ADVERTISEMENT

ಕಳಸ ತಾಲ್ಲೂಕು: ನನಸಾದ ಮೂರು ದಶಕಗಳ ಕನಸು

ಕಳಸ ತಾಲ್ಲೂಕು ಅಸ್ತಿತ್ವಕ್ಕೆ– ಅಭಿವೃದ್ಧಿಯ ಹೊಸ ಭಾಷ್ಯಕ್ಕೆ ನಾಂದಿ

ರವಿ ಕೆಳಂಗಡಿ
Published 20 ಜೂನ್ 2021, 1:30 IST
Last Updated 20 ಜೂನ್ 2021, 1:30 IST
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಳಸ ತಾಲ್ಲೂಕಿನ ನಕ್ಷೆ.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಳಸ ತಾಲ್ಲೂಕಿನ ನಕ್ಷೆ.   

ಕಳಸ: 80ರ ದಶಕದಲ್ಲಿ ಕಳಸ ತಾಲ್ಲೂಕು ಆಗಬೇಕೆಂದು ಆಗಿನ ಕೆಲ ಮುಖಂಡರು ಕೊಟ್ಟ ಕರೆಗೆ ಜಿಲ್ಲೆಯ ಬಹುತೇಕ ಜನರು ನಕ್ಕಿದ್ದರು. ಆದರೆ, ಸತತ ಹೋರಾಟದ ಹಿನ್ನೆಲೆಯಲ್ಲೇ ಈಗ ಕಳಸ ತಾಲ್ಲೂಕು ಕೇಂದ್ರ ಅಸ್ತಿತ್ವಕ್ಕೆ ಬಂದಿದೆ.

ಕಳಸ ಎಂಬ ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಮಾರ್ಪಾಡಿಸಲು ಎಲ್ಲ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಆಯಾ ಕಾಲಘಟ್ಟದಲ್ಲಿ ಹೋರಾಟ ಜೀವಂತ ಇಟ್ಟಿದ್ದು ಮತ್ತು ರಾಜಕೀಯ ಬದ್ಧತೆ ತೋರಿದ್ದು ಕಾರಣವಾಗಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

40 ಸಾವಿರದ ಆಸುಪಾಸಿನ ಜನಸಂಖ್ಯೆಯ 6 ಗ್ರಾಮ ಪಂಚಾಯಿತಿಗಳು ಮಾತ್ರ ಇರುವ ಕಳಸ ತಾಲ್ಲೂಕು ಪಕ್ಕದ ಶೃಂಗೇರಿ ತಾಲ್ಲೂಕಿನಂತೆ ಚಿಕ್ಕ ತಾಲ್ಲೂಕು. ಆದರೆ, ಇಲ್ಲಿನ ಜನಸಂಖ್ಯೆ ಮರೆತು ಭೌಗೋಳಿಕ ಪ್ರದೇಶದ ವಿಸ್ತಾರ ಮತ್ತು ಗುಡ್ಡಗಾಡಿನಲ್ಲಿ ವಾಸವಾಗಿರುವ ಕುಟುಂಬಗಳ ಅನುಕೂಲ ಗಮನಿಸಿದರೆ ಕಳಸ ತಾಲ್ಲೂಕಿನ ಘೋಷಣೆಯು ಅತ್ಯಂತ ಅಗತ್ಯದ್ದು ಮತ್ತು ಸಕಾಲಿಕವೂ ಹೌದು.

ADVERTISEMENT

80-90ರ ದಶಕದಲ್ಲಿ ತಾಲ್ಲೂಕುಗಳ ಪುನರ್‌ ರಚನೆಗೆ ಬಂದಿದ್ದ ಗದ್ದಿಗೌಡರ್ ಮತ್ತು ಹುಂಡೇಕರ್ ಸಮಿತಿಗಳು ಕಳಸದ ಜನಸಂಖ್ಯೆ ಗಮನಿಸಿ ‘ಕಳಸ ತಾಲ್ಲೂಕು ಅಗತ್ಯ ಇಲ್ಲ’ ಎಂದೇ ವರದಿ ನೀಡಿದ್ದವು. 2010ರ ಪ್ರಕಾಶ್ ನೇತೃತ್ವದ ಸಮಿತಿಯಂತೂ ಕಳಸಕ್ಕೆ ಬರದೇ ಕಳಸ ತಾಲ್ಲೂಕು ಪ್ರಸ್ತಾಪ ನಿರಾಕರಿಸಿ, ವಿಶೇಷ ತಹಶೀಲ್ದಾರ್ ಸಾಕು ಎಂಬ ಅಭಿಪ್ರಾಯ ನೀಡಿತ್ತು.

ಆದರೂ ಛಲ ಬಿಡದ ಕಳಸದ ಮುಖಂಡರು, ಹಲವಾರು ರಾಜಕೀಯ ಪಕ್ಷಗಳಲ್ಲಿ ಹಂಚಿಹೋಗಿದ್ದರೂ ಹೋರಾಟವನ್ನು ಸತತವಾಗಿ ನಡೆಸಿ ಕಳಸ ತಾಲ್ಲೂಕು ಘೋಷಣೆ ಆಗುವಂತೆ ಸಫಲತೆ ಕಂಡರು. 2019ರಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳಸ ತಾಲ್ಲೂಕು ಘೋಷಣೆ ಮಾಡಿದರು.

