ADVERTISEMENT

‘ಮೌಲ್ಯವರ್ಧಿತ ಉತ್ಪನ್ನಗಳಿಗೆ ಒತ್ತು ಕೊಡಿ’‌

ಕಡೂರು: ದಾಳಿಂಬೆ ಬೆಳೆಗಾರರಿಗೆ ತಾಂತ್ರಿಕ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:05 IST
Last Updated 13 ಡಿಸೆಂಬರ್ 2025, 4:05 IST
ಕಡೂರು ಹೊರವಲಯದ ಹೆರಿಟೇಜ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಶುಕ್ರವಾರ ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ ಮತ್ತು ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ತಾಂತ್ರಿಕ ಕಾರ್ಯಾಗಾರದಲ್ಲಿ ದಾಳಿಂಬೆ ಬೆಳೆಯಲ್ಲಿ ಪ್ರಗತಿ ಸಾಧಿಸಿದ ರೈತರನ್ನು ಸನ್ಮಾನಿಸಲಾಯಿತು
ಕಡೂರು ಹೊರವಲಯದ ಹೆರಿಟೇಜ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಶುಕ್ರವಾರ ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ ಮತ್ತು ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ತಾಂತ್ರಿಕ ಕಾರ್ಯಾಗಾರದಲ್ಲಿ ದಾಳಿಂಬೆ ಬೆಳೆಯಲ್ಲಿ ಪ್ರಗತಿ ಸಾಧಿಸಿದ ರೈತರನ್ನು ಸನ್ಮಾನಿಸಲಾಯಿತು   

ಕಡೂರು: ‘ರೈತರು ತಮ್ಮ ಉತ್ಪಾದನೆಗಳಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಒತ್ತು ಕೊಡಬೇಕು’ ಎಂದು ಜಲಾನಯನ ಇಲಾಖೆ ಜಂಟಿ ನಿರ್ದೇಶಕ ಪ್ರಸಾದ್‌ ಬಿ.ಎನ್‌. ಕರೆ ನೀಡಿದರು.

