ADVERTISEMENT

ನಕ್ಸಲ್ ನಾಡಿನಲ್ಲಿ ANF ಇಲ್ಲದೆ ನಿರಾಳ: ಆರಂಭ– ಅಂತ್ಯಕ್ಕೆ ಸಾಕ್ಷಿಯಾದ ಹಾಗಲಗಂಚಿ

ವಿಜಯಕುಮಾರ್ ಎಸ್.ಕೆ.
Published 19 ಫೆಬ್ರುವರಿ 2025, 0:22 IST
Last Updated 19 ಫೆಬ್ರುವರಿ 2025, 0:22 IST
ಶೃಂಗೇರಿ ತಾಲ್ಲೂಕಿನ ಹಾಗಲಗಂಚಿ ಗ್ರಾಮದ ಫಲಕ
ಶೃಂಗೇರಿ ತಾಲ್ಲೂಕಿನ ಹಾಗಲಗಂಚಿ ಗ್ರಾಮದ ಫಲಕ   

ಚಿಕ್ಕಮಗಳೂರು: ನಕ್ಸಲ್ ಚಳವಳಿಯ ಕೊನೆಯ ಕೊಂಡಿಗಳು ಮುಖ್ಯವಾಹಿನಿಗೆ ಬಂದ ನಂತರ ಈಗ ನಕ್ಸಲ್ ನಾಡಿನಲ್ಲಿ ಇನ್ನು ಮುಂದೆ ನಕ್ಸಲ್‌ ನಿಗ್ರಹ ಪಡೆ(ಎಎನ್‌ಎಫ್) ಸದ್ದು ಇರುವುದಿಲ್ಲ ಎಂಬ ಸಮಾಧಾನ ಕಾಣಿಸುತ್ತಿದೆ. ನಕ್ಸಲ್ ಚಳವಳಿ ಆರಂಭವಾದ ಸ್ಥಳದಿಂದಲೇ ಅಂತ್ಯವನ್ನೂ ಕಂಡಿದ್ದು, ಈ ಭಾಗದ ಜನರಲ್ಲಿ ಈಗ ನಿರಾಳ ಭಾವ ಮನೆ ಮಾಡಿದೆ.

25 ವರ್ಷಗಳ ಹಿಂದೆ ನಕ್ಸಲ್ ಚಳವಳಿ ಮೊಳಕೆಯ ಮಾತುಗಳು ಆರಂಭವಾಗಿದ್ದು ಶೃಂಗೇರಿ ತಾಲ್ಲೂಕಿನ ಹಾಗಲಗಂಚಿ ಮತ್ತು ಸುತ್ತಮುತ್ತಲ ಕಾಡಂಚಿನ ಜನವಸತಿಗಳಲ್ಲಿ. ಬಂದೂಕು ಹಿಡಿದು ಹೋದವರು ಮತ್ತೆ ಅದೇ ಕಾಡಂಚಿನ ಹಾಗಲಗಂಚಿ ಸುತ್ತಮುತ್ತಲ ಕಾಡಿನಲ್ಲಿ ಕೊನೆಯ ಸಭೆಗಳನ್ನು ನಡೆಸಿ ಹೊರ ಬಂದರು. ಬಂದೂಕು ಬಿಟ್ಟು ಮುಖ್ಯವಾಹಿನಿಗೆ ಬರಬೇಕು ಎಂದು ಬಯಸಿದಾಗ ನಕ್ಸಲರಿಗೂ ನೆನಪಾಗಿದ್ದು ಇದೇ ಹಾಗಲಗಂಚಿ. ಅವರನ್ನು ಮುಖ್ಯವಾಹಿನಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದು ಕೂಡ ಇದೇ ಊರಿನ ಜನ.

