
ಆಲ್ದೂರು: ಪಟ್ಟಣದ ಸಂತೆ ಮೈದಾನ ವಾರ್ಡಿನ ಪದವಿಪೂರ್ವ ಕಾಲೇಜು ಮಾರ್ಗದ ರಸ್ತೆ ಬದಿಯಲ್ಲಿ ಮಂಗಳವಾರ ಜಲಜೀವನ್ ಮಿಷನ್ ಯೋಜನೆಯ ಬೋರ್‌ವೆಲ್ ಕೊರೆಸಲು ಮುಂದಾದ ಗುತ್ತಿಗೆದಾರನಿಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ರವಿಚಂದ್ರ ಸಿ ಮಾತನಾಡಿ, ಬಿ.ಎಚ್ ರಸ್ತೆ ವಾರ್ಡಿನ ಜೆಜೆಎಂ ಬೋರ್‌ವೆಲ್ ಅನ್ನು ಸಂತೆ ಮೈದಾನ ವಾರ್ಡಿನಲ್ಲಿ ಕೊರೆಸುವುದು ಸರಿ ಇಲ್ಲ. ಆಯಾ ವಾರ್ಡಿನಲ್ಲಿ ಬೋರ್‌ವೆಲ್ ಪಾಯಿಂಟ್ ನಿಗದಿಪಡಿಸಿ ಕೊರೆಸಬೇಕು ಎಂದು ತಿಳಿಸಿದರು.
ಗ್ರಾಮಸ್ಥರಾದ ಎ.ಯು.ಇಬ್ರಾಹಿಂ, ಸಂತೆ ಮೈದಾನ ಪೂರ್ತಿ ವಾರ್ಡಿಗೆ ನೀರನ್ನು ಒದಗಿಸುವ ಬೋರ್ ಪಾಯಿಂಟ್ ಸಮೀಪದಲ್ಲಿ 100 ಮೀಟರ್ ಅಂತರ ಕೂಡ ಇಲ್ಲ. ಇಲ್ಲಿ ಬೇರೆ ವಾರ್ಡಿನ ಬೋರ್‌ವೆಲ್ ಪಾಯಿಂಟ್ ಕೊರೆಸಿದರೆ ಈಗಾಗಲೇ ಬೇಸಿಗೆ ಆಗಿರುವುದರಿಂದ ಇಲ್ಲಿನ ವಾರ್ಡಿನ ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ ಎಂದು ಅಸಮಾಧಾನ ಹೊರ ಹಾಕಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಜೆಜೆಎಂ ಕಿರಿಯ ಸಹಾಯಕ ಎಂಜಿನಿಯರ್ ಪವನ್, ಒಟ್ಟು ಎರಡು ನೀರಿನ ಬೋರ್ ಪಾಯಿಂಟ್ ಗುರುತಿಸಲಾಗಿತ್ತು. ಸಂತೆ ಮೈದಾನ ವಾರ್ಡಿನ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಕೂಡಲೇ ಬಿ.ಎಚ್. ರಸ್ತೆ ಮಾರ್ಗದ ಇನ್ನೊಂದು ಪಾಯಿಂಟ್‌ನಲ್ಲಿ ಬೋರ್‌ವೆಲ್ ಕೊರೆಸುವ ಕಾಮಗಾರಿ ಮುಂದುವರಿಸಲಾಗಿದೆ ಎಂದರು.
ಗ್ರಾಮಸ್ಥರಾದ ಮೋಹನ್, ಕೃಷ್ಣಕುಮಾರ್, ಜೀವನ್, ಭರತ್, ಏಜಾಜ್ ಅಹಮದ್, ಶಫಿವುಲ್ಲಾ, ಕೃಪಾಕ್ಷ ಕೋಟ್ಯಾನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.