ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎರಡೂ ಜವಳಿ ಪಾರ್ಕ್ ತಲೆ ಎತ್ತುವ ಕಾಲ ಹತ್ತಿರವಾಗಿದೆ. ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಜಾಗ ಗುರುತಿಸಿದ್ದು, ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದೆ.
ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಹಿರೇಗೌಜ ಮತ್ತು ಕಡೂರು ತಾಲ್ಲೂಕಿನ ಚೀಲನಹಳ್ಳಿ ಗ್ರಾಮದ ಬಳಿ ಜವಳಿ ಪಾರ್ಕ್ ಸ್ಥಾಪನೆಯಾಗಲಿವೆ. ಎರಡೂ ಕಡೆ ಜಾಗ ಗುರುತಿಸಿ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿತ್ತು.
ಮಾರ್ಗಸೂಚಿಗಳ ಪ್ರಕಾರ ಪಿಪಿಪಿ (ಖಾಸಗಿ ಸಹಭಾಗಿತ್ವದಲ್ಲಿ) ಮಾದರಿಯಲ್ಲಿ ಎರಡೂ ಕಡೆ ಏಕಕಾಲಕ್ಕೆ ಜವಳಿ ಪಾರ್ಕ್ ಸ್ಥಾಪಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ(ಜವಳಿ) ಅನುಮೋದನೆ ನೀಡಿದೆ. ಈ ಯೋಜನೆಯ ಮುಂದಿನ ಪ್ರಕ್ರಿಯೆ ಆರಂಭಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಭಿವೃದ್ಧಿ ಆಯುಕ್ತರಿಗೆ ಕೈಗಾರಿಕೆ ಇಲಾಖೆ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಹಿರೇಗೌಜ ಸರ್ವೆ ನಂಬರ್‌ನಲ್ಲಿ 15 ಎಕರೆ, ಕಡೂರು ತಾಲ್ಲೂಕಿನ ಚೀಲನಹಳ್ಳಿ ಬಳಿ 25 ಎಕರೆಯ ಸರ್ಕಾರಿ ಜಾಗವನ್ನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಜಿಲ್ಲಾಧಿಕಾರಿ ವರ್ಗಾಯಿಸಿದ್ದರು. ಬಳಿಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಉದ್ದೇಶಿತ ಜವಳಿ ಪಾರ್ಕ್ ಯೋಜನೆಯನ್ನು ಮೂರು ವರ್ಷಗಳಲ್ಲಿ ಆರಂಭಿಸಬೇಕು. ಜವಳಿ ಪಾರ್ಕ್ ಹೊರತಾಗಿ ಬೇರೆ ಉದ್ದೇಶಕ್ಕೆ ಜಾಗ ಬಳಕೆ ಮಾಡುವಂತಿಲ್ಲ. ಈ ಯೋಜನೆ ಅನುಷ್ಠಾನ ಮಾಡದಿದ್ದರೆ ಅಷ್ಟೂ ಜಾಗವನ್ನು ಕಂದಾಯ ಇಲಾಖೆಗೆ ಹಿಂದಿರುಗಿಸಬೇಕು. ಪರಭಾರೆ ಮಾಡುವುದು, ಬೇರೆ ಉದ್ದೇಶಕ್ಕೆ ತಾತ್ಕಾಲಿಕ ಹಕ್ಕು ನೀಡುವುದನ್ನು ಮಾಡುವಂತಿಲ್ಲ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದರು.
ಈಗ ಅನುಮೋದನೆ ದೊರೆತಿದ್ದು, ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಜವಳಿ ಇಲಾಖೆಯ ಟೆಂಡರ್ ಪ್ರಕ್ರಿಯೆ ನಡೆಸಲಿದೆ. ಭೂಮಿ, ನೀರು ಮತ್ತು ವಿದ್ಯುತ್ ಸೌಕರ್ಯವನ್ನು ಸರ್ಕಾರ ಒದಗಿಸಲಿದೆ. ಕಟ್ಟಡ ಸೇರಿ ಉಳಿದ ಮೂಲ ಸೌಕರ್ಯಗಳನ್ನು ಜವಳಿ ಪಾರ್ಕ್ ಸ್ಥಾಪಿಸಲು ಬಯಸುವ ಖಾಸಗಿ ಕಂಪನಿಯೇ ಮಾಡಿಕೊಳ್ಳಬೇಕಿದೆ.
ಅಷ್ಟೂ ಜಾಗವನ್ನು ಒಂದೇ ಕಂಪನಿ ವಹಿಸಿಕೊಂಡು ಜವಳಿ ಘಟಕಗಳನ್ನು ಸ್ಥಾಪಿಸಲು ಮುಂದೆ ಬಂದರೆ ಒಂದೇ ಕಂಪನಿಗೆ ದೊರಕಲಿದೆ. ಇಲ್ಲದಿದ್ದರೆ ಜವಳಿ ಕೈಗಾರಿಕೆಗಳ ಆಸಕ್ತಿ ಆಧರಿಸಿ ಭೂಮಿ ಹಂಚಿಕೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕನಿಷ್ಠ 8 ಸಾವಿರ ನೇರ ಉದ್ಯೋಗ
ಹಿರೇಗೌಜ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಜಾಗ ಗುರುತಿಸಲಾಗಿದೆ. ಜವಳಿ ಪಾರ್ಕ್ ನಿರ್ಮಾಣವದರೆ ಗಾರ್ಮೆಂಟ್ಸ್ ಕಾರ್ಖಾನೆಗಳು, ಸಿದ್ಧ ಉಡುಪಿ ತಯಾರಿಕಾ ಘಟಕಗಳು ತಲೆ ಎತ್ತಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ದೊರಕುವ ಸಾಧ್ಯತೆ ಇದೆ. ಕನಿಷ್ಠ 3 ಸಾವಿರ ಜನರಿಗೆ ನೇರ ಉದ್ಯೋಗ ದೊರಕಲಿದೆ ಎಂದು ಅಂದಾಜಿಸಲಾಗಿದೆ. ಕಾರ್ಖಾನೆಗಳು ನಿರ್ಮಾಣವಾದರೆ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೇ, ಸುತ್ತಮುತ್ತಲ ಜಮೀನಿಗೆ ಉತ್ತಮ ಬೆಲೆ ಕೂಡ ಬರಲಿದೆ. ಚಿಕ್ಕಮಗಳೂರು ನಗರ ಕೂಡ ಪೂರ್ವಕ್ಕೆ ಬೆಳೆಯಲಿದೆ ಎಂದು ಸ್ಥಳೀಯರು ಹೇಳುತ್ತಾರೆ. ಚೀಲನಹಳ್ಳಿ ಬಳಿ 25 ಎಕರೆ ಜಾಗ ನಿಗದಿ ಮಾಡಿರುವುದರಿಂದ 5 ಸಾವಿರಕ್ಕೂ ಹೆಚ್ಚಿನ ಜನರಿಗೆ ನೇರ ಉದ್ಯೋಗ ದೊರಕುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.