ADVERTISEMENT

ಗ್ಯಾರಂಟಿ ಯೋಜನೆ ಜತೆಗೆ ಅಭಿವೃದ್ಧಿಗೂ ಆದ್ಯತೆ: ಶಾಸಕ ರಾಜೇಗೌಡ

ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಶಾಸಕ ರಾಜೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:34 IST
Last Updated 25 ಫೆಬ್ರುವರಿ 2026, 7:34 IST
ಕೊಪ್ಪದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು
ಕೊಪ್ಪದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು   

ಕೊಪ್ಪ: ‘ಗ್ಯಾರಂಟಿ ಯೋಜನೆಗಳ ಜತೆಗೆ ರಾಜ್ಯ ಸರ್ಕಾರ ಅಭಿವೃದ್ಧಿ ಕೂಡ ಮಾಡುತ್ತಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪಟ್ಟಣದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಸಬಾ ಹೋಬಳಿ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

'ಗ್ಯಾರಂಟಿ ಯೋಜನೆಗಳಲ್ಲಿ ನ್ಯೂನ್ಯತೆ ಇದ್ದಲ್ಲಿ ಅವುಗಳ ಬಗ್ಗೆ ಚರ್ಚೆ ಆಗಲಿ ಅಂತ ಉದ್ದೇಶದಿಂದ ಈ ಗ್ಯಾರಂಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದರು.

‘ಮಹಿಳೆಯರ ಪರವಾಗಿ ಸರ್ಕಾರ ವಿಶೇಷ ಯೋಜನೆಗಳ ಮೂಲಕ ಮಹಿಳೆಯರಿಗೆ ಶಕ್ತಿ ನೀಡಿದೆ. ಬೇರೆ ಸರ್ಕಾರಗಳು ಬಡವರ ತಲೆ ಹೊಡೆದು ಶ್ರೀಮಂತರ ಪರ ಕೆಲಸ ಮಾಡಿವೆ. ಕಾಂಗ್ರೆಸ್ ಸರ್ಕಾರ ಬಡವರ ಪರ’ ಎಂದು ತಿಳಿಸಿದರು.

ADVERTISEMENT

'ನಿನ್ನೆ ಈ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಇತ್ತು. ಅವರ ಸರ್ಕಾರ ಇದ್ದಾಗ ಆನೆಗಳನ್ನು ಹಿಡಿಸಿ ಸ್ಥಳಾಂತರ ಮಾಡುವ ಕೆಲಸ ಮಾಡಿಲ್ಲ. ನಾನು ಪ್ರಾಣ ಹಾನಿ ಮಾಡಿದ ಆನೆಗಳನ್ನು ಸ್ಥಳಾಂತರ ಮಾಡಿಸಿದ್ದೇನೆ’ ಎಂದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, 'ಇದು ಗ್ಯಾರಂಟಿ ಸರ್ಕಾರ ಆಗಿದೆ. ಹಾಗಾಗಿ ಯೋಜನೆಗಳನ್ನು ಜಾರಿಗೆ ತಂದಿದೆ. ಚುನಾವಣೆ ಮುಂಚೆ ಈ ಗ್ಯಾರಂಟಿ ಯೋಜನೆ ಜಾರಿ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಇದು ಮೋಸ ಎಂದು ಹೇಳುತ್ತಿದ್ದಾರೆ. ಆದರೆ ಈಗ ಎಲ್ಲಾ ಜಾರಿಗೆ ಬಂದಿದೆ' ಎಂದರು.

'ಈಗ ಚಿನ್ನ, ಬೆಳ್ಳಿ ಬೆಲೆಗಳು ಗಗನಕ್ಕೇರಿವೆ. ಕೇಂದ್ರ ಸರ್ಕಾರ ಬೆಲೆ ನಿಯಂತ್ರಣ ಮಾಡುತ್ತಿಲ್ಲ. ನಮ್ಮ ರಾಜ್ಯ ಸರ್ಕಾರ ಜನಪರವಾಗಿದೆ. ಹೆಣ್ಣು ಮಕ್ಕಳ ಪರವಾಗಿ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ' ಎಂದು ಹೇಳಿದರು.

ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ, 'ಶೀಘ್ರದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಸಮಾವೇಶ ಆಯೋಜಿಸಲಾಗುತ್ತದೆ. ವಿರೋಧ ಪಕ್ಷದವರ ವಿರೋಧ, ಟೀಕೆ ನಡುವೆ ಗ್ಯಾರಂಟಿ ಅನುಷ್ಠಾನ ಯಶಸ್ವಿಯಾಗಿ ನಡೆಯುತ್ತಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಕುರಿಯಾಕೋಸ್, ಗ್ಯಾರಂಟಿ ಸಮಿತಿ ಸದಸ್ಯರಾದ ನಾಗೇಂದ್ರ ಪ್ರಸಾದ್, ವಿಜಯಾನಂದ, ನರೇಂದ್ರ ಶೆಟ್ಟಿ, ಪ್ರವೀಣ್, ಶೋಭಾ, ಪೂರ್ಣಿಮಾ, ರಾಘವೇಂದ್ರ, ಆರ್ದಶ್, ವಿಜಯ್ ಕುಮಾರ್, ಆಬ್ದುಲ್ ಖಾದರ್, ಭೂ ಮಂಜೂರಾತಿ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್ ಮತ್ತಿತರರು ಹಾಜರಿದ್ದರು.

ಕ್ಷೇತ್ರದಲ್ಲಿ ಕಾಡುತ್ತಿರುವ ಒತ್ತುವರಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ. 20 ಗ್ರಾಮದ ಜಂಟಿ ಸರ್ವೆ ಕಾರ್ಯ ಮುಗಿದಿದೆ. ವರದಿ ಬಳಿಕ ಹಕ್ಕುಪತ್ರ ನೀಡಲಾಗುತ್ತದೆ
ಟಿ.ಡಿ.ರಾಜೇಗೌಡ ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.