ ಮೂಲಕ ಜ್ಞಾನಾರ್ಜನೆಗೆ ಪೋಷಕರು ಮುಂದಾಗಬೇಕು. ಇಂದಿನ ಮಕ್ಕಳಿಗೆ ಮಹಾಭಾರತ, ರಾಮಾಯಣ ಭೋದಿಸುವ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಕನ್ನಡದ ಹಿರಿಯ ನಟ ದೊಡ್ಡಣ್ಣ ಹೇಳಿದರು.

ಕೊಗ್ರೆಯ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಕೊಪ್ಪ ತಾಲ್ಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯವು ತಾಯಿಯ ಎದೆಹಾಲಿನಂತೆ, ಎಳೆನೀರಿನಂತೆ ಪರಿಶುದ್ದವಾದದ್ದು. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮನಸ್ಸಿಗೆ ನೂವಾದಾದ ಪುಸ್ತಕ ಓದಿ. ಪಾಶ್ಚಿಮಾತ್ಯ ಭಾಷೆ, ಸಂಸ್ಕೃತಿಯ ಪ್ರಭಾವದಿಂದ ಕನ್ನಡ ದಿನದಿಂದ ದಿನಕ್ಕೆ ದೂರವಾಗುತ್ತಿರುವುದು ಬೇಸರದ ವಿಚಾರವಾಗಿದೆ. ಆದರೆ ಇಂತಹ ಕನ್ನಡ ಜಾತ್ರೆಗಳು ನಿರಂತರ ನಡೆದರೆ ಕನ್ನಡ ಉಳಿಯುವ ಭರವಸೆ ಮೂಡಬಹುದು ಎಂದರು.

ADVERTISEMENT

ಭೂಮಿಯ ಹಿರಿಯ ಮಗ ರೈತನಾಗಿದ್ದು, ನಮ್ಮನ್ನು ತನ್ನ ಜೀವದ ಹಂಗು ತೊರೆದು ಗಡಿ ಕಾಯುವ ಸೈನಿಕ ಎರಡನೆಯ ಮಗನಾಗಿದ್ದಾನೆ. ಬ್ರಿಟಿಷರ ಕಾಲದಲ್ಲಿ ಬೆಂಗಳೂರಿನ ಕಮಿಷನರ್ ಆಗಿದ್ದ ಹಡ್ಸನ್ ಎಂಬುವವರು ನ್ಯಾಯಾಲಯದಲ್ಲಿ ಕನ್ನಡ ಕಲಾಪ ನಡೆಯುವಂತೆ ಮಾಡಲು ಕಾರಣರಾಗಿದ್ದಾರೆ. ಕನ್ನಡ ಸಾಹಿತ್ಯದ ಹಿರಿಮೆಯು ಜಗತ್ತಿನೆಲ್ಲೆಡೆ ಪಸರಿಸುವಲ್ಲಿ ಅನೇಕ ಕವಿ ದಿಗ್ಗಜರು ಕಾರಣರಾಗಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ವಿವಿಧ ಜಾನಪದ ಕಲಾ ತಂಡ ಹಾಗೂ ಆಕರ್ಷಕ ಸ್ತಬ್ಧಚಿತ್ರಗಳಿಂದ ವೇದಿಕೆಗೆ ಕರೆತರಲಾಯಿತು. ಕೊಪ್ಪದ ಭಾವಯಾನ ತಂಡದ ನಟರಾಜ್ ಗೋಗಟೆ, ನಾಗರತ್ನ ತಂಡದಿಂದ ನಾಡಗೀತೆ, ರೈತಗೀತೆ ಗಾಯನ ನಡೆಯಿತು. ಆದಿಚಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಟಿ.ಡಿ.ರಾಜೇಗೌಡ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕಸಾಪ ಕೊಪ್ಪ ತಾಲೂಕು ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ಕಸಾಪ ಪೂರ್ವಾಧ್ಯಕ್ಷರಾದ ಜಿ.ಎಸ್.ನಟರಾಜ್, ಎಚ್.ಎಂ.ಸುಬ್ಬಣ್ಣ, ಚಂದ್ರಕಲಾ, ನುಡಿಚಿತ್ರ ಸಂಗ್ರಹಕಾರ ಶಂ.ನ.ಶೇಷಗಿರಿ, ಗುಡ್ಡೇತೋಟ ಗ್ರಾ.ಪಂ.ಅಧ್ಯಕ್ಷೆ ಸವಿತಾ, ಮಾಜಿ ಅಧ್ಯಕ್ಷ ಕೀರ್ತಿ ಸುಂದರರಾಜ್, ಜಾನಪದ ಕಲಾವಿದ ಎಸ್.ಎಸ್.ವೆಂಕಟೇಶ್, ಎನ್‌.ಆರ್‌.ಪುರ ತಾಲ್ಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್, ಕೊಪ್ಪದ ನಾಗರಾಜ್ ಪವಾರ್, ಮೇಗುಂದಾ ಹೋಬಳಿ ಕಸಾಪ ಅಧ್ಯಕ್ಷ ಸಿ.ವಿ.ರಾಜೇಶ್, ಶೃಂಗೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ, ತಲವಾನೆ ಟಿ.ಪ್ರಕಾಶ್, ಎಚ್.ಜಿ.ವೆಂಕಟೇಶ್, ಆಗುಂಬೆ ಗಣೇಶ ಹೆಗ್ಗಡೆ, ಅನಿತಾ, ಅನ್ನಪೂರ್ಣ, ಸ್ವಾಗತ ಸಮಿತಿ ಅಧ್ಯಕ್ಷ ಬಿ.ಆರ್.ನಾರಾಯಣ ಬೆಂಡೆಹಕ್ಲು, ವಕೀಲ ಸುಧೀರ್ ಕುಮಾರ್ ಮುರೊಳ್ಳಿ. ಸಮಿತಿಯ ಸಂಚಾಲಕ ಕಿಬ್ಳಿ ಪ್ರಸನ್ನ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.