ಎರಡೂವರೆ ದಶಕಗಳ ಹಿಂದೆ ಮೀಸಲು ಅರಣ್ಯ ವಿರೋಧಿ ಹೋರಾಟ, ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿದ್ದ ಯುವಕ–ಯುವತಿಯರು ನಿರಾಶರಾಗಿದ್ದರು. ಶೃಂಗೇರಿಯಲ್ಲಿ ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದ ಯುವಕರು ಒಬ್ಬೊಬ್ಬರಾಗಿ ಕಣ್ಮರೆಯಾಗತೊಡಗಿದರು. ಸಾಕೇತ್ ರಾಜನ್ ಅವರಿಂದ ಇತಿಹಾಸದ ಪಾಠಗಳನ್ನು ಕೇಳುತ್ತಿದ್ದವರು ಅವರ ಪ್ರಭಾವಕ್ಕೆ ಒಳಗಾಗಿ ಬಂದೂಕು ಹೆಗಲಿಗೇರಿಸಿ ಕಾಡಿಗೆ ನಡೆದೇ ಬಿಟ್ಟರು. ಬಂದೂಕು ಹಿಡಿಯದೆ ಊರಿನಲ್ಲೇ ಉಳಿದ ಅವರ ಸಮಕಾಲೀನ ಹೋರಾಟಗಾರರು, ಕುಟುಂಬದವರು, ಸಂಬಂಧಿಕರು ನೆಮ್ಮದಿಯನ್ನೇ ಕಳೆದುಕೊಂಡಿದ್ದರು. ನಕ್ಸಲ್ ನಿಗ್ರಹ ಪಡೆಯ(ಎಎನ್‌ಎಫ್) ಸಿಬ್ಬಂದಿ ಆಗಾಗ ಬಂದು ನೀಡುತ್ತಿದ್ದ ಕಿರುಕುಳದಿಂದ ರೋಸಿ ಹೋಗಿದ್ದರು. ನಕ್ಸಲರ ಸಂಪರ್ಕ ಇಲ್ಲದಿದ್ದರೂ ಹಲವರು ಮೊಕದ್ದಮೆಗಳನ್ನು ಎದುರಿಸಿದರು. ಜೈಲಿಗೂ ಹೋಗಿ ಬಂದರು.

ADVERTISEMENT

‘ಮನೆಯಲ್ಲಿ ಮಾಡುವ ಅಡುಗೆ ಸ್ವಲ್ಪ ಜಾಸ್ತಿಯಾದರೂ ಎಎನ್‌ಎಫ್‌ ಅಧಿಕಾರಿಗಳಿಂದ ಪ್ರಶ್ನೆಗಳನ್ನು ಎದುರಿಸಿದ್ದೇವೆ. ನಕ್ಸಲರೊಂದಿಗೆ ಸಂಪರ್ಕ ಇಲ್ಲ ಎಂದರೂ ಎರಡು ಬಾರಿ ಬಂಧನಕ್ಕೆ ಒಳಗಾಗಿದ್ದೇನೆ. ಹಾಗಲಗಂಚಿ ಮಾತ್ರವಲ್ಲ ಸುತ್ತಮುತ್ತಲ ಹಳ್ಳಿಯ ಗಿರಿಜನ ಅಮಾಯಕ ಯುವಕರು ಎಎನ್‌ಎಫ್‌ ಸಿಬ್ಬಂದಿಯಿಂದ ತುಂಬ ತೊಂದರೆ ಅನುಭವಿಸಿದ್ದಾರೆ’ ಎಂದು ಜೋಗಿಬೈಲು ರವಿ ಹೇಳಿದರು.

‘ಸಂಬಂಧಿಕರು ಮನೆಗೆ ಬರುವುದನ್ನು ನಿಲ್ಲಿಸಿದರು. ಅಪರೂಪಕ್ಕೆ ಬರುತ್ತಿದ್ದ ಸ್ನೇಹಿತರು ಕಿರಿಕಿರಿ ಅನುಭವಿಸಿ ಬೇಸತ್ತರು. ಆಪ್ತರೇ ಆಗಿದ್ದ ವೈದ್ಯರು ಮತ್ತೆ ಆಸ್ಪತ್ರೆಗೆ ಬರುವುದು ಬೇಡ, ನೀವು ಬಂದರೆ ಪೊಲೀಸರು ನಮಗೆ ಕಿರಿಕಿರಿ ನೀಡುತ್ತಾರೆ ಎಂದರು... ಹೀಗೆ ಒಂದಷ್ಟು ವರ್ಷ ಅನುಭವಿಸಿದ ತೊಂದರೆಗಳು ಅಷ್ಟಿಷ್ಟಲ್ಲ. ‘ವಾಚಕರ ವಾಣಿ’ಗೆ ಬರೆದಿದ್ದ ಬರಹಗಳನ್ನೂ ಪೊಲೀಸರು ಹೊತ್ತೊಯ್ದರು. ಮಾನವ ಹಕ್ಕು ಆಯೋಗ, ಮಹಿಳಾ ಆಯೋಗ, ಮಾಧ್ಯಮಗಳ ಕಚೇರಿಗೆ ಸುತ್ತಾಡಿ ಜೀವ–ಜೀವನ ಉಳಿಸಿಕೊಂಡೆವು’ ಎಂದು ಹಾಗಲಗಂಚಿಯ ಭಾಗ್ಯ ನೆನಪು ಮಾಡಿಕೊಂಡರು.

