ADVERTISEMENT

ಮೈಲಾರಲಿಂಗಸ್ವಾಮಿ ಕಾರಣಿಕ ಮಹೋತ್ಸವ

ವಿಜಯದಶಮಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:07 IST
Last Updated 17 ಅಕ್ಟೋಬರ್ 2021, 4:07 IST
ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ ಶನಿವಾರ ನಸುಕಿನ ಜಾವ ನಡೆದ ಮೈಲಾರಲಿಂಗಸ್ವಾಮಿಯವರ ಕಾರಣಿಕ ಮಹೋತ್ಸವದಲ್ಲಿ ಅರ್ಚಕ ದಶರಥ ಪೂಜಾರ್ ದೊಡ್ಡಬಿಲ್ಲಪ್ಪನನ್ನು ಏರಿ ಕಾರಣಿಕ ನುಡಿ ಆಡಿದರು.
ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ ಶನಿವಾರ ನಸುಕಿನ ಜಾವ ನಡೆದ ಮೈಲಾರಲಿಂಗಸ್ವಾಮಿಯವರ ಕಾರಣಿಕ ಮಹೋತ್ಸವದಲ್ಲಿ ಅರ್ಚಕ ದಶರಥ ಪೂಜಾರ್ ದೊಡ್ಡಬಿಲ್ಲಪ್ಪನನ್ನು ಏರಿ ಕಾರಣಿಕ ನುಡಿ ಆಡಿದರು.   

ಬೀರೂರು: ವಿಜಯದಶಮಿಯ ಆಚರಣೆಯನ್ನು ಶುಕ್ರವಾರ ಪಟ್ಟಣದಾದ್ಯಂತ ಸಂಭ್ರಮಗಳಿಂದ ಆಚರಿಸಲಾಯಿತು. ಶನಿವಾರ ನಸುಕಿನ ಜಾವದ ವರೆಗೆ ಮೈಲಾರಲಿಂಗಸ್ವಾಮಿಯ ಕಾರಣಿಕ ಮಹೋತ್ಸವ ನಡೆಯಿತು.

ಪಟ್ಟಣದ ಎಲ್ಲ ದೇವಾಲಯಗಳು, ಮನೆಗಳಲ್ಲಿ ವಿಶೇಷ ಪೂಜೆ, ಆರಾಧನೆಗಳು ನಡೆದವು. ಭಕ್ತರು ದೇವಾಲಯಗಳಿಗೆ ತೆರಳಿ ದಶಮಿ ಅಂಗವಾಗಿ ಬನ್ನಿಪತ್ರೆ ಸಮರ್ಪಿಸಿ ನಮಿಸಿದರೆ, ಕಿರಿಯರು ಹಿರಿಯರಿಗೆ ಪತ್ರೆ ನೀಡಿ ಆಶೀರ್ವಾದ ಕೋರಿದರು.

ಸರಸ್ವತಿಪುರಂ ಬಡಾವಣೆಯ ಮೈಲಾರ ಲಿಂಗಸ್ವಾಮಿಯವರ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ಮೂಲವಿಗ್ರಹ ಮತ್ತು ಉತ್ಸವ ಮೂರ್ತಿಗಳಿಗೆ ಅಭಿಷೇಕ, ಅಲಂಕಾರ ಸಲ್ಲಿಸಿ, ವೀರಭದ್ರಸ್ವಾಮಿಯ ಗುರಿಕಾರ ಮಹಾನವಮಿ ಬಯಲಿನಲ್ಲಿ ನೆರವೇರಿ ಸುವ, ಅಂಬು ಹೊಡೆಯುವ ಬಾಳೆಯ ಗಿಡವನ್ನು ತೋಟಕ್ಕೆ ತೆರಳಿ ಪೂಜಿಸಿ ಮೆರವಣಿಗೆಯಲ್ಲಿ ತರಲಾಯಿತು.

ADVERTISEMENT

ನಂತರ ಮಹಾನವಮಿ ಬಯಲಿನಲ್ಲಿ ಗಿಡವನ್ನು ಪ್ರತಿಷ್ಠಾಪಿಸಲಾಯಿತು. ರಾತ್ರಿ 10 ಗಂಟೆ ವೇಳೆಗೆ ದೇವಾಲಯದಿಂದ ಪಾದದ ಕೆರೆಗೆ ಗೊರವಯ್ಯಗಳ ಡಮರು ಮತ್ತು ಗಂಟೆಯ ನಾದದ ನಡುವೆ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ತೆರಳಲಾಯಿತು. ಮೈಲಾರಲಿಂಗ ಸ್ವಾಮಿಯು ಗಾಳಿಹಳ್ಳಿ ಸಮೀಪದ ಮೂಲಸ್ಥಾನದ ಪಾದಕ್ಕೆ ಬೆಣ್ಣೆಸೇವೆ, ದೋಣಿ ಸೇವೆ ಸಲ್ಲಿಸಿ, ಬನ್ನಿಪತ್ರೆ ಮುಡಿದು ಭಕ್ತರ ಜಯಘೋಷಗಳ ನಡುವೆ ಶನಿವಾರ ನಸುಕಿನ ಜಾವ ಹಳೇಪೇಟೆ ಹೊರವಲಯದ ಮಹಾನವಮಿ ಬಯಲನ್ನು ತಲುಪಿತು.

