ADVERTISEMENT

ನಿರಾಶ್ರಿತರಿಗೆ ಕುದುರೆಮುಖದಲ್ಲಿ ಪುನರ್ವಸತಿ ನೀಡಲು ಸಲಹೆ : ಶೇಷಗಿರಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 17:10 IST
Last Updated 21 ಆಗಸ್ಟ್ 2018, 17:10 IST

ಕಳಸ: ಕೊಡಗು ಜಿಲ್ಲೆಯಲ್ಲಿ ಭೂಕುಸಿ ತದಿಂದಾಗಿ ನೆಲೆ ಕಳೆದುಕೊಂಡಿರುವ ಕುಟುಂಬಗಳಿಗೆ ಕುದುರೆಮುಖದಲ್ಲಿ ಪುನರ್ವಸತಿ ನೀಡಬಹುದು ಎಂಬ ಸಲಹೆ ಹೋಬಳಿಯಲ್ಲಿ ವ್ಯಕ್ತವಾಗಿದೆ.

ಕುದುರೆಮುಖದಲ್ಲಿ ಈಗಲೂ ಕಬ್ಬಿಣ ಅದಿರು ಸಂಸ್ಥೆಯ ಒಡೆತನದ 120 ಎಕರೆ ಭೂಮಿ ಇದೆ. ಅಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳು ಉಪಯೋಗವಿಲ್ಲದಂತೆ ಇವೆ. ಇವುಗಳನ್ನು ಕೊಡಗಿನ ವಸತಿರಹಿತರಿಗೆ ನೀಡಬಹುದಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಶೇಷಗಿರಿ ಹೇಳಿದ್ದಾರೆ.

ಪ್ರವಾಸೋದ್ಯಮದಲ್ಲಿ ನಿಪುಣರಾದ ಕೊಡಗಿನ ಜನರಿಗೆ ಕುದುರೆಮುಖದಲ್ಲಿ ಪ್ರವಾಸೋದ್ಯಮ ನಡೆಸಲು ಅವಕಾಶ ನೀಡಿದಲ್ಲಿ ಅವರಿಗೆ ಉದ್ಯೋಗವನ್ನೂ ನೀಡಿದಂತಾಗುತ್ತದೆ. ತಮ್ಮ ತವರಿನಲ್ಲಿ ತೋಟ, ಮನೆ ಕಳೆದುಕೊಂಡು ದಿಕ್ಕಿಲ್ಲದಂತೆ ಆಗಿರುವ ಕೊಡಗಿನ ಜನತೆಗೆ ಕುದುರೆಮುಖದಲ್ಲಿ ಅರ್ಥಪೂರ್ಣ ಪುನರ್ವಸತಿ ಕಲ್ಪಿಸುವುದಕ್ಕೆ ಅವಕಾಶ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಶೇಷಗಿರಿ ಒತ್ತಾಯಿಸಿದ್ದಾರೆ.

ADVERTISEMENT

ಸುರೇಶ್ ಭಟ್ ಸಹಮತ: ಕೊಡಗಿ ನಲ್ಲಿ ಸಂಭವಿಸಿದ ಭೂಕುಸಿತ ದಿಂದಾಗಿ ಸಾವಿರಾರು ಮನೆಗಳು ನಾಶವಾಗಿದ್ದು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಅವರಿಗೆ ಕುದುರೆಮುಖದಲ್ಲಿ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಬಹುದಾಗಿದೆ ಎಂದು ನೆಲ್ಲಿಬೀಡು ಸಂರಕ್ಷಣಾ ಸಮಿತಿ ಅಧ್ಯಕ್ಷ ಸುರೇಶ್ ಭಟ್ ಹೇಳಿದ್ದಾರೆ.

ಕುದುರೆಮುಖದಲ್ಲಿ ಎಲ್ಲ ಬಗೆಯ ಮೂಲಸೌಕರ್ಯ ಇರುವ 1,800 ಮನೆಗಳು ಖಾಲಿ ಇವೆ. ಇಲ್ಲಿ ಆರೋಗ್ಯ ಸಂಸ್ಥೆ, ಶಾಲಾ ಕಾಲೇಜು ಕೂಡ ಇದ್ದು ಕೊಡಗಿನ ಜನತೆಯ ಪುನರ್ವಸತಿಗೆ ತಕ್ಕ ವಾತಾವರಣವೂ ಇದೆ. ಖಾಲಿ ಬಿದ್ದು ನಿರುಪಯೋಗಿ ಆಗಿರುವ ಮನೆಗಳನ್ನು ಬಳಸಿಕೊಂಡಂತೆಯೂ ಆಗುತ್ತದೆ ಎಂದು ಸುರೇಶ್ ಭಟ್ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.