ADVERTISEMENT

ಚಿಕ್ಕಮಗಳೂರು: ಕಾಫಿ ತೋಟಗಳಲ್ಲಿ ಬಿಳಿ ಕಾಂಡಕೊರಕ ಹುಳ ಬಾಧೆ

ಗಿರಿ ಶ್ರೇಣಿ ಭಾಗ: ಅರೇಬಿಕಾ ಕಾಫಿ ತೋಟ

ಬಿ.ಜೆ.ಧನ್ಯಪ್ರಸಾದ್
Published 28 ಜುಲೈ 2020, 16:21 IST
Last Updated 28 ಜುಲೈ 2020, 16:21 IST
ಚಿಕ್ಕಮಗಳೂರಿನ ಗಿರಿಶ್ರೇಣಿಯ ಕಲ್ಲೇದೇವರಪುರ ಬಳಿಯ ಎಸ್ಟೇಟ್‌ವೊಂದರಲ್ಲಿ ಬಿಳಿ ಕಾಂಡ ಕೊರಕ ಹುಳ ಬಾಧಿತ ಗಿಡಗಳನ್ನು ಮಂಗಳವಾರ ಸುಡುತ್ತಿರುವುದು.
ಚಿಕ್ಕಮಗಳೂರಿನ ಗಿರಿಶ್ರೇಣಿಯ ಕಲ್ಲೇದೇವರಪುರ ಬಳಿಯ ಎಸ್ಟೇಟ್‌ವೊಂದರಲ್ಲಿ ಬಿಳಿ ಕಾಂಡ ಕೊರಕ ಹುಳ ಬಾಧಿತ ಗಿಡಗಳನ್ನು ಮಂಗಳವಾರ ಸುಡುತ್ತಿರುವುದು.   

ಚಿಕ್ಕಮಗಳೂರು: ಅರೇಬಿಕಾ ಕಾಫಿ ತೋಟಗಳಲ್ಲಿ ಈಗ ಬಿಳಿ ಕಾಂಡ ಕೊರಕ ಹುಳದ ಹಾವಳಿ ವಿಪರೀತವಾಗಿದೆ. ಹುಳ ತಗುಲಿರುವ ಗಿಡಗಳನ್ನು ಕಡಿದು ಸುಡಲಾಗುತ್ತಿದೆ.

ಮಲ್ಲಂದೂರು, ಕಬ್ಬಿನಹಳ್ಳಿ, ಹಿರೇಕೊಳಲೆ, ಸಂತವೇರಿ, ಗಿರಿ ಶ್ರೇಣಿ ಸಹಿತ ಈ ಭಾಗದ ವಿವಿಧೆಡೆಗಳಲ್ಲಿ ಅರೇಬಿಕಾ ಕಾಫಿ ತೋಟಗಳು ಇವೆ. ಈ ಹುಳದ ಕಾಟ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

‘ಈ ಬಾರಿ ಮಳೆ ಸ್ವಲ್ಪ ಕಡಿಮೆಯಾಗಿದೆ. ನೆಲದಲ್ಲಿ ತೇವಾಂಶ ಕಡಿಮೆ ಇದೆ. ಹೀಗಾಗಿ, ಹುಳದ ಹಾವಳಿ ಜಾಸ್ತಿಯಾಗಿದೆ. ತೇವಾಂಶ ಇದ್ದರೆ ಅದು ಸಾಯುತ್ತದೆ. ಗಿಡಗಳನ್ನು ಕಡಿದು ಸುಡುವುದು ಬಿಟ್ಟರೆ ಪರಿಹಾರ ಇಲ್ಲ. ಬೆಳೆ ಕೈಗೆ ಸಿಗಲ್ಲ’ ಎಂದು ಹಿರೇಕೊಳಲೆಯ ಕಾಫಿ ಬೆಳೆಗಾರ ಎ.ಎಸ್‌.ಶಂಕರೇಗೌಡ ಸಂಕಷ್ಟ ಹೇಳಿಕೊಂಡರು.

ADVERTISEMENT

‘ಅರೇಬಿಕಾ ಗಿಡಗಳನ್ನು ಪದೇಪದೇ ನೆಟ್ಟು ಬೆಳೆಸುವುದೇ ಸವಾಲು. ಈ ತಳಿಗೆ ಬಿಳಿ ಕಾಂಡ ಕೊರಕ ಹುಳದ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ಬೆಳೆಗಾರರು ರೊಬೊಸ್ಟಾ ಕಾಫಿ ಗಿಡ ಬೆಳೆಯುವ ಕಡೆಗೆ ವಾಲುತ್ತಿದ್ದಾರೆ. ನಾವೂ ರೊಬೊಸ್ಟಾ ಪರಿವರ್ತನೆ ಕಡೆಗೆ ಹೆಜ್ಜೆ ಇಟ್ಟಾಗಿದೆ’ ಎಂದರು.

ತೋಟಗಳಲ್ಲಿ ಫಸಲು ಇದೆ. ಆದರೆ, ಈ ಹುಳದ ಬಾಧೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹುಳ ಬಾಧಿಸಿದ ಗಿಡಗಳನ್ನು ಸುಟ್ಟುಹಾಕಿ ಇತರ ಗಿಡಗಳನ್ನು ಕಾಪಾಡಿಕೊಳ್ಳುವುದರಲ್ಲಿ ಬೆಳೆಗಾರರು ನಿರತರಾಗಿದ್ದಾರೆ.

‘ಅರೇಬಿಕಾ ಕಾಫಿ ತೋಟಗಳಲ್ಲಿ ಬಿಳಿ ಕಾಂಡ ಕೊರಕದ ಹುಳದ ಬಾಧೆ ಇದೆ. ಬೆಳೆಗಾರರು ಅನುಸರಿಸಬೇಕಾದ ಕ್ರಮಗಳ ಕುರಿತು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಸಲಹೆಗಳನ್ನು ನೀಡಿದ್ದೇವೆ’ ಎಂದು ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ವೈ. ರಘುರಾಮುಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೂನ್‌ ಅಂತ್ಯ, ಜುಲೈ, ಆಗಸ್ಟ್‌ನಲ್ಲಿ ನಿರಂತರವಾಗಿ ಮಳೆಯಾದರೆ ಈ ಹುಳದ ಬಾಧೆ ಇರಲ್ಲ. ಈ ಬಾರಿ ಮಳೆ, ಬಿಸಿಲು ಇದೆ. ತೋಟವನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಮುಖ್ಯ’ ಎಂದರು.

ಹುಳುವು ತೋಟಗಳಿಗೆ ಕಂಟಕವಾಗಿ ಪರಿಣಿಮಿಸಿದೆ. ಇದರಿಂದ ಈ ಭಾಗದಲ್ಲಿ ಭವಿಷ್ಯದಲ್ಲಿ ಅರೇಬಿಕಾ ತೋಟಗಳೇ ನಶಿಸುವ ಸಾಧ್ಯತೆ ಇದೆ ಎಂಬುದು ಬೆಳೆಗಾರರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.