
ಬೀರೂರು (ಕಡೂರು): ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವವು ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಸೋಮವಾರ ಬೀರೂರಿನಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮಹೋತ್ಸವದ ಅಂಗವಾಗಿ ಭಾನುವಾರವೇ ಕಡೂರಿಗೆ ಬಂದು ವಾಸ್ತವ್ಯ ಮಾಡಿದ್ದ ರಂಭಾಪುರಿ, ಶ್ರೀಶೈಲ, ಕಾಶಿಯ ಹಿರಿಯ ಮತ್ತು ಕಿರಿಯ ಗುರುಗಳು, ಉಜ್ಜಯಿನಿಯ ಗುರುಗಳನ್ನು ಭಕ್ತರು ಸಿಂಗರಿಸಲಾಗಿದ್ದ ಪಲ್ಲಕ್ಕಿಯಲ್ಲಿ ಹೊತ್ತು ಕೆಎಲ್‌ಕೆ ಮೈದಾನದಿಂದ ರಂಭಾಪುರಿ ಖಾಸಾ ಶಾಖಾಮಠದ ಆವರಣದವರೆಗೆ ಮೆರವಣಿಗೆ ನಡೆಸಿದರು.
ಗುರುಗಳು ಪ್ರತಿನಿಧಿಸುವ ಹಸಿರು, ಕೆಂಪು, ನೀಲಿ, ಬಿಳಿ ಮತ್ತು ಹಳದಿ ಹೂಗಳಿಂದ ಪಲ್ಲಕ್ಕಿಯನ್ನು ಅಲಂಕರಿಸಲಾಗಿತ್ತು.
ಕಡೂರಿನಲ್ಲಿ ನಿತ್ಯಾನುಷ್ಠಾನ ಪೂರ್ಣಗೊಳಿಸಿದ ಎಲ್ಲ ಶ್ರೀಗಳು ಜತೆಯಾಗಿ ಮೈದಾನ ಪ್ರವೇಶಿಸಿ ಅಲ್ಲಿ ಸಿದ್ಧಪಡಿಸಿದ್ದ ಅಡ್ಡಪಲ್ಲಕ್ಕಿಯಲ್ಲಿ ಕುಳಿತು ಸಂಪ್ರದಾಯದಂತೆ ಸುವರ್ಣ ಕಿರೀಟ ಧಾರಣೆ ಮಾಡಿದರು.
ಎಲ್ಲ ಶ್ರೀಗಳು ಪಲ್ಲಕ್ಕಿಯಲ್ಲಿ ಅಸೀನರಾದ ತಕ್ಷಣ ಭಕ್ತರು ‘ಮಾನವ ಧರ್ಮಕ್ಕೆ ಜಯವಾಗಲಿ, .... ಧರ್ಮದಿಂದಲೇ ವಿಶ್ವಕ್ಕೆ ಶಾಂತಿ....’ ಎಂಬ ಘೋಷಣೆಗಳೊಡನೆ ಮೆರವಣಿಗೆಗೆ ಚಾಲನೆ ನೀಡಿದರು. ಪದ್ಧತಿಯಂತೆ ಮೊದಲು ಬಾಳೆಹೊನ್ನೂರು, ಬಳಿಕ ಉಜ್ಜಯಿನಿ, ಕಾಶಿಯ ಕಿರಿಯ ಶ್ರೀಗಳು, ಶ್ರೀಶೈಲ ಮತ್ತು ಕಾಶೀ ಶ್ರೀಗಳ ಪಲ್ಲಕ್ಕಿಯ ಮೆರವಣಿಗೆ ಹೊರಟಿತು.
ಮೆರವಣಿಗೆಯ ಮುಂಭಾಗದಲ್ಲಿ ಪೂರ್ಣಕುಂಭ, ಧರ್ಮಧ್ವಜ ಹಿಡಿದ ಮಹಿಳೆಯರು ಸಾಗಿದರೆ, ಮಂಗಳವಾದ್ಯ, ವೀರಗಾಸೆ ತಂಡಗಳು, ಡೊಳ್ಳುಕುಣಿತ ಉತ್ಸವಕ್ಕೆ ಮೆರುಗು ನೀಡಿದವು. ಕುದುರೆಯ ಮೇಲೆ ಕುಳಿತು ಧರ್ಮಧ್ವಜ ಹಿಡಿದ ಮಹಿಳೆ ಗಮನ ಸೆಳೆದರೆ, ತಾವರೆಕೆರೆ ಮಠದಿಂದ ತರಿಸಲಾಗಿದ್ದ ಯಾಂತ್ರಿಕೃತ ಆನೆ ಭಕ್ತರ ಮನ ಸೆಳೆಯಿತು.
ವಿವಿಧ ಸಂಘ-ಸಂಸ್ಥೆಗಳು, ಪುರಸಭೆ, ಹಲವು ಸಮುದಾಯಗಳ ಪರವಾಗಿ ಪಂಚಪೀಠಾಧೀಶರಿಗೆ ಫಲಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಲಾಯಿತು. ಭಕ್ತರು ಶ್ರೀಗಳ ದರ್ಶನ ಮತ್ತು ಮಂತ್ರಾಕ್ಷತೆ ಪಡೆದರು. ಮೆರವಣಿಗೆ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಯಂತ್ರಣ ಹಾಕಿ ಪರ್ಯಾಯ ರಸ್ತೆಯಲ್ಲಿ ವಾಹನ ಸಾಗುವಂತೆ ಸಿದ್ಧತೆ ನಡೆಸಲಾಗಿತ್ತು.
ಮೆರವಣಿಗೆ ಸಾಗುತ್ತಿರುವ ವೇಳೆಯಲ್ಲಿ ಶ್ರೀರಾಮಪುರಂ ಬಳಿ ಮುಸ್ಲಿಂ ಸಮುದಾಯದವರು ಭಕ್ತರಿಗೆ ಪಾನೀಯ ವಿತರಿಸಿದರು. ಬೆಳಿಗ್ಗೆಯಿಂದಲೂ ಪಿಎಂಶ್ರೀ ಶಾಲೆಯ ಆವರಣದಲ್ಲಿ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳ್ಳಿ ಬಳಗದ ಸ್ವಯಂ ಸೇವಕರು ಆಹಾರ ವಿತರಣೆ ವ್ಯವಸ್ಥೆ ಜತೆಗೆ ಕೌಂಟರ್ ಬಳಿ ಉದ್ಘೋಷಣೆ ಮೂಲಕ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಶಾಸಕ ಕೆ.ಎಸ್.ಆನಂದ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ವೈ.ಎಸ್.ವಿ.ದತ್ತ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಉತ್ಸವ ಸಮಿತಿ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಬಿ.ಆನಂದಶೆಟ್ಟಿ, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ರೇಣುಕಾರಾಧ್ಯ, ಉತ್ಸವ ಸಮಿತಿಯ ಬಿ.ವಿ.ಶಿವಸ್ವಾಮಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.