ADVERTISEMENT

ಆಲ್ದೂರು: ಫೆ.2ರಂದು ಕೆಂಪೇಗೌಡ ಕಂಚಿನ ಪ್ರತಿಮೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 4:17 IST
Last Updated 23 ಜನವರಿ 2026, 4:17 IST
ಆಲ್ದೂರು ಕೆಂಪೇಗೌಡ ವೃತ್ತದಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿರುವ ಕೆಂಪೇಗೌಡರ ಕಂಚಿನ ‍ಪ್ರತಿಮೆ
ಆಲ್ದೂರು ಕೆಂಪೇಗೌಡ ವೃತ್ತದಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿರುವ ಕೆಂಪೇಗೌಡರ ಕಂಚಿನ ‍ಪ್ರತಿಮೆ   

ಆಲ್ದೂರು: ಪಟ್ಟಣದ ಹೃದಯ ಭಾಗವಾದ ಕೆಂಪೇಗೌಡ ವೃತ್ತದಲ್ಲಿ ನಿರ್ಮಿಸಲಾಗಿರುವ ಕೆಂಪೇಗೌಡ ಕಂಚಿನ ಪ್ರತಿಮೆ ಲೋಕಾರ್ಪಣೆ ಫೆಬ್ರುವರಿ 2ರಂದು ನಡೆಯಲಿದೆ ಎಂದು ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿ.ಬಿ ತಿಳಿಸಿದರು.

ಅಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣಾನಾಥ ಸ್ವಾಮೀಜಿ ಅವರನ್ನು ಆಲ್ದೂರು ಕೆಳ ಬಸ್ ನಿಲ್ದಾಣದಿಂದ ಬೆಳ್ಳಿ ರಥದಲ್ಲಿ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಸಮುದಾಯದ ಮುಖಂಡರಾದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ವಿರೋಧ ಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್‌.ಭೋಜೇಗೌಡ, ಶಾಸಕರಾದ ನಯನಾ ಮೋಟಮ್ಮ, ಟಿ.ಡಿ.ರಾಜೇಗೌಡ, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಭಾಗವಹಿಸಲಿದ್ದಾರೆ. ಪುತ್ಥಳಿ ಅನಾವರಣ ಬಳಿಕ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದ್ದು, 5 ಸಾವಿರ ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6 ಗಂಟೆಗೆ ಹಿನ್ನೆಲೆ ಗಾಯಕಿ ಶಮಿಕಾ ಮಲ್ನಾಡ್ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪುತ್ಥಳಿ ನಿರ್ಮಾಣ ಮಾಹಿತಿ:

ADVERTISEMENT

ಬೆಂಗಳೂರಿನ ಬಿಡದಿಯ ವಿ6 ಆರ್ಟ್ ಅಂಡ್ ಸ್ಕಲ್ಪ್‌ಚರ್‌ ಕಂಪನಿ ಶಿಲ್ಪಿ ವಿಜಯ ಜಿ ಅವರು ಕೆಂಪೇಗೌಡ ಕಂಚಿನ ಪುತ್ಥಳಿಯನ್ನು ಮೂರು ತಿಂಗಳ ಅವಧಿಯಲ್ಲಿ ನಿರ್ಮಿಸಿದ್ದಾರೆ. ಪುತ್ಥಳಿಯು ಒಟ್ಟು 2,400 ಕೆ.ಜಿ ತೂಕ, 12ಅಡಿ ಎತ್ತರ, 6 ಅಡಿ ಅಗಲ, 16 ಅಡಿ ಉದ್ದವಿದ್ದು, ಅಂದಾಜು ಮೊತ್ತ ₹24 ಲಕ್ಷ ವೆಚ್ಚವಾಗಿದೆ ಎಂದು ತಿಳಿಸಿದರು. 

ಪ್ರಸ್ತುತ ಕೆಂಪೇಗೌಡ ವೃತ್ತವು ಮೊದಲಿಗೆ ಜೆಸಿಐ ವೃತ್ತವಾಗಿತ್ತು. ಬಳಿಕ ಜೆಸಿಐ ಪದಾಧಿಕಾರಿಗಳು ಮುಖಂಡರೊಂದಿಗೆ ಚರ್ಚೆ ಮಾಡಿ 2016ರಲ್ಲಿ ಆಲ್ದೂರು ಗ್ರಾಮ ಪಂಚಾಯಿತಿಯಲ್ಲಿ ಕೆಂಪೇಗೌಡ ವೃತ್ತವೆಂದು ಅಧಿಕೃತ ನಾಮಕರಣ ಮಾಡಲಾಯಿತು. ಬಳಿಕ ಒಕ್ಕಲಿಗ ಸಂಘವನ್ನು ಆರಂಭಿಸಿ ಕೆಂಪೇಗೌಡ ವೃತ್ತದಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಕುರಿತು ಯೋಜನೆ ರೂಪಿಸಲಾಯಿತು. ಪುತ್ಥಳಿ ನಿರ್ಮಾಣಕ್ಕೆ ಒಕ್ಕಲಿಗ ಸಮುದಾಯದ ಜನರಿಂದ ಮಾತ್ರ ದೇಣಿಗೆ ಸಂಗ್ರಹಿಸಿದ್ದು, ಕಾರ್ಯಕ್ರಮದ ಆಯೋಜನೆಗೆ ಸಮುದಾಯದ ಮುಖಂಡರ, ಯುವಕರ ಪಾತ್ರ ಬಹಳಷ್ಟಿದೆ. ಸಂಘದ ವತಿಯಿಂದ ಮುಂಬರುವ ದಿನಗಳಲ್ಲಿ ಸಾರ್ವಜನಿಕ ಅಂಬುಲೆನ್ಸ್ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಹಿಂದುಳಿದ ಒಕ್ಕಲಿಗ ಸಮುದಾಯದ ಜನರ ಸಬಲೀಕರಣಕ್ಕಾಗಿ ಯೋಜನೆ ರೂಪಿಸುವ ಚಿಂತನೆಯಿದೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.