ಇದಕ್ಕೂ ಮುನ್ನ 50 ಹೊಸ ತಾಲ್ಲೂಕುಗಳ ಘೋಷಣೆ ಆಗಿದ್ದರೂ ಕಳಸದ ಹೆಸರು ಇಲ್ಲದ ಬಗ್ಗೆ ಕಳಸದಲ್ಲಿ ತೀವ್ರ ಅಸಮಾಧಾನ ಇತ್ತು. ಇದನ್ನು ದೇವೇಗೌಡರ ಮನೆಗೆ ಹೋಗಿ ಕಳಸದ ನಿವಾಸಿಗಳು ತೋಡಿಕೊಂಡಿದ್ದರು. ಪರಿಣಾಮವಾಗಿ ಕಳಸ ತಾಲ್ಲೂಕಿನ ಬೀಜವನ್ನು ಎಚ್.ಡಿ.ಕುಮಾರಸ್ವಾಮಿ ಬಲವಾಗಿಯೇ ಬಿತ್ತಿದ್ದರು.

ಎರಡು ವರ್ಷದ ನಂತರವೂ
ಕಳಸ ತಾಲ್ಲೂಕಿನ ಗಡಿ ಗುರುತು ಅಥವಾ ಅಂತಿಮ ಅಧಿಸೂಚನೆ ಹೊರಡಲಿಲ್ಲ. ಇದು ಬಿಜೆಪಿ ಪಾಳಯಕ್ಕೆ ಕಳಸದಲ್ಲಿ ಮುಜುಗರದ ಸಂಗತಿಯೇ ಆಗಿತ್ತು. ಸ್ಥಳೀಯ ಬಿಜೆಪಿ ಮುಖಂಡರು 6 ತಿಂಗಳಿನಿಂದ ಶಾಸಕರಾದ ಕುಮಾರಸ್ವಾಮಿ, ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಡಿ.ಎನ್‌.ಜೀವರಾಜ್ ಮೇಲೆ ಈ ಬಗ್ಗೆ ಒತ್ತಡ ಹೇರುತ್ತಲೇ ಇದ್ದರು.

ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಅವರಂತೂ ತನ್ನ ತಾಯಿಯ ತವರೂರಾದ ಕಳಸಕ್ಕೆ ತಾಲ್ಲೂಕಿನ ಕೊಡುಗೆ ನೀಡುವ ಪಣ ತೊಟ್ಟಿದ್ದರು. ಎಲ್ಲರ ಪ್ರಯತ್ನದಿಂದಾಗಿ ಇದೀಗ ಕಳಸ ತಾಲ್ಲೂಕು ಅಂತಿಮ ಅಧಿಸೂಚನೆ ಹೊರಟಿದೆ. ಕಳಸದಲ್ಲಿ ಇನ್ನಿಲ್ಲದ ಸಡಗರ ಮನೆ ಮಾಡಿದೆ.

‘ಕಳಸ ತಾಲ್ಲೂಕಿನ ಜೊತೆಗೆ ಕಳಸ ಪಟ್ಟಣ ಪಂಚಾಯಿತಿ, ಕಳಸ ತಾಲ್ಲೂಕು ಪಂಚಾಯಿತಿ ಕೂಡ ಅಸ್ತಿತ್ವಕ್ಕೆ ಬರಲಿವೆ. ಇದರೊಂದಿಗೆ ಕಳಸದಲ್ಲಿ ಅಭಿವೃದ್ಧಿಯ ಹೊಸ ಭಾಷ್ಯವೇ ಕಂಡು ಬರಲಿದೆ’ ಎಂದು ಸದಾ ಕಳಸ ತಾಲ್ಲೂಕಿನ ಕನಸು ಕಾಣುತ್ತಿದ್ದ ಜಿ.ಕೆ.ಮಂಜಪ್ಪಯ್ಯ ಪ್ರತಿಕ್ರಿಯಿಸಿದ್ದಾರೆ.

ಕಳಸದ ನಾಡ ಕಚೇರಿ ಆವರಣದಲ್ಲೇ ಮಿನಿ ವಿಧಾನಸೌಧ ನಿರ್ಮಾಣ ಆಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಉಳಿದ ಇಲಾಖೆಗಳ ಕಚೇರಿಗಳಿಗೆ ಗಣಪತಿಕಟ್ಟೆಯಲ್ಲಿ 40 ಎಕರೆ ಭೂಮಿ ಮಂಜೂರು ಮಾಡಲು ಸಿದ್ಧತೆಗಳು ನಡೆದಿವೆ. ಕಳಸದ ಬಡ ಮತ್ತು ಅಸಹಾಯಕ ಮನಸ್ಸುಗಳನ್ನು ದೂರದ ಮೂಡಿಗೆರೆಯ ಸಂಕೋಲೆಯಿಂದ ಬಿಡಿಸಿದ ತೃಪ್ತಿ ಎಲ್ಲರಲ್ಲೂ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.