ಕಡೂರು: ದುಬಾರಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ಲಭ್ಯಗೊಳಿಸುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಆರಂಭಿಸಿದ 8 ಕೃಷಿ ಯಂತ್ರ ಧಾರೆ ಕೇಂದ್ರಗಳಲ್ಲಿ 5 ಈಗಾಗಲೇ ಸ್ಥಗಿತಗೊಂಡಿವೆ.
ರಾಜ್ಯ ಸರ್ಕಾರದ ಶೇ70 ಮತ್ತು ಖಾಸಗಿ ಸಂಸ್ಥೆಯ ಶೇ 30 ಸಹಭಾಗಿತ್ವದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿತ್ತು. ರೈತರಿಗೆ ಅಗತ್ಯವಿರುವ ಟ್ರ್ಯಾಕ್ಟರ್, ನೇಗಿಲು, ಕುಂಟೆ, ಟ್ಯಾಂಕರ್, ದೊಡ್ಡ ನೇಗಿಲು, ಪವರ್ ವೀಡ್ ಕಟರ್, ಔಷಧ ಸಿಂಪಡನೆ ಯಂತ್ರಗಳು, ಮರಹತ್ತುವ ಯಂತ್ರ, ಡಿಗ್ಗರ್, ಉಪಕರಣಗಳನ್ನು ದೈನಂದಿನ ಬಾಡಿಗೆ ಆಧಾರದಲ್ಲಿ ನೀಡುವ ಉದ್ದೇಶದಿಂದ ಈ ಘಟಕಗಳು ಹೋಬಳಿಗೊಂದರಂತೆ ಆರಂಭಗೊಂಡಿದ್ದವು.
ಆದರೆ, ತಾಲ್ಲೂಕಿನಲ್ಲಿ ಆರಂಭಗೊಂಡ 8 ಕೇಂದ್ರಗಳಲ್ಲಿ 5 ಪಾಳುಬಿದ್ದಿವೆ. ಅಲ್ಲಿದ್ದ ಯಂತ್ರೋಪಕರಣಗಳು ಏನಾಗಿವೆ ಎಂಬ ಮಾಹಿತಿಯೂ ರೈತರಿಗಿಲ್ಲ. ಒಂದು ಎಕರೆ ಭೂಮಿಯನ್ನು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಲು ಕಲ್ಟಿವೇಟರ್ ₹1 ಸಾವಿರ, ಜೋಡಿ ನೇಗಿಲು ₹3 ಸಾವಿರ, ಒಂಟಿ ನೇಗಿಲು ₹3,500, ಐದು ಹಲ್ಲಿನ ನೇಗಿಲು ₹1,500 ದರ ನೀಡಬೇಕಿದೆ. ಆದರೆ, ಇದೇ ಕೆಲಸವನ್ನು ಕೃಷಿ ಯಂತ್ರಧಾರೆಯಲ್ಲಿ ದಿನದ ಲೆಕ್ಕದಲ್ಲಿ ಯಂತ್ರಗಳನ್ನು ಬಾಡಿಗೆ ಪಡೆದು ಮಾಡಿದರೆ ಶೇ 50 ಹಣ ಉಳಿಯುತ್ತದೆ.
ಯಗಟಿ ಮತ್ತು ಹಿರೇನಲ್ಲೂರಿನ ಕೃಷಿ ಯಂತ್ರಧಾರೆ ಕೇಂದ್ರಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮರ್ಪಕವಾಗಿ ನಿರ್ವಹಣೆಯಾಗುತ್ತಿದೆ. ಆ ಭಾಗದ ರೈತರಿಗೆ ಇದರಿಂದ ಅನುಕೂಲವಾಗಿದೆ. ಕಸಬಾ ಹೋಬಳಿಯ ಕೃಷಿಯಂತ್ರಧಾರೆ ಕೇಂದ್ರವೂ ತೃಪ್ತಿಕರ ಮಟ್ಟದಲ್ಲಿ ನಡೆಯುತ್ತಿದೆ ಎನ್ನುತ್ತಾರೆ ರೈತರು. ಆದರೆ, ಉಳಿದ 5 ಕಡೆ ( ಸಿಂಗಟಗೆರೆ, ಪಂಚನಹಳ್ಳಿ, ಬೀರೂರು, ಸಖರಾಯಪಟ್ಟಣ, ಚೌಳಹಿರಿಯೂರು) ಈ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಆ ಸಂಸ್ಥೆಯವರು ಕೇಂದ್ರವನ್ನು ಮುಚ್ಚಿ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೇಂದ್ರಗಳು ಸ್ಥಗಿತವಾಗಿರುವುದರಿಂದ ಆ ಭಾಗದ ರೈತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಕೃಷಿ ಯಂತ್ರಧಾರೆ ಕೇಂದ್ರ ನಿರ್ವಹಣೆ ಪಡೆದುಕೊಂಡಿದ್ದ ಸಂಸ್ಥೆ ವಿರುದ್ಧ ಕೃಷಿ ಇಲಾಖೆಯು ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಸರ್ಕಾರದ ಹಣ ದುರ್ಬಳಕೆ ಪ್ರಕರಣ ದಾಖಲಿಸಿದೆ. ಒಪ್ಪಂದ ಉಲ್ಲಂಘನೆ ಆಗಿರುವುದರಿಂದ ಇದನ್ನು ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಪೊಲೀಸ್ ಇಲಾಖೆಯು ಕೃಷಿ ಇಲಾಖೆ ತಿಳಿಸಿದೆ.
ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಪುನಶ್ಚೇತನ ನೀಡಿ ಅನುಕೂಲ ಕಲ್ಪಿಸಬೇಕು ಎನ್ನುವುದು ತಾಲ್ಲೂಕಿನ ರೈತರ ಆಗ್ರಹ.
ತಾಲ್ಲೂಕಿನ 5 ಕೃಷಿ ಯಂತ್ರಧಾರೆ ಕೇಂದ್ರಗಳ ನಿರ್ವಹಣೆಯ ಒಪ್ಪಂದ ಉಲ್ಲಂಘಿಸಿದ ಸಂಸ್ಥೆಯ ವಿರುದ್ಧ ದೂರು ನೀಡಲಾಗಿದ್ದು ಕೃಷಿ ಇಲಾಖೆ ಜಿಲ್ಲಾ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ.ಅಶೋಕ್ ಸಹಾಯಕ ಕೃಷಿ ನಿರ್ದೇಶಕ
ಕೃಷಿ ಯಂತ್ರಧಾರೆಯಡಿ ಉಪಕರಣ ಬಾಡಿಗೆಗೆ ತಂದು ಕೆಲಸ ಮಾಡಿಕೊಳ್ಳುವುದರಿಂದ ಹಣ ಸಮಯ ಮಾನವ ಶ್ರಮ ಉಳಿತಾಯವಾಗುತ್ತದೆ. ರೈತರಿಗೆ ಇದರಿಂದ ಸಾಕಷ್ಟು ಅನುಕೂಲವಿದೆಎಂ.ಎಚ್.ರವಿಕುಮಾರ್. ಮಲ್ಲಿದೇವಿಹಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.