ADVERTISEMENT

ಅಡಿಕೆ ಸಾಗಾಟದ ವಾಹನ ತಡೆದು ಹಲ್ಲೆ: 44 ಕ್ವಿಂಟಾಲ್ ಹಸಿ ಅಡಿಕೆ ದರೋಡೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:46 IST
Last Updated 14 ಡಿಸೆಂಬರ್ 2025, 7:46 IST
   

ನರಸಿಂಹರಾಜಪುರ: ಬಾಳೆಹೊನ್ನೂರು– ನರಸಿಂಹರಾಜಪುರ ಮಧ್ಯೆ ಇರುವ ಅಳೇಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಡಿಕೆ ಸಾಗಾಟದ ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿ, 44 ಕ್ವಿಂಟಾಲ್ ಹಸಿ ಅಡಿಕೆ ಸಹಿತ ಹಣವನ್ನು ಶುಕ್ರವಾರ ರಾತ್ರಿ ದೋಚಲಾಗಿದೆ.

ಘಟನೆಯ ವಿವರ: ಕಳಸ ತಾಲ್ಲೂಕು ಹೆಮ್ಮಕ್ಕಿ ಗ್ರಾಮದ ಭದ್ರಾ ಸೈಟ್ ನಿವಾಸಿ ಅಡಿಕೆ ಚೇಣಿ ವ್ಯಾಪಾರ ಮಾಡುವ ಕೆ.ರವಿ ಎಂಬುವರು ಕಳಸ ಸಮೀಪದ ಕಾರ್‌ಗದ್ದೆ ಸಂತೋಷ್ ಗೌಡ ಅವರಿಂದ ಹಸಿ ಅಡಿಕೆ ಖರೀದಿಸಿ ಪಿಕಪ್ ವಾಹನದಲ್ಲಿ 67 ಚೀಲ ಅಡಿಕೆ ಕಾಯಿಗಳನ್ನು ತುಂಬಿಕೊಂಡು ಭದ್ರಾವತಿ ಕಡೆಗೆ ಚಾಲಕ ವಿಶ್ವಾ‌ಸ್‌ ಅವರೊಂದಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಬಾಳೆಹೊನ್ನೂರಿನಿಂದ ರಾತ್ರಿ 10ಕ್ಕೆ ಹೊರಟು ಅಳೇಹಳ್ಳಿ ಗ್ರಾಮದ ಸಮೀಪ ಬಂದಾಗ ಬಾಳೆಹೊನ್ನೂರಿನಿಂದಲೇ ಹಿಂಬಾಲಿಸುತ್ತಿದ್ದ ಪಿಕಪ್ ವಾಹನವು ಅಡಿಕೆ ತುಂಬಿದ್ದ ವಾಹನದ ಮುಂದೆ ನಿಲ್ಲಿಸಿ ತಡೆದಿದ್ದಾರೆ. ಪಿಕಪ್‌ನಲ್ಲಿದ್ದ ಮೂವರಲ್ಲಿ ಇಬ್ಬರು ಅಡಿಕೆ ಕೊನೆ ಕೊಯ್ಯುವ ಕತ್ತಿ ಮತ್ತು ಒಂದು ಕಬ್ಬಿಣದ ಸಲಾಕೆ ಹಿಡಿದುಕೊಂಡು ಇಳಿದು ಬಂದಿದ್ದಾರೆ. ಅದೇ ಸಮಯದಲ್ಲಿ ಒಂದು ಕೆಂಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಇಬ್ಬರು ಬಾಳೆಹೊನ್ನೂರು ಕಡೆಯಿಂದ ಬಂದಿದ್ದು, ಒಬ್ಬ ಕತ್ತಿ ಹಿಡಿದುಕೊಂಡು ಬಂದಾಕ್ಷಣ ರವಿ ಅವರು ವಾಹನದ ಗ್ಲಾಸ್ ಹಾಕಿ ಅದರಲ್ಲಿ ಕುಳಿತುಕೊಂಡಿದ್ದರು.

ADVERTISEMENT

ಪಿಕಪ್ ಮತ್ತು ಬೈಕ್‌‌ನಲ್ಲಿ ಬಂದವರು ರವಿ ಅವರ ವಾಹನದ ಬಾಗಿಲಿನ ಗಾಜು ಒಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಾಹನದಿಂದ ಇಳಿಸಲು ಪ್ರಯತ್ನಿಸಿದ್ದಾರೆ. ಆಗ ತಪ್ಪಿಸಿಕೊಳ್ಳಲು ರವಿ ಎರಡೂ ಕೈಗಳನ್ನು ಅಡ್ಡ ಹಿಡಿದಾಗ ಗಾಯಗೊಂಡರು. ಒಬ್ಬ ಸಲಾಕೆಯಿಂದ ಬಲ ಪಕ್ಕೆಗೆ ಗುದ್ದಿ ವಾಹನದ ಬೀಗವನ್ನು ಕಿತ್ತುಕೊಂಡ. ಬಳಿಕ ವಾಹನದಿಂದ ಕೆಳಗೆ ಎಳೆದು ರವಿ ಅವರ ಜೇಬಿನಲ್ಲಿದ್ದ ₹29 ಸಾವಿರ ನಗದು ಹಾಗೂ ಮೊಬೈಲ್ ಫೋನ್‌ನನ್ನು ಕಿತ್ತುಕೊಂಡರು. ವಿಶ್ವಾಸ್‌ ಅವನ ಎದೆಗೆ ಹಲ್ಲೆ ಮಾಡಿ ಮೊಬೈಲ್‌ ಫೋನ್‌ ಹಾಗೂ ಜೇಬಿನಲ್ಲಿದ್ದ ಪಿಕಪ್ ವಾಹನದ ಇನ್ನೊಂದು ಬೀಗವನ್ನು ಕಿತ್ತುಕೊಂಡು ಜೀವ ಬೆದರಿಕೆ ಹಾಕಿ ಪಿಕಪ್ ವಾಹನದ ಮುಂಭಾಗದಲ್ಲಿ ಕೂರಿಸಿ ರವಿ ಅವರ ಕುತ್ತಿಗೆಯ ಬಳಿಗೆ ಕತ್ತಿಯನ್ನು ಹಿಡಿದುಕೊಂಡಿದ್ದರು. ವಿಶ್ವಾಸ್‌ನನ್ನು ಪಿಕಪ್ ವಾಹನದ ಹಿಂಭಾಗದಲ್ಲಿ ಕೂರಿಸಿಕೊಂಡಿದ್ದರು.