ಈ ವೇಳೆಗಾಗಲೇ ರಾಜಬೀದಿ ಮೆರವಣಿಗೆ ಮೂಲಕ ಮಹಾನವಮಿ ಬಯಲು ಸೇರಿದ್ದ ವೀರಭದ್ರಸ್ವಾಮಿ, ಹಿರಿಯಂಗಳ ವೀರಭದ್ರಸ್ವಾಮಿ ಮತ್ತು ಬೀರದೇವರನ್ನು ಪ್ರದಕ್ಷಿಣೆ ಮಾಡಿದ ಮೈಲಾರಲಿಂಗಸ್ವಾಮಿಯು ದಿಬ್ಬದ ಬಳಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಭಕ್ತರು ದೊಡ್ಡಬಿಲ್ಲಪ್ಪನನ್ನು ನಿಲ್ಲಿಸಿದ ಬಳಿಕ ಅರ್ಚಕ ದಶರಥ ಪೂಜಾರ್ ಬೆಣ್ಣೆಮೆತ್ತಿದ್ದ ಬಿಲ್ಲಪ್ಪನನ್ನು ಏರಿ ಗಂಟೆಯ ಸದ್ದು ಮಾಡುತ್ತಿದ್ದಂತೆ ಬಯಲಿನಲ್ಲಿ ಸೇರಿದ್ದ ಸಾವಿರಾರು ಭಕ್ತಗಣ ನೀರವ ಮೌನಕ್ಕೆ ಜಾರಿತು. ಬಳಿಕ ಅರ್ಚಕ ವಿಜೇತ ನೀಡಿದ ಬಾಣವನ್ನು ತೂಗಿ ಕಾರಣಿಕ ನುಡಿಯಲು ದಶರಥ ಸಿದ್ಧರಾದರು.

‘ಇಟ್ಟ ರಾಮನ ಬಾಣಕ್ಕೆ ಹುಸಿ ಇಲ್ಲ, ಸಿಂಹಾಸನಕ್ಕೆ ಗಿಳಿಗಳು ಕುಟುಕಿದವು, ದಾನವರು ಮಾನವರಿಗೆ ಕಂಟಕವಾದರು, ರಾಮರಾಜ್ಯಕ್ಕೆ ಸರ್ವರೂ ಒಡು ಒಡೆದರು, ಸರ್ವರೂ ಎಚ್ಚರದಿಂದಿರಬೇಕು’ ಎಂದು ಕೂಗಿ ದೊಡ್ಡಬಿಲ್ಲಪ್ಪನಿಂದ ಜಾರಿದ ಬಳಿಕ ಗೊರವರ ಗಂಟೆ, ಡಮರುಗದ ಸದ್ದು, ಭಕ್ತರ ಹರ್ಷೋದ್ಗಾರ ಮೈದಾನವನ್ನು ತುಂಬಿತು. ನಂತರ ಸಿಡಿಮದ್ದಿನ ಪ್ರದರ್ಶನ ನಡೆದು, ವೀರಭದ್ರಸ್ವಾಮಿಯವರ ಗುರಿಕಾರ ಅಂಬನ್ನು ಹೊಡೆದರು.

ಇದೇ ಸಂದರ್ಭದಲ್ಲಿ ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಪುರಸಭೆ ವತಿಯಿಂದ ಸ್ಥಾಪಿಸಿದ್ದ ಸಿದ್ಧಿದಾತ್ರಿ ದೇವಿಯ ರಾಜಬೀದಿ ಮೆರವಣಿಗೆ ಶನಿವಾರ ಮಧ್ಯಾಹ್ನ ಬಾಕಿನ ಕೆರೆಯಲ್ಲಿ ವಿಸರ್ಜನೆ ನಡೆಸಲಾಯಿತು.

‘ಕಾಶ್ಮೀರದಲ್ಲಿ ಉಗ್ರರ ಉಪಟಳ’

ಈ ಕಾರಣಿಕದ ನುಡಿಗಳನ್ನು ರಾಜಕೀಯವಾಗಿ ವಿಶ್ಲೇಷಿಸಿ, ‘ಕೇಂದ್ರ ಸರ್ಕಾರಕ್ಕೆ ಕಾಶ್ಮೀರದಲ್ಲಿ ಉಗ್ರರ ಉಪಟಳ, ಲಾಭದ ಆಸೆಗೆ ಬಡಜನರ ಮೇಲೆ ದೌರ್ಜನ್ಯ, ಮತ, ಧರ್ಮಗಳ ವಿಭಜನೆ ಪರಿಣಾಮಗಳು ಬೀರಬಹುದು’ ಎಂದು ಹಲವರು ಅರ್ಥೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.