ಕಡೂರು ಹೊರವಲಯದ ಹೆರಿಟೇಜ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಶುಕ್ರವಾರ ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ ಮತ್ತು ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ನೂರಾರು ಎಫ್‌ಪಿಒಗಳು ಆರಂಭಗೊಂಡರೂ ಬೆರಳೆಣಿಕೆಯಷ್ಟು ಮಾತ್ರ ಸುಸ್ಥಿತಿಯಲ್ಲಿವೆ. ಕೇವಲ ನಾಲ್ಕೂವರೆ ವರ್ಷದ ಅವಧಿಯಲ್ಲಿ ₹20 ಕೋಟಿಗೂ ಅಧಿಕ ವ್ಯವಹಾರ ನಡೆಸಿ, ₹2 ಕೋಟಿಯಷ್ಟು ಲಾಭ ಗಳಿಸಿ, ಷೇರುದಾರರಿಗೆ ಶೇ 25ರಷ್ಟು ಡಿವಿಡೆಂಡ್‌ ಘೋಷಿಸಿದ ಹೆಗ್ಗಳಿಕೆ ದಾಳಿಂಬೆ ರೈತೋತ್ಪಾದಕ ಸಂಸ್ಥೆಗೆ ಸಲ್ಲುತ್ತದೆ. ವಿದೇಶಗಳಲ್ಲಿ ದಾಳಿಂಬೆ ಬೀಜಕ್ಕೆ ಅತ್ಯುತ್ತಮ ಬೇಡಿಕೆ ಹಾಗೂ ದರವಿದ್ದು, ರೈತರು ಮೌಲ್ಯವರ್ಧಿತ ಉತ್ಪನ್ನಕ್ಕೆ ಮುಂದಾಗಬೇಕು. ಈ ಭಾಗದ ಅಡಿಕೆ, ತೆಂಗು ಬೆಳೆಗಾರರು ಅಂತರ ಬೆಳೆಯಾಗಿ ಕಾಫಿ, ಕಾಳು ಮೆಣಸು, ಕೋಕೊ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ದಾಳಿಂಬೆಯ ಉತ್ಪಾದನೆಯಿಂದ ಆರ್ಥಿಕವಾಗಿ ರಾಜ್ಯದಲ್ಲಿ ವಾರ್ಷಿಕ ₹200 ಕೋಟಿಯಷ್ಟು ವಹಿವಾಟು ನಡೆಯುತ್ತಿವೆ. ಮುಖ್ಯವಾಗಿ ಬೆಳೆಗಾರರು ಉತ್ಕೃಷ್ಟ ಬೆಳೆ ಬೆಳೆಯಲು ಒತ್ತುಕೊಡಬೇಕಿದೆ. ಇದಕ್ಕೆ ಪೂರಕವಾಗಿ ದಾಳಿಂಬೆ ರೈತೋತ್ಪಾದಕ ಸಂಸ್ಥೆಯು ಬೆನ್ನಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸಂಸ್ಥೆಯು ತನ್ನ ಶಾಖೆಗಳನ್ನು ಆರಂಭಿಸುವ ಚಿಂತನೆ ನಡೆಸಬೇಕು. ಇದರಿಂದ ರೈತರ ಬೆಳೆಗಳಿಗೆ ಬೇಡಿಕೆಯ ಅನುಸಾರ ಮಾರುಕಟ್ಟೆಯ ಧಾರಣೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಎಂ. ತಿರುಮಲೇಶ್ ಮಾತನಾಡಿ, ರೈತರು ಒಂದಾದರೆ ಏನಾದರೂ ಸಾಧಿಸಬಹುದು. ಉತ್ಪನ್ನಗಳ ಸ್ಥಿರತೆ ಮತ್ತು ಲಭ್ಯತೆಯನ್ನು ಆಲೋಚಿಸಿ ಭವಿಷ್ಯದ ಬಗ್ಗೆಯೂ ಚಿಂತಿಸಬೇಕಿದೆ. ಒಂದೇ ಬೆಳೆ ಅವಲಂಬಿಸಿದರೆ ಮಣ್ಣು ಸತ್ವ ಕಳೆದುಕೊಳ್ಳುವ ಅಪಾಯವಿದೆ. ಮಣ್ಣಿನ ಸತ್ವ ಹಾಗೂ ಪೂರಕ ವಾತಾವರಣಕ್ಕೆ ಅನುಗುಣವಾಗಿ ಪರ್ಯಾಯ ಬೆಳೆಗಳು ಮತ್ತು ಸಂಸ್ಕರಣೆ ಪಡಿಸುವ ಕ್ರಮಗಳಿಗೆ ಒತ್ತುಕೊಡಬೇಕಿದೆ. ರೈತರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಬೇಕಿದೆ. ತನ್ನ ಉತ್ಪನ್ನಗಳಿಗೆ ಸೂಕ್ತ ಬೆಲೆಗಳನ್ನು ಕಲ್ಪಿಸಿಕೊಳ್ಳಲು ಪ್ಯಾಕಿಂಗ್ ವ್ಯವಸ್ಥೆಯಿಂದ ಹೊರದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ಬೆಳೆಯಲು ಮಾರುಕಟ್ಟೆ ಅಧ್ಯಯನ ಮಾಡಲು ಮುಂದಾಗಿ ಎಂದರು.

ಹಾಸನದ ಜಂಟಿ ಕೃಷಿ ನಿರ್ದೇಶಕ ರಮೇಶ್‌ ಕುಮಾರ್‌ ಮಾತನಾಡಿ, ರೈತರು ಕೃಷಿ ಅಥವಾ ತೋಟಗಾರಿಕೆಯಲ್ಲಿ ಯಶಸ್ಸು ಸಾಧಿಸಲು ಬದ್ಧತೆ ಮುಖ್ಯವಾಗಿದೆ. ಇದರಿಂದ ರೈತೋತ್ಪಾದಕ ಸಂಸ್ಥೆಗಳು ಪ್ರಗತಿ ಸಾಧಿಸಬಹುದು. ಬಹಳಷ್ಟು ಎಫ್‌ಪಿಒಗಳ ವೈಫಲ್ಯದಲ್ಲಿ ಹಣಕಾಸಿನ ನಿರ್ವಹಣೆಯ ವಿಫಲತೆ ಮತ್ತು ವಿತ್ತೀಯ ಶಿಸ್ತಿನ ಕೊರತೆಯೇ ಕಾರಣವಾಗಿದೆ. ಕೃಷಿಯನ್ನು ವ್ಯವಹಾರವಾಗಿ ಪರಿಗಣಿಸಿ, ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸಿದಾಗ ಉನ್ನತಿ ಸಾಧಿಸಬಹುದು ಎಂದರು.

