
ಚಿಕ್ಕಮಗಳೂರು: ‘ಬಿಜೆಪಿಗೂ ನಮ್ಮ ದೇಶದ ಇತಿಹಾಸಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಆ ಪಕ್ಷ ಮತ್ತೊಮ್ಮೆ ಸಾಬೀತು ಮಾಡಿದೆ. ತನ್ನ ತತ್ವ ಸಿದ್ಧಾಂತಗಳಿಂದ ದೇಶವನ್ನು ಒಂದು ಮಾಡಿ ಪ್ರೀತಿ, ಸತ್ಯ ಮತ್ತು ಅಹಿಂಸೆಯಿಂದ ವಿಶ್ವವನ್ನು ಗೆದ್ದ ಮಹಾತ್ಮಗಾಂಧಿ ವಿಶ್ವ ನಾಯಕ’ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಹೇಳಿದರು.
‘ಸತ್ಯ, ಅಹಿಂಸೆ ಪ್ರತಿಪಾದಕ ಮಹಾತ್ಮಗಾಂಧಿಯನ್ನು ವ್ಯಂಗ್ಯವಾಗಿ ಬಿಂಬಿಸಿ ದಿನಪತ್ರಿಕೆಗಳಲ್ಲಿ ಬಿಜೆಪಿಯು ಜಾಹೀರಾತು ನೀಡಿದ್ದು, ಗಾಂಧೀಜಿ ಬಳಸುತ್ತಿದ್ದ ಊರುಗೋಲನ್ನು ಬಿಜೆಪಿ ನಾಯಕರು ಆರ್‌ಎಸ್‌ಎಸ್‌ನವರು ಬಳಸುವ ದೊಣ್ಣೆಯಂತೆ ಬಿಂಬಿಸಿರುವುದು ಬಿಜೆಪಿಯವರ ವಿಕೃತ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ವಿದೇಶದಲ್ಲಿಯೂ ಗಾಂಧಿ ನೆಲಕ್ಕೆ ವಿಶೇಷ ಗೌರವವಿದೆ. ಗಾಂಧಿ ಅಧ್ಯಯನ ಕೇಂದ್ರಗಳಿವೆ. ಆದರೆ, ಇಂಥ ಮಹಾತ್ಮ ಹುಟ್ಟಿದ ನೆಲದಲ್ಲಿ ಈ ರೀತಿಯ ಅವಮಾನವನ್ನು ಯಾರೂ ಸಹಿಸುವುದಿಲ್ಲ. ಅಹಿಂಸಾ ಪರಮೋ ಧರ್ಮ ಎಂದು ಸಾರಿದ ಮಹಾತ್ಮಗಾಂಧಿ ಅವರ ಕೈಗೆ ಕೋಲನ್ನು ಕೊಟ್ಟು ಹಿಂಸೆ ಮಾಡಿಸುತ್ತಿರುವ ಬಿಜೆಪಿಯವರು ನೀಡಿರುವ ಜಾಹೀರಾತನ್ನು ನೋಡಿ ರಾಜ್ಯದ ಜನರಿಗೆ ನೋವಾಗಿದೆ’ ಎಂದು ಹೇಳಿದರು.
‘ದೇಶದ ನಿರುದ್ಯೋಗ ಮತ್ತು ಆಹಾರ ಸಮಸ್ಯೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಗ್ರಾಮೀಣ ಭಾಗದ ಜನರು ಗುಳೇ ಹೋಗುವುದನ್ನು ತಪ್ಪಿಸಿ ಉದ್ಯೋಗ ಖಾತ್ರಿಯನ್ನು ನೀಡುವ ಜೊತೆಗೆ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡಿದ ಕೀರ್ತಿ ಮನರೇಗಾ ಯೋಜನೆಗೆ ಸಲ್ಲುತ್ತದೆ. ಕೋಟ್ಯಂತರ ಫಲಾನುಭವಿಗಳನ್ನು ಹೊಂದಿರುವ ಇಂಥ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ದೊಡ್ಡ ದೊಡ್ಡ ಉದ್ಯೋಗಪತಿಗಳ ಕೈಗೊಂಬೆಯಾಗಿ ದುರ್ಬಲಗೊಳಿಸಿರುವುದು ಖಂಡನೀಯ’ ಎಂದರು.
‘ಕೋವಿಡ್‌ನಂಥ ಕಷ್ಟ ಕಾಲದಲ್ಲೂ 4.6 ಕೋಟಿ ಗ್ರಾಮೀಣ ಜನರ ಕೈ ಹಿಡಿದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ-ಜಿ ಗ್ರಾಮ್ ಜಿ ಹೆಸರಿನ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಲು ಅವಕಾಶ ನೀಡದಿರುವುದು ಸಂಸತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನವಾಗಿದೆ’ ಎಂದರು.
‘ಪ್ರಧಾನಿ ಮೋದಿ ಹಾಗೂ ರಾಜನಾಥ್ ಸಿಂಗ್ ಭಾರತ ಮತ್ತು ಚೀನಾ ಯುದ್ಧದ ಸಂದರ್ಭದಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದನ್ನು ಜನರಲ್ ಮನೋಜ್ ಮುಕುಂದ್ ನರವಣೆ ಅವರ ಅಪ್ರಕಟಿತ ಕೃತಿಯಲ್ಲಿ ಬರೆದಿರುವುದು ಹಾಗೂ ಮೋದಿ ಅವರ ವಿಷಯ ಜೆಫ್ರಿ ಎಪ್ಸ್ಟಿನ್ ಅವರ ದಾಖಲೆಗಳಲ್ಲಿ ದಾಖಲಾಗಿರುವುದು, ಅಂಬಾನಿ ಮತ್ತು ನರೇಂದ್ರ ಮೋದಿ ಹೆಸರು ತಳಕು ಹಾಕಿಕೊಂಡಿರುವುದರ ಬಗ್ಗೆ ರಾಹುಲ್‌ಗಾಂಧಿಯ ಪ್ರಶ್ನೆಗೆ ಹೆದರಿ ಸಂಸತ್ತಿನಲ್ಲಿ ಮಾತನಾಡಬೇಕಿದ್ದ ಪ್ರಧಾನಿ ಪಲಾಯನ ಮಾಡಿರುವುದು ಅವರ ಪುಕ್ಕಲುತನಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ನಗರಾಧ್ಯಕ್ಷ ಪಿ. ತನೋಜ್ ಕುಮಾರ್ ನಾಯ್ಡು, ಜಿಲ್ಲಾ ಘಟಕದ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.