‘ಈಗ ಮತ್ತೊಮ್ಮೆ ಕೇರಳದಿಂದ ಹೊರಟ ಏಳು ನಕ್ಸಲರು ಶೃಂಗೇರಿಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಡಿದ ಬಳಿಕವಂತೂ ಊರಿನ ಜನರಲ್ಲಿ ಆತಂಕ ಕಾಡಲಾರಂಭಿಸಿತು. ನಕ್ಸಲರು ಬಂದು ನಮಗೆ ತೊಂದರೆ ಕೊಡುತ್ತಾರೆ ಎಂದಲ್ಲ, ಅವರು ಜನರಿಗೆ ತೊಂದರೆ ನೀಡಿದ ಉದಾಹರಣೆಯೂ ಇಲ್ಲ. ಎಎನ್‌ಎಫ್ ಸಿಬ್ಬಂದಿಯ ಕಿರುಕುಳ ಮತ್ತೆ ಆರಂಭವಾಗಲಿದೆ ಎಂಬ ಭಯ ಕಾಡುತ್ತಿತ್ತು. ಈಗ ಎಲ್ಲರೂ ಕಾಡಿನಿಂದ ಹೊರಗೆ ಬಂದರು ಎಂಬ ಸಂತಸದ ಜತೆಗೆ ಎನ್‌ಎನ್‌ಎಫ್‌ ಸಿಬ್ಬಂದಿಯ ಕಿರುಕುಳ ಇರುವುದಿಲ್ಲ ಎಂಬ ನಿರಾಳತೆಯೂ ಇದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಅಷ್ಟೂ ಜನ ಮುಖ್ಯವಾಹಿನಿಗೆ ಬರುವ ತನಕ ಜೀವ ಬಿಗಿ ಹಿಡಿದು ಮಾತುಕತೆ ನಡೆಸಿದೆವು. ಏಳು ಜನ ಜೀವಂತವಾಗಿ ಬಂದಿದ್ದು ಸಮಾಧಾನ ಇದೆ. ಆಡಳಿತದಲ್ಲಿರುವ ಸರ್ಕಾರ, ಮುಖ್ಯಮಂತ್ರಿ, ಶಾಂತಿಗಾಗಿ ನಾಗರಿಕ ವೇದಿಕೆ, ನಕ್ಸಲ್ ಶರಣಾಗತಿ ಸಮಿತಿ ಎಲ್ಲವೂ ಸಕಾಲದಲ್ಲಿ ಒದಗಿ ಬಂದಂತೆ ಒಂದೇ ಮನಃಸ್ಥಿತಿಯಿಂದ ನಡೆದುಕೊಂಡಿದ್ದರಿಂದ ಇದು ಸಾಧ್ಯವಾಯಿತು’ ಎಂದು ಹಾಗಲಗಂಚಿ ವೆಂಕಟೇಶ್  ಸಮಾಧಾನದ ನಿಟ್ಟುಸಿರು ಬಿಟ್ಟರು.

ನಕ್ಸಲರು ಕಾಡಿನಿಂದ ಹೊರ ಬರುವ ಮುನ್ನ ಕೊನೆಯ ಬಾರಿಗೆ ಶೃಂಗೇರಿ ತಾಲ್ಲೂಕಿನ ಕಾಡಿನಲ್ಲಿ ಕೂಂಬಿಂಗ್ ನಡೆಸಿದ್ದ ಎಎನ್‌ಎಫ್‌ ಸಿಬ್ಬಂದಿ

ಯಾರೂ ನಂಬಲಿಲ್ಲ; ಹೋರಾಟವೂ ಉಳಿಯಲಿಲ್ಲ

‘ಬಂದೂಕು ಹಿಡಿದು ನಡೆಸುವ ಹೋರಾಟದ ಬಗ್ಗೆ ನಮಗೆ ನಂಬಿಕೆ ಇರಲಿಲ್ಲ. ಪ್ರಜಾಸತ್ತಾತ್ಮಕ ಚಳವಳಿಯ ಮೂಲಕವೇ ನ್ಯಾಯ ಕೇಳುವ ಹಾದಿಯನ್ನು ನಾನು ನಂಬಿದ್ದೆ. ಆದರೆ ನನ್ನನ್ನು ಪೊಲೀಸರು ನಂಬಲಿಲ್ಲ ಕಾಡಿಗೆ ಹೋದ ಗೆಳೆಯರೂ ನೆನಪಿಸಿಕೊಳ್ಳಲಿಲ್ಲ’ ಎಂದು ಕಲ್ಕುಳಿ ವಿಠಲ ಹೆಗಡೆ ಬೇಸರ ವ್ಯಕ್ತಪಡಿಸಿದರು.