ತೋಟಗಾರಿಕೆ ಜಂಟಿ ನಿರ್ದೇಶಕಿ ಕೆ. ಮಂಗಳಾ ಮಾತನಾಡಿ, ತೋಟಗಾರಿಕೆ ಬೆಳೆಯಲ್ಲಿ ದಾಳಿಂಬೆಯು ಶ್ರೀಮಂತ ಬೆಳೆಯಾಗಿ ಮಾರ್ಪಾಡುಗೊಂಡಿದೆ. ಇದಕ್ಕೆ ರೈತರ ಬದ್ಧತೆಯು ಮುಖ್ಯಕಾರಣವಾಗಿದೆ. ದಾಳಿಂಬೆ ಬೆಳೆಗಾರರ ನೇತೃತ್ವ ವಹಿಸಿರುವ ಯೋಗೀಶ್ವರ ಅವರ ಶಿಸ್ತು ಸಂಸ್ಥೆಯ ಯಶಸ್ಸಿಗೂ ಕಾರಣವಾಗಿದೆ. ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯ ಮೂಲಕ ರೈತರಿಗೆ ಅನುಕೂಲವಾಗಲಿದೆ ಎಂದರು.

ಎಸ್ಆರ್‌ಪಿಜಿ ಸಂಸ್ಥೆ ನಿರ್ದೇಶಕ ಎಸ್.ಎಂ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಆರ್ಥಿಕವಾಗಿ ರೈತ ಸಬಲರಾದರೆ ದೇಶ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆದು ಉತ್ತಮ ಆದಾಯ ಗಳಿಸಿದ ಬೆಳೆಗಾರರಿಗೆ ಗೌರವಿಸಲಾಯಿತು. ಸಂಶೋಧನಾ ವಿಜ್ಞಾನಿಗಳಾದ ಎನ್.ಮಂಜುನಾಥ್, ಶಿಲ್ಪಾ, ಬಸನಗೌಡ ಮಣ್ಣು, ನೀರು, ಬೆಳೆಗಳ ರಕ್ಷಣೆ, ಪೋಷಕಾಂಶಗಳ ಪೂರೈಕೆ ವಿಷಯವಾಗಿ ಉಪನ್ಯಾಸ ನೀಡಿದರು.

ಟಿ.ಎಸ್.ದಿನೇಶ್, ಎಸ್ಆರ್‌ಪಿಜಿ ನಿರ್ದೇಶಕರಾದ ಜಿ.ಎಸ್. ಯತೀಶ್, ಗೋವರ್ಧನ್, ಡಿ.ಆರ್. ಸಚ್ಚಿದಾನಂದ ಸ್ವಾಮಿ, ಟಿ.ಕೆ. ಶ್ಯಾಮಲಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯದೇವಪ್ಪ, ಶ್ರೀಧರ್, ಸಂಸ್ಥೆಯ ಸಿಇಒ ಪ್ರಿಯಾ ಇದ್ದರು.

ಮಾರುಕಟ್ಟೆ ಮೌಲ್ಯವರ್ಧನೆಗೆ ಕ್ರಮ

‘ತಾಂತ್ರಿಕವಾಗಿ ದಾಳಿಂಬೆ ಬೆಳೆಗಾರರು ಮುಂದುವರೆಯಬೇಕೆಂಬ ಆಶಯದಿಂದ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಈಗಾಗಲೇ ಬೆಳೆಗಾರರಿಗೆ ಬೆಳೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಪರಿಹಾರ ದೊರಕಿಸಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದೇ ರೀತಿ ಉತ್ಪಾದನೆಗೂ ಗಮನಹರಿಸಲಾಗಿದ್ದು ಜಿಯೊಟ್ಯಾಗ್ ವ್ಯವಸ್ಥೆ ಕಲ್ಪಿಸಿ ಮಾರುಕಟ್ಟೆ ಮೌಲ್ಯವರ್ಧನೆಗೆ ಕ್ರಮ ವಹಿಸಲಾಗುತ್ತದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ದಾಳಿಂಬೆಯ ಉತ್ಪನ್ನಗಳು ಹೆಚ್ಚು ಉತ್ಕೃಷ್ಟವಿದ್ದು ಬೇಡಿಕೆಯೂ ಹೆಚ್ಚಾಗಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಎಸ್ಆರ್‌ಪಿಜಿ ಸಂಸ್ಥೆಯ ಅಧ್ಯಕ್ಷ ಎಚ್.ಆರ್.ಯೋಗೀಶ್ವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.