
ಬೀರೂರು(ಕಡೂರು): ಬೀರೂರು ಹೊರವಲಯದ ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದ ಆವರಣದಲ್ಲಿ ಬುಧವಾರ ಅಮೃತಮಹಲ್ ತಳಿ ಹೋರಿಕರುಗಳ ವಾರ್ಷಿಕ ಹರಾಜು ಪ್ರಕ್ರಿಯೆ ಬಿರುಸಿನಿಂದ ನಡೆಯಿತು.
ಪ್ರತಿವರ್ಷ ಜನವರಿ ತಿಂಗಳ ಮೂರನೇ ಬುಧವಾರ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ರಾಜ್ಯದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಮೈಸೂರು ಮೊದಲಾದ ಕಡೆಗಳಿಂದ ಕೃಷಿಕರು ಮತ್ತು ಪಶು ಸಾಕಣೆಯಲ್ಲಿ ಆಸಕ್ತಿ ಹೊಂದಿರುವ ನೂರಾರು ರೈತರು ಭಾಗವಹಿಸಿದ್ದರು. ಬಾಸೂರು ಕಾವಲಿನ ‘ಬಿ.18-39 ಮಸಣಿ’ ಬೀಜದ ಹೋರಿ ₹2.32 ಲಕ್ಷಕ್ಕೆ ಶಿವಮೊಗ್ಗ ತಾಲ್ಲೂಕು ಕಪ್ಪನಹಳ್ಳಿಯ ರವಿಕುಮಾರ್ ಎಂಬುವರಿಂದ ಕೂಗಲ್ಪಟ್ಟು ಅತಿಹೆಚ್ಚಿನ ಮೌಲ್ಯ ಪಡೆದ ಹಿರಿಮೆಗೆ ಪಾತ್ರವಾಯಿತು.
ಅಜ್ಜಂಪುರ ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದ ಅಡಿಯಲ್ಲಿ ಬರುವ ಚಿಕ್ಕಮಗಳೂರು ಜಿಲ್ಲೆಯ ಬಾಸೂರು, ಬಿಳುವಾಲ, ಲಿಂಗದಹಳ್ಳಿ, ಅಜ್ಜಂಪುರ, ಹಾಸನ ಜಿಲ್ಲೆಯ ಹಬ್ಬನಘಟ್ಟ, ಬಿದರೆ, ರಾಯಸಂದ್ರ, ಚಿತ್ರದುರ್ಗ ಜಿಲ್ಲೆಯ ರಾಮಗಿರಿ, ಚಿಕ್ಕಎಮ್ಮಿಗನೂರು ಮತ್ತು ಕೈನೋಡು ಉಪಕೇಂದ್ರಗಳಲ್ಲಿ ಪೋಷಿಸಲಾಗಿದ್ದ 170 ಹೋರಿಕರುಗಳು, 8 ಬೀಜದ ಹೋರಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು.
ಹರಾಜಿನ ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹೊಸೂರಿನ ಕೃಷಿಕ ವೀರೇಂದ್ರ ಪಾಟೀಲ್ ₹2,07,500ಕ್ಕೆ ಅಜ್ಜಂಪುರ ಕೇಂದ್ರದ ‘ಎ24-37 ಗಂಗೆ, ಎ24-40 ಗಾಳಿಕೆರೆ’ ಜೋಡಿ ಕರುಗಳನ್ನು ಬಿಡ್ ಮಾಡಿ ಪಡೆದು, ಜೋಡಿಕರುಗಳ ಅತಿ ಹೆಚ್ಚಿನ ಬಿಡ್‌ದಾರ ಎನಿಸಿ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ ವಿನೋದಪ್ರಿಯಾ ಅವರಿಂದ ಟ್ರೋಫಿ ಸ್ವೀಕರಿಸಿದರು.
ಸ್ಥಳೀಯ ಕೃಷಿಕರಿಗಿಂತ ಹಾವೇರಿ, ಹಿರೇಕೆರೂರು, ಶಿಕಾರಿಪುರ, ಮಾಸೂರು, ಈಸೂರು, ಬ್ಯಾಡಗಿ, ದಾವಣಗೆರೆ, ರಾಣಿಬೆನ್ನೂರು, ತಿಪಟೂರು, ಚನ್ನರಾಯಪಟ್ಟಣ, ಅರಸೀಕೆರೆ ಮೊದಲಾದ ಕಡೆಗಳಿಂದ ಬಂದಿದ್ದ ಆಸಕ್ತ ಪಶು ಸಂಗೋಪಕರು ಹರಾಜಿನಲ್ಲಿ ಹುರುಪಿನಿಂದ ಭಾಗವಹಿಸಿದ್ದರು. ಕರುಗಳು ತೋರುತ್ತಿದ್ದ ಚಟುವಟಿಕೆಯಿಂದಲೇ ಅವುಗಳ ಸಾಮರ್ಥ್ಯ ಗುರುತಿಸಿ, ಅವುಗಳಿಗೆ ಬೆಲೆ ಕಟ್ಟುವಲ್ಲಿ ಬಿಡ್‌ದಾರರು ಮುಂದಾದರೆ, ಅವರನ್ನು ಪ್ರೋತ್ಸಾಹಿಸುವಂತೆ ರೈತರು ಕೇಕೆ, ಸೀಟಿ ಹಾಕುತ್ತಾ ಕರುಗಳಿಗೆ ಮತ್ತು ಹರಾಜು ಕೂಗುವವರಿಗೆ ಉತ್ತೇಜನ ನೀಡುತ್ತಿದ್ದರು. ತಳಿ ಸಂವರ್ಧನಾ ಕೇಂದ್ರದ ಅಧಿಕಾರಿಗಳು ಮೈಕ್ ಹಿಡಿದು ಗ್ರಾಮ್ಯಭಾಷೆಯಲ್ಲಿ ಬಿಡ್‌ದಾರರ ಕಾಲೆಳೆಯುತ್ತಿದ್ದುದು, ಉತ್ತೇಜಿತರಾದ ಕೃಷಿಕರು ಮೊತ್ತ ಹೆಚ್ಚಿಸಲು ಪೈಪೋಟಿ ನಡೆಸುವುದು ಕುತೂಹಲಕಾರಿಯಾಗಿತ್ತು.
