ADVERTISEMENT

ಚಿಕ್ಕಮಗಳೂರು: ತ್ಯಾಜ್ಯ ಗುಂಡಿಯಾದ ಅಂಬಳೆ ಕೆರೆ

ಅಂಬಳೆ ಕೈಗಾರಿಕಾ ಪ್ರದೇಶದಿಂದ ಹರಿಯುವ ರಾಸಾಯನಿಕ ನೀರು: ಕುಲುಷಿತಗೊಂಡ ಕೆರೆಗಳು

ವಿಜಯಕುಮಾರ್ ಎಸ್.ಕೆ.
Published 28 ನವೆಂಬರ್ 2025, 6:01 IST
Last Updated 28 ನವೆಂಬರ್ 2025, 6:01 IST
ಕಲುಷಿತ ನೀರಿನ ನಡುವೆ ಜೊಂಡು ಬೆಳೆದಿರುವ ಅಂಬಳೆ ಕೆರೆ
ಕಲುಷಿತ ನೀರಿನ ನಡುವೆ ಜೊಂಡು ಬೆಳೆದಿರುವ ಅಂಬಳೆ ಕೆರೆ   

ಚಿಕ್ಕಮಗಳೂರು: ಅಂಬಳೆ ಕೈಗಾರಿಕ ಪ್ರದೇಶದ ರಾಸಾಯನಿಕ ನೀರು ನೇರವಾಗಿ ನಾಲೆ ಮತ್ತು ಕೆರೆಗಳಿಗೆ ಸೇರುತ್ತಿದ್ದು, ಸುತ್ತಮುತ್ತಲ ಹಳ್ಳಿಗಳ ಜನ ತೊಂದರೆ ಅನುಭವಿಸುತ್ತಿದ್ದಾರೆ.

40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕೈಗಾರಿಕಾ ಪ್ರದೇಶಕ್ಕೆ ಅಂಬಳೆ ಕೈಗಾರಿಕಾ ಪ್ರದೇಶ ಎಂದೇ ಹೆಸರಿಡಲಾಗಿದೆ. ಜಿಲ್ಲೆಯ ಮೊದಲ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಯೂ ಇದೆ. ಆದರೆ, ಈ ಕೈಗಾರಿಕಾ ಪ್ರದೇಶ ಅಂಬಳೆ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನುಕೂಲಕ್ಕಿಂತ ಅನಾನುಕೂಲ ತಂದೊಡ್ಡಿದೆ.

ಕೈಗಾರಿಕಾ ಪ್ರದೇಶದ ನೀರು ನಾಲೆಗಳ ಮೂಲಕ ಗೌಡಗೆರೆ ಮತ್ತು ಅಂಬಳೆ ಕೆರೆ ಸೇರುತ್ತಿದೆ. ಎರಡೂ ಕೆರೆ ನಂಬಿರುವ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಾನುವಾರು ಕುಡಿಯಲು ಮಾತ್ರವಲ್ಲ, ಕೃಷಿ ಬಳಕೆಗೂ ನೀರು ಯೋಗ್ಯವಿಲ್ಲದಂತಾಗಿದೆ. 

ADVERTISEMENT

‘ಎರಡೂ ಕೆರೆಗಳಲ್ಲಿ ಜೊಂಡು ಬೆಳೆದು ಕೆರೆಯೇ ಕಾಣಿಸದಂತಾಗಿವೆ. ಕೆರೆಗಳಲ್ಲಿ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಸಂಪೂರ್ಣ ಬೆರೆತು ಹೋಗಿದೆ. ಕೆರೆಯ ನೀರು ಈಗ ದುರ್ವಾಸನೆಯಿಂದ ಕೂಡಿದ್ದು, ಕೆರೆ ಮತ್ತು ಇದಕ್ಕೆ ಹೊಂದಿಕೊಂಡಿರುವ ನಾಲೆಗಳ ನೀರನ್ನು ಹೊಲಕ್ಕೆ ಹರಿಸಿ ಕೆಲಸ ಮಾಡಿದರೆ ಕಾಲುಗಳಲ್ಲಿ ತುರಿಕೆಯಾಗುತ್ತಿವೆ’ ಎಂದು ಅಂಬಳೆ ಗ್ರಾಮದ ರೈತ ಮಹೇಶ್ ಹೇಳುತ್ತಾರೆ.

‘ಮೊದಲಿಗೆ ಕೆರೆಗಳ ನೀರು ಕುಡಿಯಲು ಯೋಗ್ಯವಾಗಿದ್ದವು. ಈಗ ಈ ನೀರು ಕುಡಿದರೆ ಅಂದೇ ಸಾವು ಖಚಿತ. ಕೈಗಾರಿಕಾ ಪ್ರದೇಶವನ್ನು ನಿರ್ಮಿಸಿ ಅಂಬಳೆ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರ ಬದುಕನ್ನೇ ಸರ್ಕಾರ ಕಸಿದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ ಸೇರಿ ಎಲ್ಲರಿಗೂ ಮನವಿ ಪತ್ರ ಸಲ್ಲಿಸಿ ಸಾಕಾಗಿದ್ದೇವೆ. ಕೈಗಾರಿಕೆಗಳನ್ನು ಕೇಳಿದರೆ ನಮ್ಮಿಂದ ತ್ಯಾಜ್ಯ ನೀರು ಹೋಗುತ್ತಿಲ್ಲ ಎನ್ನುತ್ತಾರೆ. ಗ್ರಾಮ ಪಂಚಾಯಿತಿಯವರು ಸಮಸ್ಯೆ ಸರಿಪಡಿಸಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ, ಹಲವು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದು, ಈಗ ಅತ್ಯಂತ ದುರಾವಸ್ತೆಗೆ ಕೆರೆಗಳು ತಲುಪಿವೆ’ ಎಂದು ಹೇಳಿದರು.

ಭತ್ತ ಬೆಳೆಯುವುದನ್ನೇ ನಿಲ್ಲಿಸಿದ ರೈತರು ಮೊದಲಿಗೆ ಈ ಕೆರೆಗಳನ್ನು ನಂಬಿ ಭತ್ತ ಬೆಳೆಯುತ್ತಿದ್ದ ರೈತರು ತ್ಯಾಜ್ಯ ನೀರಿನಿಂದ ಬೇಸತ್ತು ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ‘ಹಿಂದೆ ಭತ್ತ ಬೆಳೆಯುತ್ತಿದ್ದ ಗದ್ದೆಗಳನ್ನು ಈಗ ಪಾಳುಬಿಟ್ಟಿದ್ದೇವೆ. ಈ ನೀರು ಬಳಸಿ ಭತ್ತ ಬೆಳೆದರೆ ಫಸಲು ಕೈಸೇರುತ್ತಿಲ್ಲ. ಭತ್ತದ ಸಸಿ ದೊಡ್ಡದಾಗಿ ಬೆಳೆಯುತ್ತದೆ. ಆದರೆ ತೆನೆಯಲ್ಲಿ ಕಾಳುಗಟ್ಟದೆ ಜೊಳ್ಳಾಗಿಯೇ ಉಳಿಯುತ್ತವೆ’ ಎಂದು ರೈತರು ಹೇಳಿದರು. ‘ಇದರಿಂದ ಭತ್ತ ಬೆಳೆಯುವುದನ್ನು ನಿಲ್ಲಿಸಿದ್ದೇವೆ. ಎರಡು ಕೆರೆಗಳು ಯಾವ ಉಪಯೋಗಕ್ಕೂ ಬರದಾಗಿವೆ. ಸಮಸ್ಯೆ ಯಾರಿಗೆ ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ರೈತರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.