ನಂತರ, ಅವರು ಅಡಿಕೆ ತುಂಬಿದ ವಾಹನ ಹಾಗೂ ಅವರ ವಾಹನವನ್ನು ಚಲಾಯಿಸಿಕೊಂಡು ಬಿ.ಎಚ್. ಕೈಮರ ಮಾರ್ಗವಾಗಿ ಕುದುರೆಗುಂಡಿಯ ಕಡೆಗೆ ಹೋಗಿ ಒಂದು ಕಾಡುದಾರಿಯಲ್ಲಿ ನಿಲ್ಲಿಸಿದರು. ಬಳಿಕ, ರವಿ ಹಾಗೂ ವಿಶ್ವಾಸ ಅವರನ್ನು ವಾಹನದಿಂದ ಇಳಿಸಿ ಇಬ್ಬರ ಕೈಗಳನ್ನು ಕಟ್ಟಿ ಬೆದರಿಸಿ ಪಿಕಪ್ ವಾಹನದಲ್ಲಿದ್ದ ಅಡಿಕೆ ಚೀಲಗಳನ್ನು ಅವರ ವಾಹನಕ್ಕೆ ತುಂಬಿಸಿಕೊಂಡರು. ಒಬ್ಬ ರವಿ ಅವರ ಪಿಕಪ್ ಚಾಲನೆ ಮಾಡಿಕೊಂಡು ಮುಂದೆ ಹೋಗಿದ್ದು, ಅದರ ಹಿಂದೆ ಒಬ್ಬ ಬೈಕಿನಲ್ಲಿ ಹೋದ. ಸ್ವಲ್ಪ ಸಮಯ ಬಿಟ್ಟು ಇಬ್ಬರು ಬೈಕಿನಲ್ಲಿ ವಾಪಸ್‌ ಬಂದರು.

ಬೈಕಿನಲ್ಲಿದ್ದ ಇಬ್ಬರು ರವಿ ಅವರ ಬಳಿಯೇ ಕತ್ತಿ ಹಿಡಿದುಕೊಂಡು ನಿಂತಿದ್ದು, ಉಳಿದ ಮೂವರು ಅಡಿಕೆ ತುಂಬಿಸಿಕೊಂಡಿದ್ದ ಅವರ ಪಿಕಪ್ ವಾಹನದಲ್ಲಿ ನರಸಿಂಹರಾಜಪುರದ ಕಡೆಗೆ ಹೋದರು. ಅವರು ಹೋಗಿ ಸುಮಾರು 1 ಗಂಟೆ ನಂತರ, ರವಿ ಮತ್ತು ವಿಶ್ವಾಸ ಅವರ ಕೈಗಳಿಗೆ ಕಟ್ಟಿದ್ದ ಟವೆಲ್‌ ಮತ್ತು ದಾರವನ್ನು ಕತ್ತರಿಸಿ ರವಿ ಅವರ ಕೈಗಳಿಗೆ ಟವಲ್ ಕಟ್ಟಿ ಪಿಕಪ್ ವಾಹನದ ಬೀಗ ಕೊಟ್ಟು ಇಲ್ಲಿಂದ 200 ಮೀಟರ್ ದೂರದಲ್ಲಿ ನಿಮ್ಮ ಪಿಕಪ್ ಇದೆ. ಅದನ್ನು ತೆಗೆದುಕೊಂಡು ಹೋಗಿ, ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಹೆದರಿಸಿ ನಸುಕಿನ ಸುಮಾರು 1.30 ನಮ್ಮನ್ನು ಅಲ್ಲೇ ಬಿಟ್ಟು ಅವರು ಬೈಕ್‌ನಲ್ಲಿ ಹೋದರು. ಅವರು ಮಾತನಾಡುತ್ತಿರುವಾಗ ಮಂಜುನಾಥ, ಕಾಟೇಶ ಮತ್ತು ಕಾರ್ತಿಕ ಎಂದು ಹೇಳುತ್ತಿದ್ದರು ಎಂದು ರವಿ ತಿಳಿಸಿದ್ದಾರೆ.

ಅವರು ತೆಲುಗು ಮತ್ತು ತಮಿಳು ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಿದ್ದರು. ನಮ್ಮ ಬಳಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ನಾವು ಮುಂದೆ ನಡೆದುಕೊಂಡು ಬಂದಾಗ ಅಲ್ಲೇ ನಮ್ಮ ಪಿಕಪ್ ವಾಹನ ನಿಂತಿದ್ದು, ಅದನ್ನು ತೆಗೆದುಕೊಂಡು ನಾವು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದೇವೆ ಎಂದು ಕೆ.ರವಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.