ಶಿಕಾರಿಪುರದ ಈಸೂರಿನ ಬಸವರಾಜು ₹2,03,500ಕ್ಕೆ ಅಜ್ಜಂಪುರ ಕೇಂದ್ರದ ಹೋರಿಕರುಗಳಾದ ‘ಎ24-25 ಬಣ್ಣದ ಸರ, ಎ24-35ಗಾಳಿಕೆರೆ’ ಜೋಡಿಯನ್ನು ಪಡೆದು 2ನೇ ಅತಿಹೆಚ್ಚಿನ ಬಿಡ್‌ದಾರ ಎನಿಸಿದರೆ, ಹಾವೇರಿಯ ಮಲ್ಲನಗೌಡ ಶಿವನಗೌಡ ಅದೇ ಕೇಂದ್ರಕ್ಕೆ ಸೇರಿದ ‘ಎ24-17 ರಂಗನಾಥ, ಎ24-47 ಪಾತ್ರೆ’ ಜೋಡಿಯನ್ನು ₹1.85 ಲಕ್ಷಕ್ಕೆ ಪಡೆದು ಯಶಸ್ವಿ ಬಿಡ್‌ದಾರ ಎನಿಸಿದರು. ಸಾಕಷ್ಟು ಜೋಡಿಕರುಗಳು ₹1.50 ಲಕ್ಷದ ಆಸುಪಾಸಿನಲ್ಲಿ ಹರಾಜಾದವು. ಈ ಹಿಂದಿನ ವರ್ಷಗಳಲ್ಲಿ ಪಡೆದು ಸಾಕಿದ್ದ ಹಲವು ಹೋರಿಕರುಗಳನ್ನು ಹರಾಜು ಕೇಂದ್ರದ ಆವರಣದ ಬಳಿ ಹಲವು ರೈತರು ಮಾರಾಟಕ್ಕೆ ಇಟ್ಟಿದ್ದು, ಕೂಡಾ ಕಂಡುಬಂತು.
ಹರಾಜು ಪ್ರಕ್ರಿಯೆಯಲ್ಲಿ ಪಶುಸಂಗೋಪನಾ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ವಿನೋದಪ್ರಿಯಾ, ನಿರ್ದೇಶಕ ಪಿ.ಶ್ರೀನಿವಾಸ್, ಅಪರ ನಿರ್ದೇಶಕ ಡಾ.ಪ್ರಸಾದ್ ಮೂರ್ತಿ, ಜಂಟಿ ನಿರ್ದೇಶಕರಾದ ಡಾ.ಶಿವಣ್ಣ, ಡಾ.ಸಿದ್ದಗಂಗಂಗಯ್ಯ, ಡಾ.ಪ್ರಸನ್ನ ಕುಮಾರ್, ಅಪರ ನಿರ್ದೇಶಕ ಡಾ.ಪರಮೇಶ್ವರನಾಯ್ಕ, ಅಜ್ಜಂಪುರ ಕೇಂದ್ರದ ಉಪನಿರ್ದೇಶಕ ಡಾ. ಪ್ರಭಾಕರ್, ಬಾಸೂರು ಕೇಂದ್ರದ ಡಾ. ಕೆ.ಟಿ.ನವೀನ್, ಬಿಳುವಾಲ ಕಾವಲಿನ ಡಾ.ಪೃಥ್ವಿರಾಜ್, ಬೀರೂರು ಕೇಂದ್ರದ ಡಾ.ಗೌಸ್ ಮತ್ತು ಅಧಿಕಾರಿಗಳು, ಸಿಬ್ಬಂದಿ, ರೈತರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬೀರೂರು ಪೊಲೀಸರು ಭದ್ರತೆ ಒದಗಿಸಿದ್ದರು.
ಹರಾಜಿನಲ್ಲಿ ಭಾಗವಹಿಸಿದವರ ಊಟೋಪಚಾರಕ್ಕಾಗಿ ಹಲವು ಕ್ಯಾಂಟೀನ್, ಹಣ್ಣು, ಎಳನೀರು, ಜ್ಯೂಸ್ ಅಂಗಡಿಗಳು, ಕಡ್ಲೆಗಿಡ ಮಾರಾಟ ಭರದಿಂದ ಕಾರ್ಯನಿರ್ವಹಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.