‘ನಮ್ಮೊಂದಿಗೆ ಹೋರಾಟದಲ್ಲಿ ಇದ್ದವರು ಒಬ್ಬೊಬ್ಬರಾಗಿ ಕಾಣೆಯಾದರು. ಬಂದೂಕು ಹಿಡಿದು ಕಾಡು ಸೇರಿದ್ದಾರೆ ಎಂಬುದು ಎಷ್ಟೋ ದಿನಗಳ ನಂತರ ಗೊತ್ತಾಯಿತು. ಆದರೆ ಪೊಲೀಸರು ನನಗೆ ಎಲ್ಲವೂ ಗೊತ್ತಿದೆ ನಾನೇ ಎಲ್ಲರನ್ನು ಕಳಿಸಿದ್ದೇನೆ ಎಂಬಂತೆ ಕಾಡಿದರು. ಇನ್ನೇನು ಎನ್‌ಕೌಂಟರ್ ಮಾಡಿಯೇ ಬಿಡುತ್ತಾರೆ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿತ್ತು’ ಎಂದರು.

‘ಈಗ ಎಲ್ಲವೂ ಮುಗಿದು ಸಮಾಧಾನದ ಹಂತದಲ್ಲಿದ್ದೇವೆ. 25 ವರ್ಷಗಳ ಕಾಲ ಇದೇ ಕಿರುಕುಳದಲ್ಲಿ ಜೀವನ ಕಳೆದು ಹೋಗಿದೆ. ಪ್ರಜಾಸತ್ತಾತ್ಮಕ ಹೋರಾಟಕ್ಕೂ ಇದು ಅಡ್ಡಿಯಾಯಿತು’ ಎಂದರು. ‘ನಕ್ಸಲ್ ಹೋರಾಟದ ಉದ್ದೇಶ ಅವರ ಬೇಡಿಕೆ ಬಗ್ಗೆ ಸಹಮತ ಇತ್ತು. ಆದರೆ ಸಶಸ್ತ್ರ ಹೋರಾಟದ ಬಗ್ಗೆ ನಮಗೆ ತಕರಾರಿತ್ತು. ಇನ್ನೊಂದೆಡೆ ನಕ್ಸಲ್ ಹೋರಾಟ ಜೀವಂತವಾಗಿದ್ದ ಅಷ್ಟೂ ದಿನ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಅವಕಾಶ ಇಲ್ಲದಂತೆ ಪ್ರಭುತ್ವ ಮಾಡಿತು’ ಎಂದು ಹೋರಾಟಗಾರ ಗುರುಮೂರ್ತಿ ಬೇಸರ ವ್ಯಕ್ತಪಡಿಸುತ್ತಾರೆ.

‘ಇಂತಹ ಸಂದಿಗ್ಧ ಸಂದರ್ಭದಲ್ಲಿ ನಕ್ಸಲರ ಗುಂಪು ಸೇರಬೇಕಿತ್ತು ಇಲ್ಲವೇ ಪೊಲೀಸರಿಗೆ ಮಾಹಿತಿದಾರರಾಗಿ ಕೆಲಸ ಮಾಡಬೇಕಿತ್ತು. ಇವರೆಡನ್ನೂ ಬಿಟ್ಟರೆ ಮೂರನೇ ಅವಕಾಶ ಇರಲಿಲ್ಲ. ಇವರೆಡೂ ನಮಗೆ ಇಷ್ಟ ಇರಲಿಲ್ಲ. ಇದರಿಂದಾಗಿ ಭೂಮಿಯ ಹಕ್ಕು ಪಡೆಯುವ ನಮ್ಮ ಹೋರಾಟಕ್ಕೆ ಹಿನ್ನೆಡೆಯಾಯಿತು. ಸಾಗುವಳಿದಾರರು ಭೂಮಿಯ ಹಕ್ಕುಪತ್ರ ಪಡೆಯಲು ಇಂದಿಗೂ ಸಾಧ್ಯವೇ ಆಗಿಲ್ಲ. ಮುಂದಿನ ದಿನಗಳಲ್ಲಿ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಹೋರಾಟ ಮುನ್ನಡೆಸುವ ಆಲೋಚನೆಗಳು ನಡೆಯಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.